ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರವಾದ ಹಿನ್ನೆೆಲೆಯಲ್ಲಿ ರಾಜ್ಯದ ವಿವಿಧೆಡೆ ತುಂತುರು ಮಳೆಯಾಗುತ್ತಿದ್ದು , ಜ.9ರ ವರೆಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜ. 7ಕ್ಕೆ 64.5 ಮಿ.ಮೀನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆೆಲೆಯಲ್ಲಿ ‘ಯೆಲ್ಲೋ ಅಲರ್ಟ್’ಘೋಷಿಸಲಾಗಿದೆ.
ಜ.9ರ ವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಚದುರಿದಂತೆ ಅಥವಾ ತುಂತುರು ಮಳೆಯಾಗಲಿದೆ. ಜ.8ಕ್ಕೆ ರಾಜ್ಯದ ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ಮತ್ತು ಚಳಿಯ ವಾತವರಣ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಶಾಲಾರಂಭದ ನಾಲ್ಕನೇ ದಿನಕ್ಕೆ ಶಾಲಾ ಕಾಲೇಜುಗಳಲ್ಲಿ ಉತ್ತಮ ಹಾಜರಾತಿ :ಸುರೇಶ್ ಕುಮಾರ್
ಸೋಮವಾರ ವರದಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ 5ಸೆಂ.ಮೀ. ಅತೀ ಹೆಚ್ಚು ಮಳೆಯಾಗಿದೆ. ಉಳಿದಂತೆ ಶಿವಮೊಗ್ಗ, ಕೊಡಗಿನ ಭಾಗಮಮಂಡಲ ತಲಾ 3 ಸೆಂ.ಮೀ, ದಕ್ಷಿಣ ಕನ್ನಡದ ಸುಳ್ಯ, ಶಿವಮೊಗ್ಗದ ಭದ್ರಾವತಿ, ಚಿಕ್ಕಮಗಳೂರಿನ ಲಕ್ಕವಳ್ಳಿ ತಲಾ 2 ಸೆಂ.ಮೀ ಮಳೆಯಾಗಿದೆ. ರಾಜ್ಯದ ಕನಿಷ್ಠ ತಾಪಮಾನ ಹಾಸನದಲ್ಲಿ 11.6, ಬೀದರ್‌ನಲ್ಲಿ 12.6 ಹಾಗೂ ಗರಿಷ್ಠ ತಾಪಮಾನ ಕಾರವಾರದಲ್ಲಿ 35.8 ಡಿಗ್ರಿ ಸೇಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.