Advertisement
ಹವಾಮಾನ ವೈಪರೀತ್ಯದಿಂದ ಹೆಸರು ಬೆಳೆ ಹಳದಿ ಎಲೆ ನಂಜು ರೋಗಕ್ಕೆ ಹಾಗೂ ಕೀಟಬಾಧೆಗೆ ತುತ್ತಾಗಿದ್ದು, ರೈತ ವಲಯದಲ್ಲಿ ಆತಂಕ ಶುರುವಾಗಿದೆ. ಹೆಸರು ಕಡಿಮೆ ವೆಚ್ಚ, ಅಲ್ಪಾವಧಿಯಲ್ಲಿಯೇ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದ್ದರಿಂದ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಮುಂಗಾರಿನ ಸಮಯದಲ್ಲಿ ಈ ಬೆಳೆಯನ್ನೇ ಬಿತ್ತನೆ ಮಾಡಿದ್ದಾರೆ. ಕೀಟ ಬಾಧೆ ಒಕ್ಕರಿಸಿ ಎಲೆಗಳು ಮುದುರಿಕೊಂಡಿವೆ. ಹೆಸರಿಗೆ ಜಿಗಿ ಹುಳು, ಹೇನು, ನಂಜು ರೋಗ ಹಾಗೂ ಬೂದಿ ರೋಗ ತಗುಲಿ ಬೆಳೆ ನೆಲಕಚ್ಚುತ್ತಿದೆ. ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತನ ಕನಸು ಕಮರುತ್ತಿದೆ.
Related Articles
Advertisement
ಹೊಲದಲ್ಲಿ ಹೆಸರು ಬೆಳೆ ಹಳದಿ ಬಣಕ್ಕೆ ತಿರುಗಿರುವುದು ಹಾಗೂ ಕೀಟಬಾಧೆಗೆ ತುತ್ತಾಗಿದ್ದರಿಂದ ಹಾಕಿದ ಬಂಡವಾಳ ವಾಪಸ್ ಬರತ್ತೋ ಇಲ್ಲವೋ ಎನ್ನೋ ಚಿಂತಿ ಆಗೈತಿ ಎನ್ನುವುದು ರೈತರ ಅಳಲು.
ರೋಗ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ. ತಾಲೂಕಿನ ನಾನಾ ಕಡೆಗಳಲ್ಲಿ ಖಾಸಗಿ ಅಂಗಡಿಯಲ್ಲಿ ಔಷಧ ಪಡೆದು ಸಿಂಪರಣೆ ಮಾಡುವ ಪ್ರಯತ್ನದಲ್ಲಿದ್ದಾರೆ. ಆದರೆ ಬಹುತೇಕ ರೈತರು ಯಾವ ಕ್ರಿಮಿನಾಶಕ ಸಿಂಪರಣೆ ಮಾಡಬೇಕು ಎನ್ನುವ ಮಾಹಿತಿ ಇಲ್ಲದೇ ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಕೂಡ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ನೀಡದ ಕಾರಣ ರೈತರಿಗೆ ದಾರಿ ತೋಚದಾಗಿದೆ. ಸತತ ಬರದಿಂದ ತತ್ತರಿಸಿದ್ದ ರೈತರಿಗೆ ರೋಗ ಬಾಧೆಯಿಂದಾಗಿ ಪುನಃ ನಷ್ಟಕ್ಕೆ ಒಳಗಾಗುವ ಆತಂಕ ಶುರುವಾಗಿದೆ. ಕೃಷಿ ಇಲಾಖೆಯೇ ರೈತರ ನೆರವಿಗೆ ನಿಂತು ರೋಗ ನಿವಾರಣೆಗೆ ಶ್ರಮಿಸಬೇಕಿದೆ.
•ಮಲ್ಲಪ್ಪ ಮಾಟರಂಗಿ