Advertisement

ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ

06:08 PM Nov 01, 2020 | Suhan S |

ಚಿತ್ತಾಪುರ: ರಾಷ್ಟ್ರಕೂಟರ ಕುಲದೇವತೆ ಎಂದೇ ಖ್ಯಾತಿ ಪಡೆದ ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರದ್ದುಪಡಿಸಿ ಕೇವಲ ಪಲ್ಲಕ್ಕಿ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು.

Advertisement

ಪ್ರತಿ ಬಾರಿ ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸರಳವಾಗಿ ಆಚರಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಅದರಂತೆ ತಾಲೂಕು ಆಡಳಿತವು ಈ ಬಾರಿಯ ನಾಗಾವಿ ಯಲ್ಲಮ್ಮ ದೇವಿ ಜಾತ್ರೆ ರದ್ದುಪಡಿಸಿ ಯಾವುದೇ ಪೂಜೆ, ಪಲ್ಲಕ್ಕಿ ಹಾಗೂ ವಿಜೃಂಭಣೆಗೆ ಅವಕಾಶ ನೀಡದೆ ಸರಳವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡಿತ್ತು.

ಪಟ್ಟಣದ ಲಚ್ಚಪ್ಪ ನಾಯಕ ಮನೆಯಲ್ಲಿ ಗಣಪತಿ ಹಾಗೂ ಯಲ್ಲಮ್ಮ ದೇವಿಯ ಪಲ್ಲಕ್ಕಿಗೆ ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ ನೀಡಿದರು. ನಾಯಕ ಮನೆಯಿಂದ ತೆರೆದ ವಾಹನದಲ್ಲಿ ಪಲ್ಲಕ್ಕಿವಿಟ್ಟು ಮೆರವಣಿಗೆಯು ಕೇವಲ ಒಂದು ತಾಸಿನಲ್ಲಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತಲುಪಿತು. ರಸ್ತೆಯುದ್ದಕ್ಕೂ ದೂರದಲ್ಲಿ ಅಪಾರ ಭಕ್ತರು ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು. ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ ಅವರು 6 ಕ್ವಿಂಟಲ್‌ ಪುಷ್ಪಗಳು ತರಿಸಿ ದಾರಿಯುದ್ದಕ್ಕೂ ಪುಷ್ಪಾರ್ಚನೆ ಮಾಡಿಸಿದರು. ದೇವಸ್ಥಾನಕ್ಕೆ ಪಲ್ಲಕ್ಕಿ ತಲುಪಿದ ನಂತರ ಗರ್ಭಗುಡಿ ಸುತ್ತಲು ಪಲ್ಲಕ್ಕಿ 5 ಸುತ್ತು ಹಾಕಲಾಯಿತು.

ದೇವಸ್ಥಾನದಲ್ಲಿ ಸೇಡಂ ಆಯುಕ್ತ ರಮೇಶ ಕೋಲಾರ ಪೂಜೆ ಸಲ್ಲಿಸಿದರು. ತಾಪಂ ಇಒ ಡಾ| ಬಸಲಿಂಗಪ್ಪ ಡಿಗ್ಗಿ, ಕಂದಾಯ ಇಲಾಖೆಯ ದಶರಥ ಮಂತಟ್ಟಿ, ಮುಖಂಡರಾದ ರತ್ನಾಕರ ನಾಯಕ, ಚಂದ್ರಶೇಖರ ಆವಂಟಿ ಇದ್ದರು.

ಭಕ್ತರು ದಂಡು: ಜಾತ್ರೆ ರದ್ದಾದ ಮಾಹಿತಿ ಗೊತ್ತಾಗದೇ ಅಪಾರ ಸಂಖ್ಯೆಯಲ್ಲಿ ಬಂದು ಭಕ್ತರು ದೇವಸ್ಥಾನದ ದೂರದಲ್ಲೇ ಉಳಿದರು. ದೂರದಿಂದಲೇ ದರ್ಶನ ಪಡೆದರು. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯ ಹಾಗೂ ವಿಜಯಪುರ, ಬೆಳಗಾವಿ ಸೇರಿದಂತೆ ಜಿಲ್ಲೆಗಳಿಂದ ಅಪಾರ ಭಕ್ತರು ಆಗಮಿಸಿದ್ದರು. ರಸ್ತೆ ಬದಿ ಹಾಗೂ ದೇವಸ್ಥಾನದಿಂದ ದೂರದಲ್ಲೇ ನಿಂತು ದರ್ಶನ ಪಡೆದರು. ಕೆಲ ಭಕ್ತರು ದೇವಸ್ಥಾನದ ಹೊರಗೆ ದೂರದಲ್ಲಿ ಕಟ್ಟೆಯ ಮೂರ್ತಿಗೆ  ನೈವೇದ್ಯ ಸಲ್ಲಿಸಿದರು. ಭಕ್ತರ ದರ್ಶನಕ್ಕೆ ನಿಷೇಧಿಸಿ ದೇವಸ್ಥಾನದ ಬಾಗಿಲು ಮುಚ್ಚಿರುವುದರಿಂದ ದೇವಸ್ಥಾನದ ಒಳಗೆ ಬೀಕೋ ಎನ್ನುತ್ತಿತ್ತು. ಸಿಪಿಐ ಕೃಷ್ಣಪ್ಪ ಕಲ್ಲದೇವರ, ಪಿಎಸ್‌ಐ ಶ್ರೀಶೈಲ್‌ ಅಂಬಾಟಿ ನೇತೃತ್ವದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Advertisement

ಶೀಗಿ ಹುಣ್ಣಿಮೆಯಂದು ಅಂಬಾಭವಾನಿ ಜಾತ್ರೆ :

ಕಾಳಗಿ: ಪಟ್ಟಣದ ಮರಾಠ ಸಮಾಜದ ಆರಾಧ್ಯ ದೇವಿ ಅಂಬಾಭವಾನಿ ಜಾತ್ರಾ ಮಹೋತ್ಸವ ಶನಿವಾರ ಶೀಗಿ ಹುಣ್ಣಿಮೆಯಂದು ಜರುಗಿತು.

ಅಂಬಾಭವಾನಿ ಜಾತ್ರಾ ಮಹೋತ್ಸವ ನಿಮಿತ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದಸರಾ ಹಬ್ಬದ ಮಹಾನವಮಿಯಂದು ದೇವಸ್ಥಾನದಲ್ಲಿ ದೇವಿ ಹೆಸರಿನ ಮೇಲೆ ಒಂಬತ್ತು ದಿನಗಳ ಕಾಲ ಘಟಸ್ಥಾಪನೆ ಮಾಡಿ ವಿಶೇಷ ಪೂಜೆ ಮಾಡಲಾಯಿತು. ವಿಜಯದಶಮಿ ದಿನ ಸಿಮೋಲ್ಲಂಘನೆ ನಡೆಯಿತು. ನಂತರ ದೇವಿಯನ್ನು ಪಲ್ಲಂಗದ ಮೇಲೆ ಪ್ರತಿಷ್ಠಾಪಿಸಿ ಶಯನೋತ್ಸವದ ನಂತರ ಮಂದಿರದ ದ್ವಾರ ಮುಚ್ಚಲಾಗಿತ್ತು.

ಶನಿವಾರ ಶೀಗಿಹುಣ್ಣಿಮೆಯಂದು ಮಧ್ಯರಾತ್ರಿ ಡೊಳ್ಳು, ಭಾಜ, ಭಜಂತ್ರಿಗಳೊಂದಿಗೆ ಪಟ್ಟಣದ ಮಾಲಿಪಾಟೀಲ ಮನೆಯಿಂದ ಜಗ ದೀಶ ಮಾಲಿಪಾಟೀಲ, ಕುಲಕರ್ಣಿ ಮನೆಯಿಂದ ಅವಿನಾಶ ಕುಲಕರ್ಣಿ ಅವರನ್ನು ಘಾಣಿಗ ರೇವಣಸಿದ್ಧ ಕಲಶೆಟ್ಟಿ ಅವರ ಮನೆಯಿಂದ ಡಿವಟಗಿಯನ್ನು ಮೆರವಣಿಗೆ ಮಾಡುತ್ತಾ ದೇವಸ್ಥಾನಕ್ಕೆ ಕರೆ ತರಲಾಯಿತು. ನಂತರ ದೇವಸ್ಥಾನ ಅರ್ಚಕ ಸುರೇಶ ಬೊಂಬೆ, ಕುಪ್ಪಣ ಬೊಂಬೆ ನೇತೃತ್ವದಲ್ಲಿ ದೇವಸ್ಥಾನದ ಬಾಗಿಲು ತೆರೆದು ಅಂಬಾಭವಾನಿ ದೇವಿಗೆ ವಿಶೇಷ ಅಭಿಷೇಕ, ಪುಣ್ಯ ವಾಚನ, ಮೈದಾ ಸರಸ್ವತಿ ಹೋಮ, ಪುಣ್ಯಹುತಿ, ಮಹಾಮಂಗಳಾರತಿ ಮಾಡಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.

ಅಂಬಾಭವಾನಿ ದೇವಿ ದರ್ಶನಕ್ಕೆ ಸುತ್ತಲಿನ ಗ್ರಾಮಗಳಾದ ಮಲಘಾಣ, ಕೋಡ್ಲಿ, ಭರತನೂರ, ರಾಜಾಪುರ, ಮಂಗಲಗಿ, ಕೊಡದೂರ, ಗೋಟೂರ, ಸೂಗುರ(ಕೆ) ಹಾಗೂ ತಾಂಡಗಳಿದ ನೂರಾರು ಭಕ್ತರು ಆಗಮಿಸಿದ್ದರು. ದೇವಸ್ಥಾನ ಮಂಡಳಿಯವರಾದ ಸುಭಾಷ ಕದಂ, ತುಳಸಿರಾಮ ಚವ್ಹಾಣ, ಸುರೇಶ ಶೇಗಾಂವಕಾರ, ಪ್ರಶಾಂತ ಕದಂ, ಲಕ್ಷ್ಮಣ ಡಪೂರ, ಅನಿಲ ಗುತ್ತೇದಾರ, ರಮೇಶ ಕಿಟ್ಟದ, ಶಿವರಾಯ ಕೊಯಿ, ಮಹೇಶ ಶೇಗಾಂವಕಾರ, ದೇವಸ್ಥಾನ ಕಾರ್ಯದರ್ಶಿ ವಿಶ್ವನಾಥ ಬೊಂಬೆ, ಸಂತೋಷ ವನಮಾಲಿ, ಪಾಂಡುರಂಗ ವನಮಾಲಿ, ಮಂಜುನಾಥ ಚೆಂಗಟಾ, ಬಾಬುರಾವ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next