“ಯೆಲ್ಲೋ ಬೋರ್ಡ್‌ನವರನ್ನು ಎಲ್ ಬೋರ್ಡ್ ಅಂದ್ಕೊಂಡಿದ್ದೀಯಾ…’ – ಹೀಗೆ ಹೇಳುತ್ತಾ ನಾಯಕ ತನಗಾದ ಅನ್ಯಾಯದ ವಿರುದ್ಧ ಎದ್ದು ನಿಲ್ಲುತ್ತಾನೆ. ಅಷ್ಟೊತ್ತಿಗಾಗಲೇ ಆತ ಸಾಕಷ್ಟು ನೋವು, ಅವಮಾನವನ್ನು ಅನುಭವಿಸಿರುತ್ತಾನೆ. ಅದಕ್ಕೆ ಕಾರಣ ಆತನ ಪ್ರೀತಿ. ತನ್ನ ಪ್ರೀತಿಯ ಹುಡುಗಿಗಾಗಿ ತನ್ನೆಲ್ಲಾ ಸಿಟ್ಟನ್ನು ಕಂಟ್ರೋಲ್ ಮಾಡಿಕೊಂಡಿರುತ್ತಾನೆ. ಹಾಗಾದರೆ, ಮುಂದಿನಾಗುತ್ತದೆ ಎಂಬ ಕುತೂಹಲವಿದ್ದರೆ ನೀವು “ಯೆಲ್ಲೋ ಬೋರ್ಡ್’ ಸಿನಿಮಾ ನೋಡಬಹುದು.
ಹೆಸರಿಗೆ ತಕ್ಕಂತೆ “ಯೆಲ್ಲೋ ಬೋರ್ಡ್’ ಬೆಂಗಳೂರಿನ ಕ್ಯಾಬ್ ಡ್ರೈವರ್‌ವೊಬ್ಬನ ಕಥೆ. ಯಾರೋ ಒಂದಿಬ್ಬರು ಕ್ಯಾಬ್ ಡ್ರೈವರ್ ಗಳು ಮಾಡುವ ಅವಂತಾರ, ನಿಯತ್ತಾಗಿ ದುಡಿಯುವ ಡ್ರೈವರ್ ಗಳಿಗೂ ಯಾವ ರೀತಿ ತೊಂದರೆಯಾಗುತ್ತದೆ ಎಂಬ ಅಂಶದೊಂದಿಗೆ “ಯೆಲ್ಲೋ ಬೋರ್ಡ್’ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಈ ಚಿತ್ರದಲ್ಲೊಂದು ಒಳ್ಳೆಯ ಆಶಯವಿದೆ. ಅದು ಹೆಣ್ಣುಮಕ್ಕಳ ಮೇಲೆ ಆಗುವ ದೌರ್ಜನ್ಯವನ್ನು ತಡೆಗಟ್ಟುವ ರೀತಿ ಹೊಸ ಯೋಚನೆ. ಪ್ರತಿ ಏರಿಯಾದಲ್ಲಿ ಪೊಲೀಸ್ ಜೀಪ್ ಇರುತ್ತೋ, ಇಲ್ಲವೋ ಆದರೆ, ಒಂದೊಂದು ಏರಿಯಾದಲ್ಲಿ ಹತ್ತಕ್ಕೂ ಹೆಚ್ಚು ಯೆಲ್ಲೋ ಬೋರ್ಡ್ ಗಾಡಿಗಳು ಇರುತ್ತವೆ ಎಂಬ ಸಂಭಾಷಣೆ ಇದಕ್ಕೆ ಪೂರಕವಾಗಿದೆ. ಯೆಲ್ಲೋ ಬೋರ್ಡ್ ಅನ್ನು ಬಳಸಿಕೊಂಡು ಹೇಗೆ ದೌರ್ಜನ್ಯ ತಡೆಗಟ್ಟಬಹುದು ಎಂಬ ಚಿಂತನೆಯ ನಾಯಕ ಕೊನೆಗೆ ಹೇಗೆ ಕಷ್ಟಕ್ಕೆ ಸಿಲುಕುತ್ತಾನೆ ಎಂಬ ಅದರಿಂದ ಹೇಗೆ ಪಾರಾಗುತ್ತಾನೆ ಎಂಬ ಅಂಶ ಈ ಸಿನಿಮಾದ ಹೈಲೈಟ್.
ಚಿತ್ರದಲ್ಲಿ ಪ್ರೀತಿ, ಪ್ರೇಮ, ಸ್ನೇಹದ ಜೊತೆಗೆ ಯೆಲ್ಲೋ ಬೋರ್ಡ್‌ನವರ ಕುರಿತಾಗಿಯೂ ಒಂದಷ್ಟು ವಿಚಾರಗಳನ್ನು ಹೇಳಲಾಗಿದೆ. ಇಲ್ಲಿ ಮೆಚ್ಚಬೇಕಾದ ಮತ್ತೂಂದು ಅಂಶವೆಂದರೆ ಇದೊಂದು ಕಮರ್ಷಿಯಲ್ ಸಿನಿಮಾವಾದರೂ ಅನಾವಶ್ಯಕ ಬಿಲ್ಡಪ್‌ಗಳಿಂದ ಈ ಸಿನಿಮಾವನ್ನು ಮುಕ್ತಗೊಳಿಸಲಾಗಿದೆ. ಹೀರೋ ಇಂಟ್ರೋಡಕ್ಷನ್, ಆತನ ಬಿಲ್ಡಪ್‌ಗೊಂದು ಅನಾವಶ್ಯಕ ಫೈಟ್‌ಗಳಿಂದ ಚಿತ್ರವನ್ನು ದೂರ ಇಟ್ಟಿದ್ದಾರೆ. ಚಿತ್ರದಲ್ಲಿ ಅಲ್ಲಲ್ಲಿ ಬರುವ ಟ್ವಿಸ್ಟ್, ಪಂಚಿಂಗ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಮಜ ಕೊಡುತ್ತದೆ.
ನಾಯಕ ಪ್ರದೀಪ್ ತಮ್ಮ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಒಬ್ಬ ಕ್ಯಾಬ್ ಡ್ರೈವರ್ ಆಗಿ, ಪ್ರೇಮಿಯಾಗಿ ಹಾಗೂ ಬದಲಾವಣೆಯ ಕನಸು ಕಾಣುವ ಯುವಕನಾಗಿ ಇಷ್ಟವಾಗುತ್ತಾರೆ. ಉಳಿದಂತೆ ಅಹಲ್ಯಾ ಸುರೇಶ್, ಸ್ನೇಹಾ, ಸಾಧುಕೋಕಿಲ, ಅಮಿತ್ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ
ರವಿ ರೈ