ಕನ್ನಡ ಚಿತ್ರರಂಗದಲ್ಲೀಗ ಹೊಸಬರ ಆಗಮನದಿಂದ ಹೊಸ ಹಂಗಾಮವೆದ್ದಿದೆ. ಹೊಸತನ, ಪ್ರಯೋಗಶೀಲತೆ, ಭಿನ್ನ ವಿಭಿನ್ನ ಕಥಾನಗಳಿಂದ ಚಂದನವನಕ್ಕೆ ಹೊಸ ಮೆರಗು ಸಿಕ್ಕಿದೆ. ಅಂಥಹದ್ದೇ ವೇಗದಲ್ಲಿ ಯೆಲ್ಲೋ ಗ್ಯಾಂಗ್ ಸಿನಿಮಾ ಮೂಲಕ ಯುವ ನಿರ್ದೇಶಕರೋರ್ವರ ಆಗಮನವಾಗುತ್ತಿದೆ. ಯೋಗರಾಜ್ ಭಟ್ಟರ ಗರಡಿಯಲ್ಲಿ ಪಳಗಿರುವ ರವೀಂದ್ರ ಪರಮೇಶ್ವರಪ್ಪ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದು, ಈ ಸಿನಿಮಾ ಈಗ ಬೆಳ್ಳಿತೆರೆ ಎಂಟ್ರಿಗೆ ಸಿದ್ದವಾಗಿದೆ.
ಸದ್ದಿಲ್ಲದೇ ಸಿದ್ದವಾಗಿರುವ ”ಯೆಲ್ಲೋ ಗ್ಯಾಂಗ್ಸ್” ಸಿನಿಮಾ ಬಿಡುಗಡೆಗೆ ಅಣಿಯಾಗಿದೆ. ಬರುವ ನವೆಂಬರ್ 11ರಿಂದ ರಾಜ್ಯಾದ್ಯಂತ ಮೆರವಣಿಗೆ ಹೊರಡಲಿರುವ ಈ ಚಿತ್ರ ನಾನಾ ದೆಸೆಯಲ್ಲಿ ಕುತೂಹಲ ಹುಟ್ಟಿಸಿದೆ. ಪೋಸ್ಟರ್, ಟೀಸರ್ ಮೂಲಕ ಕಥೆಯ ಬಿರುಸು ಎಂತಹದ್ದು ಅನ್ನೋದು ತೋರಿಸಿಕೊಟ್ಟಿರುವ ಈ ಚಿತ್ರದಲ್ಲಿ ಪ್ರತಿಭಾನ್ವಿತ ಕಲಾಬಳಗವೇ ತುಂಬಿದೆ.
ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯ ರಂಗ, ವಿಠಲ್ ಪರೀಟ, ಉಮ್ಮತ್ತಾಲ್ ಸತ್ಯ, ವಿನೀತ್ ಕಟ್ಟಿ, ನಂದ ಗೋಪಾಲ್, ದಯಾ ನೀನಾಸಂ, ಹರ್ಷ, ಪ್ರವೀಣ್ ಕೆಬಿ, ರವಿ ಜಿಗಣಿ, ಮಲ್ಲಿಕಾರ್ಜುನ್, ಮಧುಸೂದನ್, ಪವನ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಯೆಲ್ಲೋ ಗ್ಯಾಂಗ್ಸ್ ರೆಗ್ಯೂಲರ್ ಸಿನಿಮಾವಲ್ಲ. ಮರ ಸುತ್ತುವ ಕಥೆಯಲ್ಲ.. ನಾಯಕ, ನಾಯಕಿ ಹಾಗೂ ವಿಲನ್ ಸುತ್ತ ನಡೆಯುವ ಸಿನಿಮಾವಲ್ಲ. ಇದೊಂದು ಹೊಸಬಗೆಯ ಚಿತ್ರ. ಪ್ರಯೋಗಾತ್ಮಕ ಸಿನಿಮಾವಾಗಿದ್ದು, ನಾರ್ಮಲ್ ಕಮರ್ಷಿಯಲ್ಗಿಂತ ಸಿನಿಮಾಕ್ಕಿಂತ ವಿಭಿನ್ನ ಸಿನಿಮಾವಿದು. 3-4 ಗ್ಯಾಂಗ್ಗಳಿದ್ದು, ಅವರಿಗೆ ಅವರದ್ದೇ ಆದ ಗುರಿಗಳಿರುತ್ತವೆ, ಡ್ರಗ್ ಡೀಲ್ನಿಂದ ಸಿಗುವ ಹಣ ಸಾಗಾಣಿಕೆಯಾಗುತ್ತಿರುತ್ತದೆ, ಇದೆಲ್ಲವೂ ಅಚ್ಚರಿದಾಯಕವಾಗಿ ನಡೆಯುತ್ತಾ ಸಾಗುವ, ಪ್ರತೀ ಕ್ಷಣವೂ ಥ್ರಿಲ್ಲಿಂಗ್ ಅನುಭವ ನೀಡುವ ಕಥಾನಕವಿದು ಎನ್ನುತ್ತಾರೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ. ಸಸ್ಪೆನ್ಸ್ ಜೊತೆಗೆ ಒಂದಷ್ಟು ಥ್ರಿಲ್ಲಿಂಗ್ ಅಂಶಗಳನ್ನು ಬೆರೆಸಿ ತಯಾರಿಸಿರುವ ಯೆಲ್ಲೋ ಗ್ಯಾಂಗ್ ಚಿತ್ರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ವಿಭಿನ್ನ ಸ್ಟುಡಿಯೋಸ್, ಕೀಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಯಡಿ ಮನೋಜ್ ಪಿ, ಜಿ.ಎಂ.ಆರ್ ಕುಮಾರ್, ಡಿ.ಎಸ್ ಪ್ರವೀಣ್ ಮತ್ತು ಜೆ ಎನ್ ವಿ ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಚಿತ್ರ ನಿರ್ಮಾಣ ಮಾಡಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ನಿರ್ವಹಿಸಿದ್ದು, ಸುಜ್ಞಾನ್ ಛಾಯಾಗ್ರಹಣ, ರೋಹಿತ್ ಸೋವರ್ ಸಂಗೀತ, ಸುರೇಶ್ ಆರ್ಮುಗಂ ಸಂಕಲನವಿದೆ.