Advertisement

ರೈತರ ಜೀವ ಹಿಂಡಿದ ಹಳದಿ ಎಲೆರೋಗ!

07:13 PM Nov 21, 2017 | Team Udayavani |

ಶೃಂಗೇರಿ: ವರ್ಷದ ಪ್ರಮುಖ ಆರ್ಥಿಕ ಬಲ ನೀಡುತ್ತಿದ್ದ ಅಡಕೆಗೆ ಬಂದಿರುವ ಹಳದಿ ಎಲೆ ರೋಗ ಮತ್ತಿತರ ಕಾಯಿಲೆಗಳು ಮಲೆನಾಡಿನ ರೈತರ ಜೀವನವನ್ನೇ ಕಿತ್ತುಕೊಂಡಿದೆ.

Advertisement

ಅಡಕೆಯ ಸುಗ್ಗಿ ಕಾಲ ಅಕ್ಟೋಬರ್‌ನಿಂದ ಡಿಸೆಂಬರ್‌ ಅಂತ್ಯದವರೆಗೂ ನಡೆಯುತ್ತಿದ್ದು, ರೈತರು, ಕಾರ್ಮಿಕರು ಬಿಡುವಿಲ್ಲದೇ ಅಡಕೆ
ಕೊಯಿಲಿನ ಕೆಲಸದಲ್ಲಿ ತಲ್ಲೀನರಾಗಿರುತ್ತಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಮಲೆನಾಡಿನ ಮನೆಗಳು ಎದುರು ಹಾಕುತ್ತಿದ್ದ ಅಡಕೆ
ಒಣಗಿಸುವ ಚಪ್ಪರಗಳೇ ನಾಪತ್ತೆಯಾಗುತ್ತಿದ್ದು, ರೈತರ ಮನೆಗಳಲ್ಲಿ ಭರದಿಂದ ನಡೆಯಬೇಕಿದ್ದ ಕೆಲಸಗಳಿಲ್ಲದೇ ಬಣಗುಟ್ಟುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ತಾಲೂಕಿನ ಬಹುತೇಕ ಅಡಕೆ ತೋಟಗಳಿಗೆ ವ್ಯಾಪಿಸಿರುವ ರೋಗಗಳಿಂದ ರೈತರು ಆರ್ಥಿಕ ತೊಂದರೆಗೆ ಸಿಲುಕುವಂತಾಗಿದೆ. ಸೆಪ್ಟೆಂಬರ್‌ ಅಂತ್ಯಕ್ಕೆ ಒಳ್ಳೆಯ ದಿನ ನೋಡಿಕೊಂಡು ಅಡಕೆ ತೆಗೆಯುವ ಮಹೂರ್ತ ಮಾಡಿಕೊಂಡು, ನಂತರ ಅಡಕೆ ಕೊಯಿಲು ಆರಂಭಿಸುವ ಪದ್ದತಿ ಇತ್ತು. ಅಡಕೆ ಒಣಗಿಸಲು ಮನೆಯ ಮುಂಭಾಗದಲ್ಲಿ ವಿಸ್ತಾರವಾದ ಅಡಕೆ ಚಪ್ಪರ ನಿರ್ಮಿಸಿ,ಅದರ ಮೇಲೆ ತಟ್ಟಿಗಳನ್ನು ಹಾಸಿ ಅಡಕೆ ಒಣಗಿಸುತ್ತಿದ್ದರು. ಕನಿಷ್ಠ ಅರ್ಧ ಎಕರೆ ಅಡಕೆ ತೋಟವಿರುವವರು ಸಹ 
ನೆಮ್ಮದಿಯ ಬದುಕು ನಡೆಸುತ್ತಿದ್ದರು. ರೋಗ ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಅಡಕೆ ಕೊಯಿಲು ಮಾಡಬೇಕಾದ ದಿನಗಳಲ್ಲಿ ಕೈ ಕಟ್ಟಿ ಕೂರುವಂತಾಗಿದೆ. ಇದರಿಂದ ರೈತರಿಗೆ ಆರ್ಥಿಕ ಮೂಲದ ಪೆಟ್ಟು ಬಿದ್ದಂತೆ, ಕಾರ್ಮಿಕರಿಗೂ ರಾತ್ರಿ ಅಡಕೆ ಸುಲಿದು ಗಳಿಸುತ್ತಿದ್ದ ಆದಾಯಕ್ಕೂ ಪೆಟ್ಟು ಬಿದ್ದಿದೆ.

ನೂರಾರು ವರ್ಷಗಳಿಂದ ಸಾಂಪ್ರಾದಾಯಿಕ ಬೆಳೆಯಾಗಿ ಅದನ್ನೇ ನಂಬಿಕೊಂಡಿದ್ದ ರೈತರ ಮನೆಗಳಲ್ಲಿ ಸೂತಕದ ವಾತವರಣ ಉಂಟಾಗಿದೆ. ಆರ್ಥಿಕ ಮೂಲಕ್ಕೆ ಪೆಟ್ಟು ಬಿದ್ದ ಪರಿಣಾಮ ಉದ್ಯೋಗವನ್ನರಸಿ ಕೃಷಿ ಕುಟುಂಬದ ಯುವಕರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಇತ್ತ ಮನೆಯಲ್ಲಿ ಪೋಷಕರು ಮಾತ್ರ ನೆಲಸುವಂತಾಗಿದೆ. ಇದರಿಂದ ಮಲೆನಾಡಿನ ಮನೆಗಳು ವೃದ್ಧಾಶ್ರಮವಾಗುತ್ತಿದೆ. ರೋಗ ಪೀಡಿತ ತೋಟಗಳಲ್ಲಿ ಇರುವ ಅಡಕೆ ಫಸಲನ್ನು ಕೊಯಿಲು ಮಾಡುವುದಕ್ಕಾಗಿ, ಔಷ ಧ ಸಿಂಪಡಣೆ
ಕೆಲಸಗಳಿಗೆ ಕಾರ್ಮಿಕರು ದೊರಕುತ್ತಿಲ್ಲ. ತೋಟದಲ್ಲಿ ಬರುವ ಅಡಕೆಯ ಗುಣಮಟ್ಟವೂ ಕುಸಿತದಿಂದ ಮಾರುಕಟ್ಟೆಯಲ್ಲಿ ಉತ್ತಮ
ಬೆಲೆಯೂ ದೊರಕುತ್ತಿಲ್ಲ.

ಅಡಕೆ ತೋಟಕ್ಕೆ ಬಂದಿರುವ ರೋಗದಿಂದ ವರ್ಷದಿಂದ ವರ್ಷಕ್ಕೆ ಫಸಲು ಕುಸಿತ ಕಂಡಿದ್ದು, ಇದೀಗ ಜೀವನ ನಿರ್ವಹಣೆಯೇ
ಕಷ್ಟಕರವಾಗಿದೆ. ಅಡಕೆ ಒಣಗಿಸಲು ಹಾಕುತ್ತಿದ್ದ ಚಪ್ಪರ, ತಟ್ಟಿ, ಬುಟ್ಟಿಗಳ ಅಗತ್ಯವಿಲ್ಲದೇ ಅದು ಹಾಳಾಗುತ್ತಿದೆ. ಆರ್ಥಿಕ ಮೂಲಕ್ಕಾಗಿ ನಗರಗಳತ್ತ ವಲಸೆ ಹೆಚ್ಚುತ್ತಿದೆ. ಸರಕಾರ ಒಮ್ಮೆ ಪರಿಹಾರ ನೀಡಿದರೂ,ಅದು ಶಾಶ್ವತ ಪರಿಹಾರವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಕೆ.ಎಂ.ಬಾಲಕೃಷ್ಣ, ಕೆಂಜಿಗೆರೆ.ಮಸಿಗೆ ಗ್ರಾಮ. 

ಇತ್ತೀಚಿನ ವರ್ಷದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಳದಿ ಎಲೆ ರೋಗವು ಮಲೆನಾಡಿನ ಆರ್ಥಿಕ ಮೂಲವೇ ಇಲ್ಲವಾಗಿಸಿದೆ.
ಬದಲಿ ಬೆಳೆಗಳನ್ನು ಬೆಳೆಯುತ್ತಿದ್ದರೂ, ನೆಮ್ಮದಿಯ ಜೀವನ ಈಗ ಕಷ್ಟವಾಗಿದೆ. ರೋಗದ ಸಂಶೋಧನೆಗಳು ವಿಫಲವಾಗಿದ್ದು, ರೈತರ ಬದುಕು ಕಷ್ಟವಾಗುತ್ತಿದೆ.

ಮುಂಡಗೋಡು ಶ್ರೀವಾಸಮೂರ್ತಿ, ಶೃಂಗೇರಿ.

Advertisement

ರಮೇಶ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next