Advertisement

ನಿಮ್ಮ ಆಸ್ತಿ ಒತ್ತುವರಿಯೇ? ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ

11:57 AM Jan 16, 2017 | Team Udayavani |

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಆತಂಕಕ್ಕೆ ಒಳಗಾಗಿರುವ ಸಾರ್ವಜನಿಕರಿಗೆ ಒತ್ತುವರಿ ಬಗ್ಗೆ ಸೂಕ್ತ ಮಾಹಿತಿ ನೀಡಲು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌-ಬೆಂಗಳೂರು (ಐಐಎಂಬಿ) ಪ್ರತ್ಯೇಕ ವೆಬ್‌ಸೈಟ್‌ ಸೇವೆ ಪ್ರಾರಂಭಿಸಿದ್ದು, ಇದರಿಂದ ನಿಮ್ಮ ಆಸ್ತಿ ಒತ್ತುವರಿಯೇ ಅಲ್ಲವೇ ಎಂಬುದನ್ನು ಒಂದೇ ಕ್ಲಿಕ್‌ನಲ್ಲಿ ತಿಳಿಯಬಹುದು.

Advertisement

ಹೌದು, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಬಿಬಿಎಂಪಿಯು ರಾಜಕಾಲುವೆ ಒತ್ತುವರಿ ಜಾಗದಲ್ಲಿನ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲು ಮುಂದಾಗಿದೆ. ಆದರೆ, ಬಹುತೇಕ ಸಾರ್ವಜನಿಕರಿಗೆ ರಿಯಲ್‌ಎಸ್ಟೇಟ್‌ ಡೆವಲಪರ್ಸ್‌ ಸುಳ್ಳು ದಾಖಲೆ ಸೃಷ್ಟಿಸಿ ನಿವೇಶನ, ಮನೆ, ಫ್ಲ್ಯಾಟ್‌ ಮಾರಾಟ ಮಾಡಿದ್ದು, ತಮ್ಮ ಆಸ್ತಿ ಒತ್ತುವರಿ ಜಾಗದಲ್ಲಿರುವುದೇ ಬಹುತೇಕ ಮಂದಿಗೆ ಗೊತ್ತಿಲ್ಲ. ಹೀಗಾಗಿಯೇ ಹೊಸದಾಗಿ ಆಸ್ತಿ ಖರೀದಿಸುವವರು ಸಹ ರಾಜಕಾಲುವೆ ಒತ್ತುವರಿ ಆಸ್ತಿಯನ್ನು ಖರೀದಿಸಿ ಮೋಸ ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಈ ವೆಬ್‌ಸೈಟ್‌ ಅನುಕೂಲ ಕಲ್ಪಿಸಲಿದೆ.

ಒತ್ತುವರಿ ಪತ್ತೆ ಸುಲಭ: ಇದನ್ನು ತಪ್ಪಿಸಲು ಹಾಗೂ ಸಾರ್ವಜನಿಕರಲ್ಲಿನ ಆತಂಕ ನಿವಾರಣೆ ಮಾಡಲು ಐಐಎಂಬಿ “ರಾಜಕಾಲುವೆ.ಕಾಂ’ ವೆಬ್‌ಸೈಟ್‌ ರೂಪಿಸಿದೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ರಾಜಕಾಲುವೆ ಹಾಗೂ ರಾಜಕಾಲುವೆ ನಿಷೇಧಿತ ಪ್ರದೇಶ (ಬಫ‌ರ್‌ಜೋನ್‌) ಒತ್ತುವರಿ ಜಾಗದಲ್ಲಿನ ಆಸ್ತಿಗಳ ಸಂಪೂರ್ಣ ಮಾಹಿತಿ ಅಡಕವಾಗಿದೆ. ಕಂದಾಯ ಗ್ರಾಮ ನಕ್ಷೆ ಜತೆಗೆ ಕೆಂಪು, ಹಳದಿ, ಬೂದು ಹಾಗೂ ಹಸಿರು ಬಣ್ಣದಲ್ಲಿ ಆಸ್ತಿಯ ಪಟ್ಟಿ ತೆರೆದುಕೊಳ್ಳಲಿದೆ. ಈ ಬಣ್ಣದ ಆಧಾರದ ಮೇಲೆ ಆಸ್ತಿಯು ಒತ್ತುವರಿಯೇ ಅಲ್ಲವೇ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಒತ್ತುವರಿ ಬಗ್ಗೆ ತಿಳಿದುಕೊಳ್ಳಲು ವಾರಗಟ್ಟಲೆ ಪಾಲಿಕೆ ಕಚೇರಿಗೆ ಅಲೆಯುವಂತಿಲ್ಲ.

ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಸಲುವಾಗಿಯೇ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಹಾಗೂ ರಿಯಲ್‌ ಎಸ್ಟೇಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಆರ್‌ಇಆರ್‌ಐ) ಒಟ್ಟಾಗಿ ಬಿಬಿಎಂಪಿ ಕಂದಾಯ ಇಲಾಖೆಯ ಹಾಗೂ ಭೂ ಮಾಪನ ಇಲಾಖೆ ಮಾಹಿತಿ ನೆರವಿನಿಂದ ಈ ವೆಬ್‌ಸೈಟ್‌ ರೂಪಿಸಿದೆ. ಇದರಿಂದ ಸಾರ್ವಜನಿಕರ ಬಹುತೇಕ ಗೊಂದಲಗಳು ನಿವಾರಣೆಯಾಗಲಿವೆ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್‌. ಮಂಜುನಾಥಪ್ರಸಾದ್‌ ಹೇಳಿದ್ದಾರೆ.

ರಿಯಲ್‌ಎಸ್ಟೇಟ್‌ ಚೇತರಿಕೆ?
ರಾಜ್ಯ ಸರ್ಕಾರವು ನಾಲ್ಕು ತಿಂಗಳ ಹಿಂದೆ ರಾಜಕಾಲುವೆ ಒತ್ತುವರಿ ವ್ಯಾಪ್ತಿಗೆ ಬರುವ ವಸತಿ ಕಟ್ಟಡ, ವಾಣಿಜ್ಯ ಕಟ್ಟಡಗಳನ್ನು ಏಕಾಏಕಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಆತಂಕಕ್ಕೆ ಗುರಿಯಾಗಿದ್ದಾರೆ. ಇದರಿಂದ ರಾಜಕಾಲುವೆ ಸುತ್ತಮುತ್ತಲಿನ ಆಸ್ತಿಗಳ ಖರೀದಿ, ಮಾರಾಟದಲ್ಲಿ ಭಾರಿ ಕುಸಿತ ಕಂಡಿದ್ದು, ಒತ್ತುವರಿ ಬಗೆಗಿನ ಮಾಹಿತಿಯಿಂದಾಗಿ ಒತ್ತುವರಿಯಾಗದ ಆಸ್ತಿಗಳ ರಿಯಲ್‌ಎಸ್ಟೇಟ್‌ ವ್ಯವಹಾರದಲ್ಲಿ ಚೇತರಿಕೆ ನಿರೀಕ್ಷಿಸಲಾಗಿದೆ ಎಂದು ರಿಯಲ್‌ಎಸ್ಟೇಟ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಆಸ್ತಿ ಬಗ್ಗೆ ಹೀಗೆ ಪರೀಕ್ಷಿಸಿಕೊಳ್ಳಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿ ರಾಜಕಾಲುವೆ ಅಥವಾ ನಶಿಸಿಹೋಗಿರುವ ರಾಜಕಾಲುವೆ ಮೇಲೆ ಅಥವಾ ಹತ್ತಿರದಲ್ಲಿ ಆಸ್ತಿ ಹೊಂದಿರುವವರು www.rajakaluve.org ಗೆ ಭೇಟಿ ನೀಡಿ. ವೆಬ್‌ಸೈಟ್‌ನಲ್ಲಿ ತಾಲೂಕು, ಹೋಬಳಿ ಹಾಗೂ ಕಂದಾಯ ಗ್ರಾಮ ಆಯ್ಕೆ ಮಾಡಿಕೊಂಡರೆ ಆ ಗ್ರಾಮದಲ್ಲಿನ ಒತ್ತುವರಿಗಳ ವಿವರ ಬರುತ್ತದೆ. ಅಲ್ಲಿ ನಿಮ್ಮ ಆಸ್ತಿ ಸರ್ವೆ ನಂಬರ್‌ನ ಸ್ಟೇಟಸ್‌ ಹಾಗೂ ಗ್ರಾಮ ನಕ್ಷೆ ಎಷ್ಟು ಒತ್ತುವರಿಯಾಗಿದೆ ಎಂಬಿತ್ಯಾದಿ ಮಾಹಿತಿ ಜತೆಗೆ ಕೆಂಪು, ಹಳದಿ, ಬೂದು, ಹಸಿರು ಬಣ್ಣದ ಮೂಲಕ ಒತ್ತುವರಿ ಸ್ಟೇಟಸ್‌ ಸೂಚಿಸಲಾಗಿದೆ.

ಇನ್ನೂ ಅಪ್ಡೆಟ್‌ ಆಗಬೇಕು
ಐಐಎಂಬಿ ಹಾಗೂ ಆರ್‌ಇಆರ್‌ಐ ಮಾಡಿ ರುವ ವೆಬ್‌ಸೈಟ್‌ ರಾಜಕಾಲುವೆ ಒತ್ತುವರಿ ವಿವರ ಪಡೆಯಲು ಅತಿ ಸೂಕ್ತವಾಗಿದೆ. ಆದರೆ, ಸರ್ವೆ ನಂಬರ್‌ ಆಧಾರದ ಮೇಲೆ ಇನ್ನಷ್ಟು ಕರಾರುವಕ್ಕಾದ ಮಾಹಿತಿ ನೀಡಲು ವೆಬ್‌ಸೈಟ್‌ನ್ನು ಅಪ್ಡೆàಟ್‌ ಮಾಡಲಾಗುತ್ತಿದೆ. ಸಾರ್ವ ಜನಿಕರ ಗೊಂದಲ ನಿವಾರಿಸುವಲ್ಲಿ ಇದು ಉತ್ತಮ ಪ್ರಯತ್ನ.
-ಅಶ್ವಿ‌ನ್‌ ಮಹೇಶ್‌, ನಗರಾಭಿವೃದ್ಧಿ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next