ಕಾಪು: ಎಲ್ಲೂರು ಪರಿಸರದಲ್ಲಿ ಶನಿವಾರ ತಡರಾತ್ರಿ ಸುರಿದ ಭಾರೀ ಮಳೆ, ಗಾಳಿಗೆ ತೆಂಗಿನ ಮರವೊಂದು ಮನೆ ಮೇಲೆ ಉರುಳಿ ಬಿದ್ದು ಸುಮಾರು 6 ಲಕ್ಷ ರೂ. ಸೊತ್ತು ನಷ್ಟ ಸಂಭವಿಸಿದೆ.
ಎಲ್ಲೂರು ಗ್ರಾಮದ ಶರೀಫಾ ಅವರ ಮನೆಯ ಮೇಲೆ ತೆಂಗಿನ ಮರ ಉರುಳಿ ಬಿದ್ದು ಛಾವಣಿ, ವಿದ್ಯುತ್ ಉಪಕರಣಗಳು, ಗೃಹೋಪಯೋಗಿ ವಸ್ತುಗಳ ಸಹಿತ ಮನೆ ಸಂಪೂರ್ಣವಾಗಿ ಹಾನಿಗೀಡಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ಜಿ.ಪಂ. ಸದಸ್ಯೆ ಶಿಲ್ಪಾ ಸುವರ್ಣ ಅವರು ಭೇಟಿ ನೀಡಿದ್ದು, ಜಿ.ಪಂ.ನ ಗಮನಕ್ಕೆ ತಂದು ಸಂತ್ರಸ್ತರಿಗೆ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.
ಕಂದಾಯ ಅಧಿಕಾರಿ ರಾಮಕೃಷ್ಣ ನಾಯ್ಕ, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್, ಗ್ರಾ.ಪಂ. ಮಾಜಿ ಅಧ್ಯಕ್ಷ ವೈ. ಯಶವಂತ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸದಾಶಿವ ಶೆಟ್ಟಿ, ವಿಮಲಾ ದೇವಾಡಿಗ, ಗ್ರಾಮಕರಣಿಕ ಗಿರೀಶ್ ಡಿ.ಜಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸನಿಹದಲ್ಲೇ ಇರುವ ವೈ. ಸದಾನಂದ ರಾವ್ ಅವರ ಮನೆಯ ಮುಂಭಾಗದ ಸಿಮೆಂಟು ಶೀಟಿನ ಮೇಲೆ ಪಕ್ಕದ ಮನೆಯ ಹಲಸಿನ ಮರದ ಗೆಲ್ಲು ಮುರಿದು ಬಿದ್ದಿದ್ದು, ಮನೆಗಾಗಿರುವ ಹಾನಿಯನ್ನೂ ಪರಿಶೀಲಿಸಲಾಯಿತು.