ಯಳಂದೂರು: ಮೂಗೂರು ತ್ರಿಪುರ ಸುಂದರಿ ಅಮ್ಮನವರ ಜಾತ್ರೆಯ ಅಂಗವಾಗಿ ಬಂಡಿ ಓಡಿಸುವ ಸಂದರ್ಭದಲ್ಲಿ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಜ.13ರ ಸೋಮವಾರ ನಡೆದಿದೆ.
ಸಮೀಪದ ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದ ನಿವಾಸಿ ಬಸವಣ್ಣ(50) ಮೃತ ದುರ್ದೈವಿ.
ಮೂಗೂರಿನ ತ್ರಿಪುರ ಸುಂದರಿ ಅಮ್ಮನವರ ಜಾತ್ರೆಯ ಅಂಗವಾಗಿ ಕಮರವಾಡಿ ಗ್ರಾಮದಲ್ಲಿ ಜ.13ರ ಸೋಮವಾರ ಬಂಡಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಬಂಡಿಯನ್ನು ಶೃಂಗಾರ ಮಾಡಿ ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಬಳಿಕ ಮೂಗೂರಿನ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಕಮರವಾಡಿ ಗ್ರಾಮದಲ್ಲಿ ಬಂದು ಮೆರವಣಿಗೆ ಮಾಡಲಾಗುತ್ತದೆ.
ಈ ವೇಳೆ ಕಮರವಾಡಿ ಗ್ರಾಮದ ಬಂಡಿಯನ್ನು ಬಸವಣ್ಣ ಮತ್ತು ಮಂಜುನಾಥ್ ಎಂಬವರು ಎತ್ತಿನ ನೊಗ ಹಿಡಿದು ಜತೆಯಲ್ಲಿ ಓಡುತ್ತಿದ್ದರು. ಈ ಸಂದರ್ಭ ಎತ್ತಿನ ಹಗ್ಗ ಬಿಚ್ಚಿ, ನೊಗ ಕಳೆದುಕೊಂಡು ಬಸವಣ್ಣ ಕೆಳಗೆ ಬಿದ್ದಿದ್ದು, ಅವರ ಮೇಲೆ ಬಂಡಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ದೇಹವನ್ನು ಶವ ಪರೀಕ್ಷೆಗಾಗಿ ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಂತೇಮರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ತಾಜುದ್ದೀನ್ ಮಾಹಿತಿ ನೀಡಿದರು.