ಸವದತ್ತಿ: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಕಳೆಗುಂದಿದ್ದ ಭರತ ಹುಣ್ಣಿಮೆ ಜಾತ್ರೆಗೆ ಈ ಬಾರಿ ವಿಶೇಷ ಮೆರಗು ಬಂದಿದೆ. ರವಿವಾರ ನಡೆಯಲಿರುವ ಜಾತ್ರೆಯ ಅಂಗವಾಗಿ ಯಲ್ಲಮ್ಮನ ಗುಡ್ಡ ಮದುವಣಗಿತ್ತಿಯಂತೆ ಸಿದ್ಧಗೊಂಡಿದೆ. ದೇವಸ್ಥಾನ, ಪವಳಿಗಳನ್ನು ಶುಚಿಗೊಳಸಿ ತಳಿರು ತೋರಣಗಳಿಂದ ಅಮ್ಮನ ದೇವಸ್ಥಾನವನ್ನು ಅಲಂಕರಿಸಲಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಒಂದೆಡೆ ಸೇರಿ ಜಾತ್ರೆ ಆಚರಿಸುವ ಅಮ್ಮನ ಸನ್ನಿ ಧಿಯಲ್ಲಿ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆದಿದೆ. ಚಕ್ಕಡಿ, ಟ್ರಾಕ್ಟರ್, ಖಾಸಗಿ ವಾಹನ, ದ್ವಿಚಕ್ರ ವಾಹನಗಳ ಮೂಲಕ ದೇವಸ್ಥಾನದತ್ತ ಆಗಮಿಸುವ ಭಕ್ತರು ಇಲ್ಲಿಯೇ ಕೆಲ ದಿನಗಳವರೆಗೆ ವಾಸ್ತವ್ಯ ಹೂಡಿ, ದೇವಿಗೆ ಪರಡಿ ತುಂಬುತ್ತಾರೆ. ಪರಂಪರೆಯಂತೆ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಶನಿವಾರದಿಂದಲೇ ತಂಡೋಪತಂಡವಾಗಿ ಭಕ್ತರು ಗುಡ್ಡದತ್ತ ಹೆಜ್ಜೆ ಹಾಕುತ್ತಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರವಿವಾರ ಅದ್ಧೂರಿಯಾಗಿ ಜಾತ್ರೆ ಜರುಗಲಿದ್ದು, 20 ಲಕ್ಷಕ್ಕೂ ಅ ಧಿಕ ಭಕ್ತರು ಸೇರುವ ನಿರೀಕ್ಷೆಯಿದೆ. ದೂರದ ಊರುಗಳಿಂದ ವಿವಿಧ ವಾದ್ಯಮೇಳಗಳೊಂದಿಗೆ ಸಾಂಸ್ಕೃತಿಕ ಕುಣಿತ ಹಾಕುತ್ತಾ ಕಾಲ್ನಡಿಗೆ ಮೂಲಕ ಜೋಗತಿಯರು ದೇವರ ಮೂರ್ತಿ ಹೊತ್ತು ದೇವಸ್ಥಾನದತ್ತ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಕಾಣಸಿಗುತ್ತಿವೆ. ವರ್ಷಕ್ಕೊಮ್ಮೆ ಅತಿದೊಡ್ಡ ಪ್ರಮಾಣದಲ್ಲಿ ಜರುಗಲಿರುವ ಈ ಜಾತ್ರೆಗೆ ಸೇರಿದ ಅಸಂಖ್ಯಾತ ಭಕ್ತರನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮದ ಸಂಗತಿ. ಅತೀ ಹೆಚ್ಚು ಜನಸಂದಣಿಯಾಗುವ ಜಾತ್ರೆ ಇದಾಗಿದ್ದು, ಹುಣ್ಣಿಮೆಯ ಮೊದಲ ಹಾಗೂ ನಂತರದ ಮಂಗಳವಾರ, ಶುಕ್ರವಾರದಂದು ಜನಸಾಗರವೇ ಹರಿದುಬರಲಿದೆ. ಈಗಾಗಲೇ ಗುಡ್ಡದ ಇಕ್ಕೆಲಗಳಲ್ಲಿ ಭಕ್ತರ ದಂಡು ಬೀಡುಬಿಟ್ಟಿದೆ.
ಸಿಸಿ ಕ್ಯಾಮೆರಾಗಳ ನಿಗಾ
300 ಪೊಲೀಸ್, 500 ಗೃಹರಕ್ಷಕ ಸಿಬ್ಬಂದಿ ನಿಯೋಜಿಸಿ ಬಿಗಿಭದ್ರತೆಗೆ ಒತ್ತು ಕೊಡಲಾಗಿದೆ. ಭಕ್ತರ ಚಲನವಲನ ಮೇಲೆ ನಿಗಾಯಿರಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪೊಲೀಸ್ ಇಲಾಖೆ ಸಂಚಾರ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಜರುಗಿಸಿದೆ.
ವಿಶೇಷ ಬಸ್ ವ್ಯವಸ್ಥೆ
ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಬೆಳಗಾವಿ, ಚಿಕ್ಕೋಡಿ, ಧಾರವಾಡ, ನರಗುಂದ, ಸವದತ್ತಿ ಮತ್ತಿತರ ಘಟಕಗಳಿಂದ ಬಸ್‌ಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಗದಗ, ರೋಣ, ಬಳ್ಳಾರಿ, ರಾಯಚೂರ, ಸಿಂಧನೂರುಗಳಿಂದ ಆಗಮಿಸುವ ಭಕ್ತರಿಗೆ ವಾಹನ ನಿಲುಗಡೆಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಉಗರಗೋಳದ ಕಿರಿದಾದ ರಸ್ತೆಯಲ್ಲಿ ದಟ್ಟಣೆಯಿಂದಾಗಿ ಸಮಸ್ಯೆ ಎದುರಿಸುವುದು ಸರ್ವೇ ಸಾಮಾನ್ಯದಂತಿದೆ.
-ಡಿ.ಎಸ್. ಕೊಪ್ಪದ