ಮಂಗಳೂರು: ವಿಚಾರ- ಸಂಸ್ಕೃತಿ-ಸಾಹಿತ್ಯ ಪ್ರಿಯರನ್ನು ಆಕರ್ಷಿಸುವ ಭಾರತ್ ಫೌಂಡೇಶನ್ ಆಯೋಜನೆಯ ಮಂಗಳೂರು ಲಿಟ್ ಫೆಸ್ಟ್ 7 ನೇ ಆವೃತ್ತಿ ಇಂದು (ಜ.11) ಆರಂಭಗೊಳ್ಳುತ್ತಿದೆ.
2018ರಲ್ಲಿ ಆರಂಭಗೊಂಡ ಈ ಸಮ್ಮೇಳನ ವಿಚಾರ-ವಿಮರ್ಶೆ ಮಂಥನ-ಸಮಾಲೋಚನೆ ಗಳಿಗೆ ವಿಶಿಷ್ಟತೆ ತಂದುಕೊಟ್ಟಿತು. ಸಾಮಾನ್ಯ ಸಾಹಿತ್ಯ ನುಡಿಹಬ್ಬಗಳಷ್ಟೇ ಇರುವ ಕಾಲದಲ್ಲಿ ದೇಶದ ಇತರ ಪ್ರಮುಖ ಲಿಟ್-ಫೆಸ್ಟ್‌ಗಳ ಮಾದರಿ ಪಡೆದು, ಈ ಫೆಸ್ಟ್‌ಗೆ ನಾಂದಿ ಹಾಡಿತು.
2018ರಲ್ಲಿ ಮೊದಲ ಸಮ್ಮೇಳನವನ್ನು ಉದ್ಘಾಟನೆಯನ್ನು ಆರ್ಗನೈಸರ್ ಪತ್ರಿಕೆ ಸಂಪಾದಕ ಪ್ರೊ| ಪ್ರಫುಲ್ಲ ಕೇತ್ಕರ್, ತರಂಗ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ ಹಾಗೂ ನಿಟ್ಟೆ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಎನ್. ವಿನಯ ಹೆಗ್ಡೆ ನೆರವೇರಿಸಿದ್ದರು. ಹಿರಿಯ ಸಾಹಿತಿ ಡಾ|ಎಸ್.ಎಲ್.ಭೆ„ರಪ್ಪ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಗಿತ್ತು. ರಾಷ್ಟ್ರೀಯತೆ ವಿಚಾರಕ್ಕೆ ಮೊದಲ ಸಮ್ಮೇಳನ ಆದ್ಯತೆ ನೀಡಿ, ಚಿಂತಕ ಡಾ|ಡೇವಿಡ್ ಫ್ರಾಲಿ ಅವರು ರಾಮಮಂದಿರ ನಿರ್ಮಾಣದ ಬಗ್ಗೆ ಒಲವು ತೋರಿದ್ದರೆ, ಚಿತ್ರ ನಿರ್ಮಾ ಪಕ ವಿವೇಕ್ ಅಗ್ನಿ ಹೋತ್ರಿ ಅರ್ಬನ್ ನಕ್ಸಲಿಸಂ ಬಗ್ಗೆ ಚರ್ಚಿಸಿದ್ದರು.
2019ರಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ಚಂದ್ರಶೇಖರ ಕಂಬಾರ ಅವರು ಉದ್ಘಾಟನೆ ನೆರವೇರಿಸಿದ್ದರೆ, ಸಂಶೋಧಕ ಡಾ|ಚಿದಾನಂದ ಮೂರ್ತಿ ಪ್ರಶಸ್ತಿ ಸ್ವೀಕರಿಸಿ ಧರ್ಮವು ಭಾರತದ ಅಂತಃಸತ್ವ ಎಂದಿದ್ದರು. ಕೇಂದ್ರ ಸಚಿವ ಅನು ರಾಗ್ ಸಿಂಗ್ ಠಾಕೂರ್ ಪಾಲ್ಗೊಂಡಿದ್ದರು.
2021ರಲ್ಲಿ ನಡೆದ ಲಿಟ್‌ಫೆಸ್ಟ್ ಪ್ರಮುಖವಾಗಿ ಕೋವಿಡ್ ಅನಂತರದ ಬೆಳವಣಿಗೆಗಳ ಬಗ್ಗೆ ಗಮನ ಹರಿಸಿತ್ತು. 2022ರ ಸಮ್ಮೇಳನ ಉದ್ಘಾಟಸಿದವರು ಶತಾವಧಾನಿ ಡಾ| ಆರ್.ಗಣೇಶ್. ಆಗಿನ ಬಿಸಿಬಿಸಿ ವಿಷಯವಾಗಿದ್ದ ಪಠ್ಯದ ಬಗ್ಗೆ ರೋಹಿತ್ ಚಕ್ರತೀರ್ಥ, ಅರವಿಂದ ಚೊಕ್ಕಾಡಿ ಅವರ ಚರ್ಚೆಯೂ ಇತ್ತು.2023ರಲ್ಲಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಚಾಲನೆ ನೀಡಿದ್ದರು. ವಿದ್ವಾಂಸ ಡಾ| ತುಕಾರಾಮ ಪೂಜಾರಿ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.
ಇಂದು ನಾಳೆ ಲಿಟ್ ಫೆಸ್ಟ್
ಈ ಬಾರಿ ಡಾ| ಎಸ್.ಎಲ್.ಭೈರಪ್ಪ, ಶತಾವಧಾನಿ ಡಾ| ಆರ್. ಗಣೇಶ್, ಕೇಂದ್ರ ಸಚಿವ ಹದೀìಪ್ ಸಿಂಗ್ ಪುರಿ ಮುಖ್ಯ ಆಕರ್ಷಣೆ. ಅಲ್ಲದೆ ಬಿಜೆಪಿ ತಮಿಳುನಾಡಿನ ಅಧ್ಯಕ್ಷ ಅಣ್ಣಾಮಲೈ, ಫ್ರೆಂಚ್ ಲೇಖಕ ಡಾ| ಕ್ಲಾಡ್ ಆರ್ಪಿ, ಲೇಖಕಿ ಭಾವನಾ ಆರೋರ ಮುಂತಾದವರ ಗೋಷ್ಠಿಗಳಿವೆ. ಸಿನೆಮಾ, ತುಳು, ಸಂಸ್ಕೃತ, ಜಾನಪದ ಹೀಗೆ ಹತ್ತು ಹಲವು ಆಯಾಮಗಳ ಸಮ್ಮೇಳನವನ್ನು ಜ.11ರಂದು ಬೆಳಗ್ಗೆ 10ಕ್ಕೆ ಡಾ| ಎಸ್.ಎಲ್.ಭೈರಪ್ಪ ಉದ್ಘಾಟಿಸುವರು. ಸಾಮರ್ಥ್ಯ ಆಯೋಗದ ಸದಸ್ಯ ಡಾ|ಸುಬ್ರಹ್ಮಣ್ಯಂ ಅವರಿಗೆ ಈ ಬಾರಿಯ ಪ್ರಶಸ್ತಿ ಎರಡನೇ ದಿನವಾದ ಜ.12ರಂದು ನೀಡಲಾಗುತ್ತದೆ. ಹಲವು ಪುಸ್ತಕ ಮಳಿಗೆಗಳು ಇರಲಿದ್ದು ಸಾಹಿತ್ಯಾಸಕ್ತರ ಮನತಣಿಸಲಿವೆ.