ವರದಿ: ದತ್ತು ಕಮ್ಮಾರ
ಕೊಪ್ಪಳ: ಜಿಲ್ಲೆಯಲ್ಲಿ ಪ್ರಸ್ತಕ ವರ್ಷ ಮುಂಗಾರು ಉತ್ತಮವಾಗಿಯೇ ಆರಂಭವಾಗಿದ್ದು, ಆದರೆ ಎರೆ ಭಾಗದಲ್ಲಿ ಹೆಸರು ಬೆಳೆಗೆ ಕಳೆದ ಕೆಲವು ದಿನಗಳಿಂದ ಹಳದಿ ರೋಗ ಬಾಧೆಯು ಕಾಡಲಾರಂಭಿಸಿದೆ. ಏಷ್ಟೇ ಔಷಧಿ ಸಿಂಪರಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಮೊದಲೇ ಕೋವಿಡ್ ಹೊಡತಕ್ಕೆ ತತ್ತರಿಸುವ ಅನ್ನದಾತನು ರೋಗ ಬಾಧೆಗೆ ಕಂಗಾಲಾಗಿದ್ದಾನೆ.
ಪ್ರಸಕ್ತ ಪ್ರಸಕ್ತ ವರ್ಷದಲ್ಲಿ ಮುಂಗಾರು ಪೂರ್ವದಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ರೈತಾಪಿ ವಲಯ ತುಂಬ ಖುಷಿಯಲ್ಲಿದೆ. ಅದರಲ್ಲೂ ಎರೆ ಭಾಗದ ರೈತರು ಮುಂಗಾರು ಪೂರ್ವದಲ್ಲೇ ಹೆಸರು, ಮೆಣಸಿನ ಸಸಿ, ಉಳ್ಳಾಗಡ್ಡಿ ಬಿತ್ತನೆ ಮಾಡುವುದು ವಾಡಿಕೆ. ಈ ಬಾರಿ ಯಲಬುರ್ಗಾ, ಕುಕನೂರು ತಾಲೂಕು ಹಾಗೂ ಕುಷ್ಟಗಿಯ ಸ್ವಲ್ಪ ಭಾಗ, ಕೊಪ್ಪಳ ತಾಲೂಕಿನ ಅಳವಂಡಿ, ಹಿರೇ ಸಿಂಧೋಗಿಯ ಸ್ವಲ್ಪ ಭಾಗದಲ್ಲಿ ಇಂದಿಗೂ ಹೆಸರು ಬಿತ್ತನೆ ಮಾಡುತ್ತಾರೆ. ಅದರಂತೆ, ಕೃಷಿ ಇಲಾಖೆಯ ವಾಡಿಕೆಯಂತೆ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ.
ಬಿತ್ತನೆಯ ಮೊದಲು ಖುಷಿಯಲ್ಲೇ ಇದ್ದ ರೈತರಿಗೆ ಕೆಲವು ದಿನಗಳಿಂದ ಹೆಸರು ಬೆಳೆಯ ಎಲೆಯ ಮೇಲೆಲ್ಲಾ ಹಳದಿ ಬಣ್ಣಕ್ಕೆ ತಿರುಗುತ್ತಿರುವುದಕ್ಕೆ ಚಿಂತೆ ಮಾಡುವಂತಾಗಿದೆ. ಏಷ್ಟೇ ಔಷಧಿ ಸಿಂಪರಣೆ ಮಾಡಿದರೂ ರೋಗ ಬಾಧೆಯು ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ರೈತರಿಗೆ ದಿಕ್ಕೇ ತೋಚದಂತಾಗಿದೆ. ಯಾವ ಔಷಧಿ ಸಿಂಪರಣೆ ಮಾಡಬೇಕು ಎಂದು ಅವರಿಗೆ ತಿಳಿಯದಂತಾಗಿದೆ. ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಅಬ್ಬರ, ಲಾಕ್‌ಡೌನ್‌ನಿಂದಾಗಿ ರೈತರು ತುಂಬ ಸಂಕಷ್ಟ ಎದುರಿಸಿದ್ದಾರೆ.
ಕಷ್ಟ ಪಟ್ಟು ಬೆಳೆದ ಬೆಳೆಗೆ ಬೆಲೆಯೇ ಸಿಗದಂತಾಗಿ ನೊಂದಿದ್ದಾರೆ. ಬೆಲೆ ಸಿಗದೇ ಬಹುಪಾಲು ರೈತರು ಫಸಲನ್ನು ಹೊಲದಲ್ಲಿಯೇ ನಾಶ ಮಾಡಿದ್ದು ಹಲವೆಡೆ ನಡೆದಿವೆ. ಈ ಮಧ್ಯೆಯೂ ಮುಂಗಾರು ಪೂರ್ವದ ಮಳೆಗಳ ಭರವಸೆಯಿಂದ ಹೆಸರು ಬಿತ್ತನೆ ನಡೆದಿದ್ದು, ಕೊರೊನಾ ಬಾಧೆಯ ಮೇಲೆ ಹಳದಿ ರೋಗ ಬಾಧೆ ರೈತರನ್ನು ಜೀವ ಹಿಂಡುತ್ತಿದೆ. ವಿಜ್ಞಾನಿಗಳು ತಕ್ಷಣ ಸಲಹೆ ನೀಡಲಿ: ರೈತರ ಸಂಕಷ್ಟದ ಬಗ್ಗೆ ಕೂಡಲೇ ಕೃಷಿ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಎರೆ ಭಾಗಕ್ಕೆ ತೆರಳಿ ಹೆಸರು ಬೆಳೆಗೆ ಬಂದಿರುವ ಹಳದಿ ರೋಗದ ಬಗ್ಗೆ ತಿಳಿದು ತಕ್ಷಣ ಸಲಹೆ ಸೂಚನೆ ನೀಡಬೇಕಿದೆ. ಇದಲ್ಲದೇ ವಿಜ್ಞಾನಿಗಳ ತಂಡವೂ ರೈತರ ಜಮೀನಿಗೆ ಭೇಟಿ ನೀಡಿ ರೋಗ ಬಾಧೆಯ ನಿಯಂತ್ರಣಕ್ಕೆ ಯಾವ ಔಷ ಧಿ ಸಿಂಪರಣೆ ಮಾಡಬೇಕು. ಹೇಗೆಲ್ಲ ಹೆಸರು ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಕುರಿತು ರೈತರಿಗೆ ತಕ್ಷಣ ವಿಜ್ಞಾನಿಗಳು ಸಲಹೆ ನೀಡುವುದು ಅಗತ್ಯವಾಗಿದೆ.