ಕಲಬುರಗಿ: ಸಾವಿನ ವಾರ್ಡ್ ಎಂದೇ ಕುಖ್ಯಾತಿ ಪಡೆದಿದ್ದ ಜಿಲ್ಲೆಯ ಆಳಂದ ತಾಲೂಕಿನ ಯಳಸಂಗಿ ಗ್ರಾಪಂನ ವಾರ್ಡ್ 3ಕ್ಕೆ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯಳಸಂಗಿ ಗ್ರಾಪಂನ ವಾರ್ಡ್ ಮೂರಕ್ಕೆ ಆಯ್ಕೆಯಾಗುವ ಸದಸ್ಯರಲ್ಲಿ ಒಬ್ಬರ ಸಾವನ್ನಪ್ಪುತ್ತಾರೆ ಎಂಬ ಭಯದ ಹಿನ್ನೆಲೆಯಲ್ಲಿ ಕೇವಲ ಮೂವರೇ ಹೆದರುತ್ತಾ ನಾಮಪತ್ರ ಸಲ್ಲಿಸುತ್ತಿದ್ದರು. ಆದರೆ ಪ್ರಸ್ತುತ 2015-20ರ ಅವಧಿಯಲ್ಲಿ ಆಯ್ಕೆಯಾದ ಸದಸ್ಯರಲ್ಲಿ ಯಾರೊಬ್ಬರು ಜೀವಕ್ಕೆ ಹಾನಿಯಾಗದ ಹಿನ್ನೆಲೆಯಲ್ಲಿ ಈ ಸಲ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರ ವಾಪಸಾತಿ ಕಡೆ ದಿನವಾದ ಸೋಮವಾರ 10 ಅಭ್ಯರ್ಥಿಗಳು ನಾಮಪತ್ರ ವಾಪಸಾತಿ ಪಡೆದಿದ್ದರಿಂದ ಮೂವರು ಅವಿರೋಧವಾಗಿ ಆಯ್ಕೆಯಾದರು.
ಒಟ್ಟಾರೆ ವಾರ್ಡ್ ನಂಬರ್ ಮೂರರಲ್ಲಿ ನಿವೃತ್ತ ಸಹಾಯಕ ಅಭಿಯಂತರ ಎಸ್.ಎಸ್. ಪಾಟೀಲ್, ಮಹಾದೇವಿ ಶಿವಶರಣಪ್ಪ ಸಿಂಧೆ, ವಸಂತ ಪ್ರಿಯಾ ಶಿವಲಿಂಗಪ್ಪ ಪಟ್ಟಣ ಎನ್ನುವರೇ ಅವಿರೋಧವಾಗಿ ಆಯ್ಕೆಯಾದ ಸದಸ್ಯರಾಗಿದ್ದಾರೆ.
ಉಳಿದಂತೆ ವಾರ್ಡ್ ನಂ. ಒಂದರಲ್ಲಿ 13, 2ರಲ್ಲಿ 14, 4ರಲ್ಲಿ 6, 5ರಲ್ಲಿ 13, ಹಾಗೂ 6ರಲ್ಲಿ 10 ಅಭ್ಯರ್ಥಿಗಳು ಕಣದಲ್ಲುಳಿದಿದ್ದಾರೆ. ಒಟ್ಟಾರೆ 16 ಸ್ಥಾನಗಳಿಗೆ 56 ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ. 1993 ರಿಂದ 2015ರ ಅವಧಿಯಲ್ಲಿ ವಾರ್ಡ್ ಮೂರರಲ್ಲಿ ಆಯ್ಕೆಯಾದ ಗ್ರಾಪಂ ಸದಸ್ಯರಲ್ಲಿ ಅವಧಿ ಮುಗಿಯುವ ಮುಂಚೆಯೇ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಒಟ್ಟಾರೆ 9 ಜನ ಸಾವನ್ನಪ್ಪಿದ್ದಾರೆ. ಕಡ್ಡಾಯ ಎನ್ನುವಂತೆ ಉಪಚುನಾವಣೆ ನಡೆಯುತ್ತಲೇ ಇರುತ್ತಿತ್ತು.
ಆದರೆ ಉಪ ಚುನಾವಣೆಯಲ್ಲಿ ಗೆದ್ದವರಲ್ಲಿ ಒಬ್ಬರೂ ಮೃತಪಟ್ಟಿಲ್ಲ. ಉಪ ಚುನಾವಣೆಗೆ ಭಾರೀ ಪೈಪೋಟಿ ನಡೆಯುತ್ತಿತ್ತು. 2015-20ರ ಅವಧಿ ಯಲ್ಲಿ ಯಾರೊಬ್ಬರು ಮೃತಪಡದ ಹಿನ್ನೆಲೆಯಲ್ಲಿ ಒಮ್ಮೆಲೆ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ ಈ ಸಲ ಜಿದ್ದಾಜಿದ್ದಿನ ಚುನಾವಣೆ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಾವಿನ ಭಯದ ಹಿನ್ನೆಲೆಯಲ್ಲಿ ಮತ್ತೆ ಅವಿರೋಧವಾಗಿ ಆಯ್ಕೆ ನಡೆದಿದೆ ಎನ್ನಲಾಗುತ್ತಿದೆ.