Advertisement

ಇರುಸು-ಮುರುಸು ತಂದ ಯಡಿಯೂರಪ್ಪ ಹೇಳಿಕೆ

12:30 AM Mar 02, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ “ಆಪರೇಷನ್‌ ಕಮಲ’ ಆಡಿಯೋ ಪ್ರಕರಣದಿಂದ ಪಕ್ಷಕ್ಕೆ ಉಂಟಾಗಿದ್ದ ಹಿನ್ನಡೆಯನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಬಿಜೆಪಿ ನಾಯಕರಿಗೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆ ತೀವ್ರ ಇರುಸು ಮುರುಸು ಉಂಟು ಮಾಡಿದೆ.

Advertisement

“ಬಾಲಕೋಟ್‌ನಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯಿಂದ ಮೋದಿ ಅಲೆ ಎದ್ದಿದ್ದು, ಲೋಕಸಭಾ
ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲಲಿದ್ದೇವೆ’ಎಂಬುದಾಗಿ ಯಡಿಯೂರಪ್ಪ ನೀಡಿರುವ ಹೇಳಿಕೆ ರಾಷ್ಟ್ರ ಮಟ್ಟದಲ್ಲೂ ಭಾರೀ ಪ್ರತಿರೋಧಕ್ಕೆಕಾರಣವಾಗಿದ್ದು, ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿದೆ. ಈ ನಡುವೆ ಬಿಜೆಪಿ ನಾಯಕರು ಡ್ಯಾಮೇಜ್‌ ಕಂಟ್ರೋಲ್‌ಗೆ ತೀವ್ರ ಕಸರತ್ತು ನಡೆಸಿದ್ದಾರೆ.

ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರ ಪೈಶಾಚಿಕ ದಾಳಿ ಘಟನೆ ಬಳಿಕ ದೇಶಾದ್ಯಂತ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದವು. ನಂತರದ ಕೆಲ ಬೆಳವಣಿಗೆಗಳ ಬಗ್ಗೆ ರಾಜಕೀಯ ನಾಯಕರ ಕೆಸರೆರಚಾಟ ಹೊರತುಪಡಿಸಿದರೆ ರಾಜಕೀಯ ಬೆರೆಸುವ ಕೆಲಸ ನಡೆದಂತಿರಲಿಲ್ಲ. ಆದರೆ ಯಡಿಯೂರಪ್ಪ ನೀಡಿದ ಹೇಳಿಕೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಾದ್ಯಂತ ವಿವಾದ ಕಿಡಿ ಹೊತ್ತಿಸಿದೆ.

ವರಿಷ್ಠರ ಅಸಮಾಧಾನ: ಯಡಿಯೂರಪ್ಪ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ವರಿಷ್ಠರು ತೀವ್ರ ಅಸಮಾಧಾನಗೊಂಡಿದ್ದಾರೆ. ಪಕ್ಷದ ಹಿರಿಯರು ಹಾಗೂ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವವರೇ ಈ ರೀತಿಯ ಹೇಳಿಕೆ ನೀಡುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಸಾರ್ವಜನಿಕವಾಗಿ ಮಾತನಾಡುವಾಗ, ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಎಚ್ಚರ ವಹಿಸಬೇಕೆಂದು ರಾಜ್ಯದ ಎಲ್ಲ ನಾಯಕರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದು ಹಲವು ನಾಯಕರು, ಶಾಸಕರಿಗೆ ಇರುಸು ಮುರುಸು ತಂದಂತಿದೆ. ಹಾಗಿದ್ದರೂ ಯಡಿಯೂರಪ್ಪ ಅವರ ಪರವಾಗಿ ಸಮರ್ಥನೆಗೆ ನಿಂತಿರುವ ಕೆಲ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿ ಮುಜುಗರ ತಪ್ಪಿಸುವ ಪ್ರಯತ್ನದಲ್ಲಿದ್ದಾರೆಂದು ಬಿಜೆಪಿ ಹಿರಿಯ ಶಾಸಕರೊಬ್ಬರು ತಿಳಿಸಿದರು.

Advertisement

ಸಮರ್ಥನೆ ಕಷ್ಟ: ಇತ್ತೀಚೆಗೆ ಭಾರಿ ಸದ್ದು ಮಾಡಿದ್ದ “ಆಡಿಯೋ ಪ್ರಕರಣ’ದಲ್ಲೇ ಬಿಜೆಪಿ ರಾಜ್ಯ ಮಾತ್ರವಲ್ಲ ದೆ ರಾಷ್ಟ್ರ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿತ್ತು.ಆ ವಿವಾದದಿಂದ ಹೊರಬಂದು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹೊತ್ತಲ್ಲೇ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿರುವುದು ದುರದೃಷ್ಟಕರ. ಸಾರ್ವಜನಿ ಕರಿಗಷ್ಟೇ ಅಲ್ಲದೇ ಪಕ್ಷದ ಕಾರ್ಯಕರ್ತರಿಗೆ ಉತ್ತರ ನೀಡುವುದೂ ಕಷ್ಟಕರವಾಗಲಿದೆ. ಇಂತಹ ಘಟನೆಗ ಳಿಂದ ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗಲಿದ್ದು, ಯುವ ಮತದಾರರ ಮೇಲೂ ಪರಿಣಾಮ ಬೀರುವ ಆತಂಕ ಮೂಡಿದೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿದರು.

ಈ ಬೆಳವಣಿಗೆಗಳನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ಸ್ಪಷ್ಟ ಸೂಚನೆ ನೀಡುವ ಸಾಧ್ಯತೆಯಿದೆ.ಜತೆಗೆ ಚುನಾವಣೆವರೆಗೂ ಯಾರೊಬ್ಬರೂ ಈ ವಿವಾ ದಾತ್ಮಕ ಹೇಳಿಕೆ ನೀಡದಂತೆ ರಾಷ್ಟ್ರೀಯ ನಾಯಕರು ತಾಕೀತು ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದರು.

ಎಂ ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next