Advertisement
ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ವತಿಯಿಂದ ನಡೆಯುವ ಸಮಾರಂಭದಲ್ಲಿ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿಗಾಗಿ ಭಾರತೀಯ ಭೂ ಸೇನೆಯ ನಿವೃತ್ತ ಯೋಧ, 2016ರಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಇನ್ನೂ ಪತ್ತೆಯಾಗದ ವಿಮಾನದಲ್ಲಿದ್ದ ಸುಬೇದಾರ್ ಏಕನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಬಿ. ಕಿರಣ್ ಬುಡ್ಲೆಗುತ್ತು ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಪಿ.ಎಚ್.ಆನಂದ್ ನೆರಿಯ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಪ್ರಧಾನ ಸಂಚಾಲಕ ಭಾಸ್ಕರ್ ದೇವಸ್ಯ, ಕೋಶಾ ಧಿಕಾರಿ ಶಿವರಾಮ ಗೌಡ ನಿನ್ನಿಕಲ್ ಉಪಸ್ಥಿತರಿದ್ದರು.
Related Articles
ಕುತ್ತಾರಿನ ಯೋಧ ಏಕನಾಥ ಶೆಟ್ಟಿ 1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಗೊಂಡು ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಅಪ್ರತಿಮ ಸಾಹಸ ಮೆರೆದು ಸೇನಾ ಪದಕ ಪಡೆದವರು. 2009ರಲ್ಲಿ ಸುಬೇದಾರ್ ರ್‍ಯಾಂಕ್‌ನೊಂದಿಗೆ ಸೇವಾ ನಿವೃತ್ತಿ ಹೊಂದಿದ್ದರು. ಆದರೆ ಊರಿನಲ್ಲಿ ದೊರೆತ ಉದ್ಯೋಗ ತ್ಯಜಿಸಿ ಮತ್ತೆ ಸೇನೆಯ ರಕ್ಷಣ ವಿಭಾಗಕ್ಕೆ ಸೇರ್ಪಡೆಗೊಂಡು ಕೇರಳದ ಕಣ್ಣೂರಿನಲ್ಲಿ ತರಬೇತಿ ಮುಗಿಸಿ ವಾಯುಸೇನೆಯಲ್ಲಿ ಎನ್‌ಸಿಸಿ ತರಬೇತುದಾರರಾಗಿ ನೇಮಕಗೊಂಡಿದ್ದರು. 2016ರ ಜುಲೈ 22ರಂದು ಸೇನಾ ಕರ್ತವ್ಯ ನಿಮಿತ್ತ ಚೆನ್ನೈನ ತಾಂಬರಂ ವಾಯುನೆಲೆಯಿಂದ ಅಂಡಮಾನ್ ಪೋರ್ಟ್‌ಬ್ಲೇರ್‌ಗೆ ವಿಮಾನದಲ್ಲಿ ತೆರಳುತ್ತಿದ್ದಾಗ ವಿಮಾನ ನಿಗೂಢವಾಗಿ ನಾಪತ್ತೆಯಾಗಿ ಈವರೆಗೂ ಸುಳಿವು ದೊರೆತಿಲ್ಲ. ವಿಮಾನದಲ್ಲಿದ್ದ 29 ಮಂದಿ ಸೈನಿಕರಲ್ಲಿ ಏಕೈಕ ಕನ್ನಡಿಗ ಯೋಧ ಏಕನಾಥ ಶೆಟ್ಟಿ ಎಂದು ಕಿರಣ್ ಬುಡ್ಲೆಗುತ್ತು ವಿವರಿಸಿದರು.
Advertisement