Advertisement

ಅಡಿಕೆ ಹಳದಿ ಎಲೆರೋಗ; ಶೀಘ್ರ ಬೆಳೆಗಾರರು, ತಜ್ಞರ ಸಭೆ: ಕಿರಣ್‌ ಕೊಡ್ಗಿ

03:26 PM Sep 25, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಭಾಗದಲ್ಲಿ ಕಾಣಿಸಿರುವ ಅಡಿಕೆ ಹಳದಿ ಎಲೆ ರೋಗಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ಯಾಂಪ್ಕೋ ಶೀಘ್ರ ಅಡಿಕೆ ಬೆಳೆಗಾರರ ಹಾಗೂ ತಜ್ಞರ ಸಭೆ ಕರೆದು ಚರ್ಚೆ ನಡೆಸಲಿದೆ ಎಂದು ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದ್ದಾರೆ.

Advertisement

ಸಂಘ ನಿಕೇತನದಲ್ಲಿ ಶನಿವಾರ ಜರಗಿದ ಕ್ಯಾಂಪ್ಕೋದ 48ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅಡಿಕೆಯ ಹಳದಿಎಲೆ ರೋಗ ಬೆಳೆಗಾರರನ್ನು ಕಂಗೆಡಿಸಿದೆ. ಸುಳ್ಯದಿಂದ ಪುತ್ತೂರು ಹಾಗೂ ಕಾಸರಗೋಡಿಗೂ ರೋಗ ವ್ಯಾಪಿಸುತ್ತಿದ್ದು, ಪರಿಹಾರ ಕಂಡುಕೊಳ್ಳಲು ಕ್ಯಾಂಪ್ಕೋ ಗಂಭೀರ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿಯೋಗ ತೆರಳಿ ಸೂಕ್ತ ಪರಿಹಾರ ಹಾಗೂ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಆಗ್ರಹಿಸಿದೆ ಎಂದರು.

ಹಳದಿ ಎಲೆರೋಗಕ್ಕೆ ಕಾಂಪ್ಕೋದ ಸಂಶೋಧನ ಪ್ರತಿಷ್ಠಾನದ ಮೂಲಕ ಸಂಶೋಧನೆಗೆ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ 3.97 ಕೋ.ರೂ. ಮೊತ್ತವನ್ನು ಸಂಶೋಧನೆಗೆ ಮೀಸಲಿರಿಸಲಾಗಿದೆ ಎಂದರು.

ಅಡಿಕೆ ವಹಿವಾಟಿನಲ್ಲಿ ಶೇ. 5 ಜಿಎಸ್‌ಟಿ ಪಾವತಿಸಲಾಗುತ್ತಿದ್ದು, 350 ಕೋ.ರೂ.ಗೂ ಅಧಿಕ ತೆರಿಗೆಯನ್ನು ಸರಕಾರಕ್ಕೆ ಪಾವತಿಸಲಾಗಿದೆ. ಇದರಲ್ಲಿ ಶೇ. 1 ಮೊತ್ತವನ್ನು ಸಂಶೋಧನೆಗೆ ಬಳಕೆ ಮಾಡಲು ಕಲ್ಪಿಸುವಂತೆ ಕೋರಲಾಗಿದೆ. ಪ್ರಸಕ್ತ ಅಡಿಕೆ ಆಮದು ಮೇಲೆ ಉತ್ಪಾದನ ವೆಚ್ಚ ಕಿಲೋಗೆ 251 ರೂ. ಇದ್ದುದನ್ನು 360 ರೂ.ಗೆ ನಿಗದಿಗೊಳಿಸಲು ಕೇಂದ್ರ ಹಣಕಾಸು ಸಚಿವರನ್ನು ಆಗ್ರಹಿಸಲಾಗಿದೆ ಎಂದರು.

10 ಲಕ್ಷ ಕ್ವಿಂಟಾಲ್‌ ಗುರಿ
ಅಡಿಕೆ ವಾರ್ಷಿಕ ವ್ಯವಹಾರವನ್ನು 5.50 ಲಕ್ಷ ಕ್ವಿಂಟಾಲ್‌ನಿಂದ 10 ಲಕ್ಷ ಕ್ವಿಂಟಾಲ್‌ಗೆ ಹೆಚ್ಚಿಸುವ ಗುರಿ ಇರಿಸಿಕೊಳ್ಳಲಾಗಿದೆ. ಇನ್ಫೋ ಇಂಡಿಯಾ ಸಂಸ್ಥೆ ಜತೆ ಕ್ಯಾಂಪ್ಕೋ ಒಪ್ಪಂದ ಮಾಡಿಕೊಂಡಿದ್ದು, ಬೆಳೆಗಾರರ ಸಮಗ್ರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ ಎಂದು ಕೊಡ್ಗಿ ವಿವರಿಸಿದರು.

Advertisement

ಕ್ಯಾಂಪ್ಕೋದ ಹೊಸ ಉತ್ಪನ್ನಗಳನ್ನು ಆರೆಸ್ಸೆಸ್‌ ಮುಖಂಡ ನ. ಸೀತಾರಾಮ್‌ ಮತ್ತು ಗೋಪಾಲ ಚೆಟ್ಟಿಯಾರ್‌ ಬಿಡುಗಡೆಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next