Advertisement

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

03:15 PM May 19, 2024 | Team Udayavani |

ಯಾವುದೇ ಕಾರ್ಯ ಪೂರ್ಣವಾಗಬೇಕಾದರೆ ಗಣೇಶನಿಗೆ ಪ್ರಾರ್ಥನೆ ಬಹಳ ಮುಖ್ಯ. ನಮ್ಮ ಹಿರಿಯರಂತೂ ಯಾವುದಾದರೂ ಒಳ್ಳೆ ಕೆಲಸ ಪ್ರಾರಂಭಿಸುವಾಗ ಏಕದಂತನಿಗೆ ಕೈ ಮುಗಿದು ಬೇಡುವುದುಂಟು.

Advertisement

ಗಣೇಶ ಹಿಂದೂ ಧರ್ಮದಲ್ಲಿ ಪವರ್‌ ಫ‌ುಲ್‌ ಗಾಡ್‌ ಎನಿಸಿಕೊಂಡಿದ್ದಾರೆ. ಜತೆಗೆ ವರ್ಷಗಳ ಹಿಂದೆ ಕಾಸರಗೋಡಿನ ಒಂದು ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕನ ಮಗನೊಬ್ಬ ಗರ್ಭಗುಡಿಯೊಳಗೆ ಗಣೇಶನ ಚಿತ್ರ ಬಿಡಿಸಿದ್ದನಂತೆ. ಅದೇ ಚಿತ್ರ ದೊಡ್ಡದಾಗುತ್ತಾ ಹೋಗಿ ಇದೀಗ ಸುಂದರ ಗಣೇಶನ ಮೂರ್ತಿಯಾಗಿದೆ. ಕಾಸರಗೋಡಿನಲ್ಲಿರುವ ಈ ಸ್ಥಳ ಇದೀಗ ಮಧೂರ್‌ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದೆ.

ಮಧೂರು ದೇವಸ್ಥಾನವು ಕಾಸರಗೋಡಿನಿಂದ ಸುಮಾರು ಎಂಟು ಕಿಲೋಮೀಟರ್‌ ದೂರದಲ್ಲಿ ಮಧುವಾಹಿನಿ ನದಿಯ ದಡದಲ್ಲಿದೆ. ಮಧೂರು ಅನಂತೇಶ್ವರ ವಿನಾಯಕ ದೇವಸ್ಥಾನದಲ್ಲೇ ಈ ಗಣೇಶ ನೆಲೆಯಾಗಿರುವುದು.

ಭವ್ಯವಾದ ದೇವಾಲಯವು ಭಕ್ತರನ್ನು ಮಾತ್ರವಲ್ಲದೆ ವಾಸ್ತುಶಿಲ್ಪದ ಅಭಿಜ್ಞರನ್ನು ಆಕರ್ಷಿಸುತ್ತದೆ. ದೇವಾಲಯವು 3 ಹಂತದ ಗುಮ್ಮಟವನ್ನು ಹೊಂದಿದ್ದು, ಮೇಲಿನ 2 ಅಂತಸ್ತಿನಲ್ಲಿ ತಾಮ್ರದ ತಗಡಿನ ಮೇಲ್ಛಾವಣಿ ಮತ್ತು ಕೆಳಭಾಗವು ಹೆಂಚಿನ ಛಾವಣಿಯನ್ನು ಹೊಂದಿದೆ.

ದೇವಾಲಯದ ಆವರಣದೊಳಗೆ ಸಂಕೀರ್ಣವಾಗಿ ಕೆತ್ತಿದ ಮರದ ಕಂಬಗಳು ಮತ್ತು ತೊಲೆಗಳು ಹಿಂದಿನ ಕಾಲದ ಕುಶಲಕರ್ಮಿಗಳ ಕಲಾನೈಪುಣ್ಯವನ್ನು ಸಾರಿ ಹೇಳುತ್ತದೆ. ದೇವಾಲಯದ ಗೋಡೆಗಳು ಮತ್ತು ಛಾವಣಿಗಳನ್ನು ಭಾರತೀಯ ಪುರಾಣದ ದೃಶ್ಯಗಳನ್ನು ಹೇಳುವ  ಗಾರೆ ಚಿತ್ರಗಳಿಂದ ಅಲಂಕರಿಸಲಾಗಿದೆ.

Advertisement

ನಮಸ್ಕಾರ ಮಂಟಪ ರಾಮಾಯಣದ ದೃಶ್ಯಗಳನ್ನು ಚಿತ್ರಿಸುವ ಮರದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ. ದೇವಾಲಯದ ಆವರಣದೊಳಗೆ ಆಳವಾದ ಬಾವಿ ಇದೆ. ಸೂರ್ಯನ ಕಿರಣಗಳಿಂದ ಅಸ್ಪೃಶ್ಯವಾಗಿ ಉಳಿಯುವ ನೀರು ಅನೇಕ  ರೋಗಗಳನ್ನು ಗುಣಪಡಿಸುವ ಅಂಶವನ್ನು ಹೊಂದಿದೆ ಎಂದು ನಂಬಲಾಗಿದೆ.

ಗಣಪತಿಯ ದೊಡ್ಡ ವಿಗ್ರಹವನ್ನು ಅಪ್ಪದಿಂದ ಮುಚ್ಚುವ ಮೂಡಪ್ಪ ಸೇವೆಯು ಇಲ್ಲಿ ನಡೆಸುವ ವಿಶೇಷ ಪೂಜೆ. ಇಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವೆಂದರೆ ಗಣೇಶ ಚತುರ್ಥಿ ಮತ್ತು ಮಧುರ್‌ ಬೇಡಿ ಎಂಬ ವಾರ್ಷಿಕ ಹಬ್ಬ.

ಮಧುರ್‌ ಬೇಡಿ ಐದು ದಿನಗಳ ವರ್ಣರಂಜಿತ ಹಬ್ಬ ಮತ್ತು ನಾಲ್ಕನೇ ದಿನ, ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.  ಈ ದೇವಾಲಯದ ಮುಖ್ಯ ದೇವರು ಮದನಂತೇಶ್ವರ ಎಂದು ಕರೆ ಯಲ್ಪಡುವ ಶಿವನಾಗಿದ್ದರೂ, ಮುಖ್ಯ ಗರ್ಭಗುಡಿ ಯಲ್ಲಿ  ದಕ್ಷಿಣಕ್ಕೆ ಎದುರಾಗಿರುವ ಗಣಪತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ಈ ದೇವಾಲಯದ ಅರ್ಚಕರು ಶಿವಳ್ಳಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಕಾಶಿ ವಿಶ್ವನಾಥ, ಧರ್ಮಶಾಸ್ತ, ಸುಬ್ರಹ್ಮಣ್ಯ, ದುರ್ಗಾಪರಮೇಶ್ವರಿ, ವೀರಭದ್ರ ಮತ್ತು ಗುಳಿಗ ಈ ದೇವಾಲಯದ ಉಪ ದೇವತೆಗಳು. ಮುಖ್ಯ ಗರ್ಭಗುಡಿಯೊಳಗೆ ಪಾರ್ವತಿ ದೇವಿಯ ಉಪಸ್ಥಿತಿಯೂ ಇದೆ.

ಆರಂಭದಲ್ಲಿ, ಗಣಪತಿ ಚಿತ್ರವನ್ನು ಬಾಲಕನು ಗರ್ಭಗೃಹದ ದಕ್ಷಿಣ ಗೋಡೆಯ ಮೇಲೆ ಬರೆದು ಆಟವಾಡುತಿದ್ದನಂತೆ. ಅವನು ಅದನ್ನು ಅಳಿಸಲು ಮರೆತು ಬಿಟ್ಟದ್ದರಿಂದ ಚಿತ್ರ ದಿನದಿಂದ ದಿನಕ್ಕೆ ದೊಡ್ಡದಾಯಿತು ಮತ್ತು ದಪ್ಪವಾಯಿತು. ಆದ್ದರಿಂದ ಹುಡುಗ ಗಣಪತಿಯನ್ನು ಬೊಡ್ಡ ಗಣೇಶ ಎಂದು ಕರೆದನು.

ಕೊನೆಗೆ ಚಿತ್ರವೇ ಮೂರ್ತಿಯಾಗಿ ಬದಲಾದ್ದರಿಂದ ದಿನಂಪ್ರತಿ ಅದಕ್ಕೆ  ಪೂಜೆ ಸಲ್ಲಿಸಲಾಗುತ್ತಿತ್ತು. ಗಣೇಶನ ಮೂರ್ತಿ ಉದ್ದವಾಗುತ್ತಾ ಹೋಗಿದ್ದರಿಂದ ಮೇಲ್ಛಾವಣಿಗೆ ತಾಗಬಾರದೆಂದು ಬ್ರಾಹ್ಮಣ ಗಣೇಶನ ತಲೆಗೆ ಗುದ್ದಲಿಯಿಂದ ಒಂದು ಏಟು ಹೊಡೆದನಂತೆ. ಇದೀಗ ಮೂರ್ತಿ ಉದ್ದವಾಗುವ ಬದಲು ದಪ್ಪವಾಗುತ್ತಾ ಹೋಗುತ್ತಿದೆ ಎಂದು ಜನರು ಹೇಳುತ್ತಾರೆ.

ಪುರಾಣದ ಪ್ರಕಾರ, ಸ್ಥಳೀಯ ತುಳು ಮೊಗೇರ್‌ ಸಮುದಾಯದ ಮಾದರು ಎಂಬ ಮುದುಕಿಯು ಶಿವಲಿಂಗದ ಉದ್ಭವ ಮೂರ್ತಿಯನ್ನು ಕಂಡುಹಿಡಿದವಳು ಎಂದು ಹೇಳಲಾಗುತ್ತದೆ. ಆಕೆ ಹುಲ್ಲು ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಆಕೆಯ ಕತ್ತಿ ಮೂರ್ತಿಗೆ ತಾಗಿ ಆ ಮೂರ್ತಿಯಿಂದ ರಕ್ತ ಬರಲು ಪ್ರಾರಂಭವಾಯಿತಂತೆ. ಕೂಡಲೇ ಆಕೆ ಅದನ್ನು ತಂದು ಬ್ರಾಹ್ಮಣರಿಗೆ ಉಪ್ಪಿಸಿದಳೆಂಬ ಕಥೆಯೂ ಇದೆ.  ಇಲ್ಲಿ ನಡೆಯುವ ಉತ್ಸವಗಳಿಗೆ  ಭಕ್ತರು ವಿವಿಧ ಸ್ಥಳಗಳಿಂದ ಆಗಮಿಸುತ್ತಾರೆ. ಪ್ರಸ್ತುತ, ದೇವಾಲಯವನ್ನು ಸರಕಾರವು ನಿರ್ವಹಿಸುತ್ತದೆ.

ದೇವಾಲಯವು ಬೇಸಗೆ ರಜೆಯ ಸಮಯದಲ್ಲಿ ಯುವ ವಟುಗಳಿಗೆ ವೇದ ತರಗತಿಗೆಳನ್ನು ನೀಡುತ್ತದೆ, ಇದು ಸಂಸ್ಕೃತ ಭಾಷೆಯಲ್ಲಿದ್ದು, ವಟುಗಳಿಗೆ ವಸತಿ, ಊಟವನ್ನು ದೇಗುಲದ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಾರೆ. ಭಕ್ತರು ಸಾಮಾನ್ಯವಾಗಿ ಮಹಾಗಣಪತಿಗೆ ಉದಯಾಸ್ತಮಾನ ರೂಪದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮಧೂರಿನ ಪ್ರಸಿದ್ಧ ಪ್ರಸಾದ ಅಪ್ಪ ತುಂಬಾ ರುಚಿಕರ. ಇದನ್ನು ಪ್ರತಿದಿನ ತಯಾರಿಸಲಾಗುತ್ತದೆ. ಮಾಡುವ ವಿಶೇಷ ಪೂಜೆಗಳಲ್ಲಿ ಸಹಸ್ರಪ್ಪ (ಸಾವಿರ ಅಪ್ಪಗಳು) ಪ್ರಮುಖವಾದುದು. ಇದು ಸಾವಿರ ಅಪ್ಪಗಳ ನೈವೇದ್ಯವನ್ನು ಒಳಗೊಂಡಿರುತ್ತದೆ ಮತ್ತು  ಭಕ್ತರು ಇವೆಲ್ಲವನ್ನೂ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇನ್ನೊಂದು  ವಿಶೇಷವಾದ ಪೂಜೆಯೆಂದರೆ ಮೂಡಪ್ಪಂ ಸೇವೆ.

ಈ ಸೇವೆಯಲ್ಲಿ ಮಹಾಗಣ ಪತಿಯ ಪ್ರತಿಮೆಯನ್ನು ಅಪ್ಪಂನಿಂದ ಮುಚ್ಚಲಾಗುತ್ತದೆ. ಈ ಸೇವೆ ಮಾಡುವಾಗ ಗಣೇಶನ ಮೂರ್ತಿ ಅಪ್ಪದಿಂದ  ಸಂಪೂರ್ಣವಾಗಿ ಮುಚ್ಚಿದ್ದರೂ ಎಲ್ಲಾದರೂ ಒಂದು ಕಡೆ  ಕಾಲಿ ಇರುತ್ತದಂತೆ. ಕಾರಣ ಗಣೇಶ ಸ್ವಲ್ಪ ಸ್ವಲ್ಪವೇ ದಪ್ಪವಾಗುತ್ತಾ ಹೋಗುತ್ತಿದ್ದಾನೆ ಎಂದು ನಂಬಲಾಗುತ್ತದೆ. ದೇಗುಲದಲ್ಲಿ ಸಾಮಾನ್ಯವಾಗಿ ಎಲ್ಲ ಪ್ರಮುಖ ಹಬ್ಬಗಳಂದು ವಿಶೇಷ ಪೂಜೆ ನಡೆಸಲಾಗುತ್ತದೆ.

-ಲಾವಣ್ಯ. ಎಸ್‌.

ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next