ಮಂಗಳೂರು : ಕೆಲವು ದಿನಗಳಿಂದ ಕಾದ ಕೆಂಡದಂತಾಗಿದ್ದ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮಂಗಳವಾರ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದ್ದು, ವಾತಾವರಣ ತುಸು ತಂಪಾಗಿದೆ.
ಮಂಗಳೂರು ಸಹಿತ ಕೆಲವು ಕಡೆ ಮೋಡದ ವಾತಾವರಣ ಇತ್ತು. ದಿನವಿಡೀ ಉರಿ ಸೆಕೆ, ಬೆಳಗ್ಗೆ ವೇಳೆ ಮಂಜಿನಿಂದ ಕೂಡಿದ ವಾತಾವರಣ ಇತ್ತು. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿಯ ಪ್ರಕಾರ ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಾಣುತ್ತಿತ್ತು. ಅಲ್ಲದೆ ಬಿಸಿ ಗಾಳಿಯ ಎಚ್ಚರಿಕೆ, ಸಮುದ್ರದ ಅಲೆಗಳ ಅಬ್ಬರದ ಎಚ್ಚರಿಕೆಯನ್ನೂ ಹವಾಮಾನ ಇಲಾಖೆ ನೀಡಿತ್ತು. ಈಗ ಮಳೆ ಸುರಿದರೆ, ಕಾದು ಕೆಂಡದಂತಾಗಿದ್ದ ಕರಾವಳಿಯ ವಾತಾವರಣ ತುಸು ತಂಪಾಗಬಹುದು. ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿ, ನೀರಿನ ಸಮಸ್ಯೆಗೆ ತುಸು ಪರಿಹಾರ ಸಿಕ್ಕಂತಾಗಬಹುದು.
ಹವಾಮಾನ ಇಲಾಖೆ ಮಾಹಿತಿಯಂತೆ ಮಂಗಳೂರಿನಲ್ಲಿ ಬುಧವಾರ 34.2 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, 24.6 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ.
ಉಷ್ಣಾಂಶ ಇಳಿಕೆ ನಿರೀಕ್ಷೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಸುರಿಯಲು ಆರಂಭವಾದರೆ, ಗರಿಷ್ಠ ಉಷ್ಣಾಂಶಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕೆಲವು ದಿನಗಳಿಂದ ಗರಿಷ್ಠ ಉಷ್ಣಾಂಶದಲ್ಲಿ ತುಸು ಇಳಿಕೆ ಕಾಣುತ್ತಿದ್ದು, ಮತ್ತಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ.
ಮೂರು ದಿನ ಎಲ್ಲೋ ಅಲರ್ಟ್
ಭಾರತೀಯ ಹವಾಮಾನ ಇಲಾಖೆಯು ಹಲವು ತಿಂಗಳ ಬಳಿಕ ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್’ ಘೊಷಿಸಿದೆ. ಮುನ್ಸೂಚನೆಯ ಪ್ರಕಾರ ಮಾ. 15ರಿಂದ 17ರವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.