ಚನ್ನರಾಯಪಟ್ಟಣ: ಸುಗ್ಗಿ ಹಬ್ಬ ಸಂಕ್ರಾಂತಿ ಸಮೀಪಿ ಸಿದ್ದು, ಪಟ್ಟಣ ಹಾಗೂ ತಾಲೂಕಿನ ಜನತೆ ಕೊರೊನಾ ಆತಂಕದ ನಡುವೆಯೂ ಸಡಗರದಿಂದ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಎಳ್ಳು-ಬೆಲ್ಲ, ಕಡಲೆ ಬೀಜ, ಕಡಲೇಪಪ್ಪು, ಕೊಬ್ಬರಿ, ಜೀರಿಗೆ, ಪೆಪ್ಪರ ಮೆಂಟ್ ಸೇರಿ ಹಬ್ಬಕ್ಕೆ ಬೇಕಾದ ದಿನಸಿ ಸಾಮಗ್ರಿಗಳು ಮಾರುಕಟ್ಟೆಗೆ ಆಗಮಿಸಿದ್ದು, ಕಳೆದ ಬಾರಿಗಿಂತ 10 ರಿಂದ 15 ರೂ. ವರೆಗೂ ದರ ಏರಿಸಿಕೊಂಡಿವೆ.
ಎಳ್ಳು ಬೆಲ್ಲ, ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಮಹಿಳೆಯರು ನಾಲ್ಕು ದಿನಗಳ ಮುಂಚಿತವಾಗಿಯೇ ಖರೀದಿ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ವ್ಯಾಪಾರ ಗರಿಗೆದರಿದೆ. ಇನ್ನು ಹಲವು ಮಂದಿ ಸಿದ್ಧಪಡಿಸಿರುವ ಎಳ್ಳು ಬೆಲ್ಲದ ಪೊಟ್ಟಣ ಖರೀದಿ ಮಾಡುವ ಮೂಲಕ ತಮ್ಮ ಕೆಲಸ ಸಲೀಸು ಮಾಡಿಕೊಳ್ಳುತ್ತಿದ್ದಾರೆ. ತಾಲೂಕು ಕಲ್ಪತರು ನಾಡಾಗಿದ್ದು, ಕೊಬ್ಬರಿ ಖರೀದಿ ಮಾಡುವವರ ಸಂಖ್ಯೆ ಕಡಿಮೆ ಇದೆ. ಆದರೂ, ಕೇಜಿ ಕೊಬ್ಬರಿ ದರ 145 ರಿಂದ 150 ರೂ. ಇದೆ.
ಸುಗ್ಗಿ ಸಂಭ್ರಮಕ್ಕೆ ಮಳೆ ಅಡ್ಡಿ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಬಾರಿ ರೈತರು ಸುಗ್ಗಿ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸುತ್ತಿದ್ದರು. ಆದರೆ, ಐದಾರು ದಿನದಿಂದ ಸುರಿಯುವ ತುಂತುರು ಮಳೆ, ಮೋಡಕವಿದ ವಾತಾವರಣ ಸುಗ್ಗಿ ಸಂಭ್ರಮಕ್ಕೆ ಅಡ್ಡಿಯಾಗಿದೆ. ಇನ್ನೂ ಭತ್ತ, ರಾಗಿ, ಇತರೆ ಬೆಳೆಗಳ ಒಕ್ಕಣೆ ಬಾಕಿ ಇರುವ ಕಾರಣ ರೈತರು ಆ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಒಂದು ವೇಳೆ ಮಳೆ ಬಿಡುವುಕೊಟ್ಟಿದ್ದರೆ, ಒಕ್ಕಣೆ ಮಾಡಿರುವ ರಾಗಿ, ಭತ್ತದ ರಾಶಿಗೆ ಪೂಜೆ ಮಾಡಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ, ಈ ಬಾರಿ ಮನೆಗಷ್ಟೇ ಹಬ್ಬ ಸೀಮಿತವಾಗುವ ಸಾಧ್ಯತೆ ಹೆಚ್ಚಿದೆ.
ಬಣ್ಣದ ಅಚ್ಚು ಮಾರಾಟ: ಆರೋಗ್ಯಕ್ಕೆ ಹಾನಿಕರವಾದ ಬಣ್ಣ ಬಳಸಿ ಜೀರಿಗೆ ಪಪ್ಪು, ಸಕ್ಕರೆ ಅಚ್ಚು ತಯಾರು ಮಾಡಿ, ಮಾರಾಟ ಮಾಡಲಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಪುರಸಭೆ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆ, ಆಹಾರ ನಿರೀಕ್ಷಕರು ಇತ್ತ ಗಮನ ಹರಿಸಬೇಕಿದೆ.
ಶಾಮಸುಂದರ್ ಕೆ.ಅಣ್ಣೇನಹಳ್ಳಿ