Advertisement
ಪ್ರಶಾಂತ್ ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. 15 ದಿನಗಳ ಹಿಂದೆ ನೇರವಾಗಿ ಚುನಾವಣ ರಾಜಕೀಯಕ್ಕೆ ಧುಮುಕುವ ಆಲೋಚನೆಯಲ್ಲಿ ಬಿರುಸಿನ ನಡಿಗೆಯಲ್ಲಿದ್ದವರು ದಿಢೀರನೇ ಮಂದಗತಿಗೆ ಹೊರಳಿದ್ದಾರೆ. ಬಹುಶಃ ಉದ್ದ ಜಿಗಿತಕ್ಕೆ ಸಿದ್ಧವಾಗುವ ಮುನ್ನ ಸಣ್ಣದೊಂದು ತಾಲೀಮು ಇರಬಹುದು. ಈ ತಾಲೀಮಿಗಿಂತ ಮುನ್ನ ಕಾಂಗ್ರೆಸ್‌ನ ಜವಾಬ್ದಾರಿಯನ್ನು (ಚುನಾವಣೆ ರಣತಂತ್ರ ಹೊಸೆಯುವ) ಯಾಕೆ ತಿರಸ್ಕರಿಸಿದ್ದರು ಎಂಬುದು ದೊಡ್ಡ ಕುತೂಹಲವೇ. ಕಾಂಗ್ರೆಸ್‌ನಲ್ಲಿ ಪ್ರಸ್ತುತ ಎರಡು ಸ್ಪಷ್ಟವಾದ ಗುಂಪುಗಳಿವೆ. ಹಿರಿಯರದ್ದು ಒಂದು. ಗಾಂಧಿ ಮನೆತನದ ಅನುಯಾಯಿಗಳದ್ದು ಮತ್ತೂಂದು. ಮೊದಲನೆಯ ಗುಂಪಿಗೆ ಪಕ್ಷ ಸರಿ ಹೋಗಲೇಬೇಕಿದೆ. ಎರಡನೆಯ ಗುಂಪಿಗೆ ಅಂಥದೊಂದು ಅಚ್ಚರಿಯೂ ಗಾಂಧಿ ಮನೆತನದಿಂದಲೇ ಸಾಧ್ಯವೆಂಬ ಅಸಾಧ್ಯ ನಂಬಿಕೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸೋಲಿನಲ್ಲೂ ಸಣ್ಣ ದೊಂದು ಸಮಾಧಾನ ತಂದಿರುವುದೆಂದರೆ ಪ್ರಶಾಂತ್‌ರ “ಜನ್ ಸುರಾಜ್’ ಘೋಷಣೆ. ಈ ಮೂಲಕ ತೃತೀಯ ರಂಗದ ಯಾವ ಪಕ್ಷಕ್ಕೂ ಪ್ರಶಾಂತ್ ಸಲಹೆಗಾರರಾಗಿ ಹೋಗಲಾರರು ಎಂದೆನಿಸಿದೆ. ಕಳೆದ ಮೂರು ಚುನಾವಣೆ ಗಳಲ್ಲಿ ಕಾಂಗ್ರೆಸ್‌ನ ಇದ್ದ ಬದ್ದ ಶಕ್ತಿ (ಮತಗಳ ಬಲ)ಯನ್ನೂ ಕುಗ್ಗಿಸಿ ಕಂಗೆಡಿಸಿದ್ದು ಒಂದು ಕಾಲದಲ್ಲಿ ಯುಪಿಎ ಜತೆ ಇದ್ದ ಹಲವು ಪಕ್ಷಗಳೇ. ಈಗ ಪ್ರಧಾನಿಯಾಗಬೇಕೆಂಬ ಮಹದಾಸೆಯಿಂದ ವಿಪಕ್ಷಗಳನ್ನೆಲ್ಲ ಒಟ್ಟುಗೂಡಿಸು ತ್ತಿರುವ ಮಮತಾ ಬ್ಯಾನರ್ಜಿಯ ಓಟ ಕಾಂಗ್ರೆಸ್‌ಗೆ ಕೊಂಚ ಸಿಟ್ಟು ಬರಿಸಿದೆ. ಕಾರಣ, ಮಮತಾರ ನಡೆಗಿಂತಲೂ ಅವರ ಧೋರಣೆ. ಉಳಿದ ಸಣ್ಣ ಪುಟ್ಟ ಹಾಗೂ ಪ್ರಾದೇಶಿಕ ಪಕ್ಷಗಳಂತೆ ತನ್ನನ್ನೂ (ರಾಷ್ಟ್ರೀಯ ಪಕ್ಷ) ಪರಿಗಣಿಸುತ್ತಿದ್ದಾರೆಂಬ ಬೇಸರ ಕಾಂಗ್ರೆಸ್‌ಗಿದೆ. ಈಗ ಪ್ರಶಾಂತ್ ಹೊಸ ಹಾದಿ ತುಳಿದಿರುವುದು ಕಾಂಗ್ರೆಸ್‌ಗೂ ಸಣ್ಣದೊಂದು ಖುಷಿ ನೀಡಿದೆ. ಇಲ್ಲವಾದರೆ ಮಮತಾರನ್ನು ಮುಂದು ಮಾಡಿ ಕೊಂಡು ಉಳಿದ ಪಕ್ಷ ಗಳೊಂದಿಗೆ ಪ್ರಶಾಂತ್ ಕಾಂಗ್ರೆಸ್‌ನ ಬಾಗಿಲಿಗೆ ಬಂದಿದ್ದರೆ, “ಮಹಾ ಘಟಬಂಧನ್’ನ ಮೆರ ವಣಿಗೆಗೆ ಕಾಂಗ್ರೆಸ್ ಸೇರಲೇಬೇಕಿತ್ತು. ಇವೆಲ್ಲವೂ ಪ್ರಶಾಂತ್‌ರ ಹೊಸ ನಡೆ ತಂದುಕೊಟ್ಟಿರುವ ಸಮಾಧಾನಗಳು. ಇನ್ನು ಪ್ರಶಾಂತ್ “ಬಾತ್ ಹೈ ಬಿಹಾರ್ ಕೀ’ ಎನ್ನುತ್ತಾ ಮುಂದೊಂದು ದಿನ ಮುಖ್ಯಮಂತ್ರಿಯ ಕಿರೀಟ ಧರಿಸಬಹುದೇ? ಗೊತ್ತಿಲ್ಲ. ಆದರೆ ಅಂಥದ್ದೊಂದು ಕನಸನ್ನು ಕಟ್ಟಿಕೊಂಡಿದ್ದಾರೆ.
Related Articles
Advertisement
ಬಿಹಾರದ ರಾಜಕೀಯದಲ್ಲಿ ಮಿಂಚಲು (ಶೈನಿಂಗ್) ಪ್ರಶಾಂತ್ ಇದೇ ಮೊದಲ ಬಾರಿಗೆ ಪ್ರಯತ್ನಿಸುತ್ತಿರುವುದೇನೂ ಅಲ್ಲ. ಈಗಾಗಲೇ ಮೂರು ಬಾರಿ ಅಂಥ ಪ್ರಯತ್ನ ಮಾಡಿದ್ದಾರೆ. 2015ರಲ್ಲಿ ಬಿಹಾರದಲ್ಲಿ ಆರ್‌ಜೆಡಿ ಮತ್ತು ಜೆಡಿಯುಗೆ ಚುನಾವಣೆಯ ಕಾರ್ಯತಂತ್ರವನ್ನು ಯೋಜಿಸುತ್ತಿದ್ದರು. ಈ ಮಹಾ ಒಕ್ಕೂಟ ಗೆದ್ದು ನಿತೀಶ್ ಕುಮಾರ್ ಮುಖ್ಯಮಂತ್ರಿಯಾದರು. ಪ್ರಶಾಂತ್‌ಗೆ ಯೋಜನಾ ಮತ್ತು ಅನುಷ್ಠಾನದ ಹೊಣೆ ಸಿಕ್ಕಿತು. ಆದರೆ ಬಹಳ ದಿನ ಉಳಿಯಲಿಲ್ಲ. 2018ರಲ್ಲಿ ಜೆಡಿಯು ಉಪಾಧ್ಯಕ್ಷರಾದರು. ಆದರೆ ಎನ್‌ಆರ್‌ಸಿ ಕಾಯಿದೆಯ ಸಂದರ್ಭ ಪಕ್ಷಕ್ಕೆ ಮುಜುಗರ ಸೃಷ್ಟಿಯಾದ ಕಾರಣ ಅವರನ್ನು ಹೊರ ಹಾಕಲಾಗಿತ್ತು. 2020ರಲ್ಲಿ ಮತ್ತೆ ಬಿಹಾರದಲ್ಲಿ ಕಾಣಿಸಿಕೊಂಡಿದ್ದು ತಮ್ಮ “ಬಾತ್ ಬಿಹಾರ್ ಕೀ’ ಎಂಬ ಆಂದೋಲನದ ಮೂಲಕ. ಆಗಲೂ ಕಾಂಗ್ರೆಸ್ ನಾಯಕ ಶಾಶ್ವತ್ ಗೌತಮ್ “ಇದು ನನ್ನ ಆಲೋಚನೆಯನ್ನೇ ಪ್ರಶಾಂತ್ ಕದ್ದಿದ್ದಾರೆ’ ಎಂದು ಆರೋಪಿಸಿದರು. ಹಾಗಾಗಿ ಅದೂ ಸಹ ಪ್ರಶಾಂತ್‌ರ ಮುಖಕ್ಕೆ ಮಸಿ ಬಳಿಯಿತು.
ಈಗ ಮಧ್ಯಮ ವರ್ಗದವರ ಕೊಂಚ ಬೆಂಬಲದಿಂದ ದಿಲ್ಲಿ ಮತ್ತು ಪಂಜಾಬ್‌ನಲ್ಲೂ ಗದ್ದುಗೆ ಏರಿರುವ ಅರವಿಂದ ಕೇಜ್ರಿವಾಲ್‌ರ ವಿಜಯ, ಪ್ರಶಾಂತ್‌ರಲ್ಲೂ ಹೊಸ ಹುಮ್ಮಸ್ಸು ಮೂಡಿಸಿರುವುದು ನಿಜ. ಅದಾಗಿಯೇ ಅಭಿವೃದ್ಧಿ ವಿಷಯದ ಮೇಲಿನ ರಾಜಕೀಯ ಮಾಡುವುದಾಗಿ ಹೊರಟಿದ್ದಾರೆ ಪ್ರಶಾಂತ್. ಜಾತಿ ರಾಜಕಾರಣದ ಸ್ಪಷ್ಟ ಚಹರೆಯನ್ನು ಹೊಂದಿರುವ ಬಿಹಾರದ ರಾಜಕಾರಣದಲ್ಲಿ ಪ್ರಶಾಂತ್‌ರ ಅಭಿವೃದ್ಧಿ ಪರ ಚರ್ಚೆಗೆ ಜನ ಸೇರುವರೋ ಬೆಂಬಲಿಸುವರೋ ಕಾದು ನೋಡಬೇಕಿದೆ.
ದೊಡ್ಡ ಸಂಪತ್ತು ಇದ್ದವನಿಗೊಂದು ಹೊಟೇಲ್ ಮಾಡುವ ಎನಿಸಿತು. ಅದಕ್ಕಾಗಿ ಹೊಟೇಲ್ ಬಗ್ಗೆ ಚೆನ್ನಾಗಿ ತಿಳಿದವನೊಬ್ಬನನ್ನು ವ್ಯವಸ್ಥಾಪಕನನ್ನಾಗಿ ನೇಮಿಸಿಕೊಂಡ. ಹೊಟೇಲ್ ಸಾಹಸ ಯಶಸ್ವಿಯಾಯಿತು. ನಿತ್ಯವೂ ವ್ಯವಸ್ಥಾಪಕನದ್ದೇ ಹೊಣೆಗಾರಿಕೆ. ಇಂತಿರುವ ವ್ಯವಸ್ಥಾಪಕ ನಿಗೆ ಒಂದು ದಿನ, “ಎಲ್ಲವೂ ನಾನೇ ಮಾಡುತ್ತಿದ್ದೇನೆ. ಬಂಡವಾಳ ಮಾತ್ರ ಅವರದ್ದು. ನನಗೆ ಸಂಬಳ. ಯಾಕೆ ನಾನೇ ಹೊಟೇಲ್ ಮಾಡಬಾರದು’ ಎಂದೆನಿಸಿತಂತೆ. ಅಂದುಕೊಂಡ ಹಾಗೆ ಆ ವ್ಯವಸ್ಥೆಯಿಂದ ಹೊರಬಂದು ದೊಡ್ಡದೊಂದು ಹೊಟೇಲ್ ಇಟ್ಟನಂತೆ. ಸ್ವಲ್ಪ ದಿನಗಳಾದ ಮೇಲೆ ಸೋಲಿನ ರುಚಿ ತಿಳಿದದ್ದು ಬೇರೆ ಮಾತು. ಆದರೆ ಇದು ಕಥೆ. ಇಂಥದೊಂದು ಪ್ರಯೋಗದಲ್ಲಿ ಸೋತವರೂ ಇದ್ದಾರೆ, ಗೆದ್ದವರೂ ಇದ್ದಾರೆ. ಪ್ರಶಾಂತ್ ಅವರು ಯಾವ ಸಾಲಿಗೆ ಸೇರುತ್ತಾರೋ ಕಾಲವೇ ಹೇಳಬೇಕು.
– ಅರವಿಂದ ನಾವಡ