ಬೆಂಗಳೂರು: ಮುಂಗಾರು ಮಾರುತಗಳು ಚುರುಕುಗೊಳ್ಳುವುದರ ಜತೆಗೆ ಹವಾಮಾನದಲ್ಲಿ ಹಲವು ರೀತಿಯ ಬದಲಾವಣೆಗಳು ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದ ಕೆಲವೆಡೆ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಉತ್ತರ ಒಳನಾಡಿನ ಬೆಳಗಾವಿ ಮತ್ತಿತರ ಕಡೆ “ಯೆಲ್ಲೋ’ ಅಲರ್ಟ್ ಘೋಷಿಸಲಾಗಿದೆ. ಬಹುತೇಕ ಜುಲೈ 17ರವರೆಗೆ ಮಳೆ ಮುಂದುವರಿಯಲಿದೆ.
ಒಂದೆಡೆ ದಕ್ಷಿಣ ಒಡಿಶಾದಿಂದ ನೆರೆಯ ಆಂಧ್ರಪ್ರದೇಶ ಕರಾವಳಿ ಕಡೆಗೆ ಚಂಡಮಾರುತದ ಪರಿಚಲನೆ ಉಂಟಾಗಿದೆ. ಮತ್ತೂಂದೆಡೆ ಸೌರಾಷ್ಟ್ರ ಕರಾವಳಿಯಿಂದ ಮಹಾರಾಷ್ಟ್ರದ ಉತ್ತರ ಭಾಗದ ನಡುವೆ ಕಡಿಮೆ ಒತ್ತಡದ ತಗ್ಗು (ಟ್ರಫ್) ಕಂಡುಬಂದಿದೆ. ಈ ಮಧ್ಯೆ ಮುಂಗಾರು ಮಾರುತಗಳು ಚುರುಕುಗೊಂಡಿವೆ. ಪರಿಣಾಮ ಮಂಗಳವಾರ ಅಲ್ಲಲ್ಲಿ ಉತ್ತಮ ಮಳೆಯಾಗಿದ್ದು, ಇನ್ನೂ ಮೂರ್‍ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಭಾರೀ ಮತ್ತು ಹಲವೆಡೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಹಾವೇರಿ, ಕಲಬುರಗಿ, ಯಾದಗಿರಿ, ಬೀದರ್, ಧಾರವಾಡ ಸುತ್ತಲಿನ ಪ್ರದೇಶಗಳಲ್ಲಿ ಕೂಡ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ಭಾರತ ರತ್ನ ನೀಡಿ : ರಾಜೇಂದ್ರ ಸೇನ್ ಒತ್ತಾಯ
ಉತ್ತರ ಕನ್ನಡದ ಮಂಕಿ, ಮಂಗಳೂರು, ಮಡಿಕೇರಿಯಲ್ಲಿ ತಲಾ 90 ಮಿ.ಮೀ., ದಕ್ಷಿಣ ಕನ್ನಡದ ಪಣಂಬೂರು, ಪುತ್ತೂರಿನಲ್ಲಿ ತಲಾ 80 ಮಿ.ಮೀ., ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಸುಬ್ರಮಣ್ಯ, ಕಲಬುರಗಿಯ ಸುಳೇಪೇಟೆಯಲ್ಲಿ ತಲಾ 70 ಮಿ.ಮೀ. ಮಳೆ ದಾಖಲಾಗಿದೆ.