Advertisement

ಯಡಿಯೂರಪ್ಪ ಮುಂದಿನ ಸಿಎಂ ಅಭ್ಯರ್ಥಿ: ಅಮಿತ್‌ ಶಾ

06:05 AM Aug 13, 2017 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಅಭ್ಯರ್ಥಿ. ಭಿನ್ನಮತ ಮರೆತು ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರಿಗೆ ಸ್ಪಷ್ಟವಾಗಿ ಹೇಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯ ಬಿಜೆಪಿಯಲ್ಲಿ ಬೂದಿ ಮಚ್ಚಿದ ಕೆಂಡದಂತಿರುವ ಭಿನ್ನಮತಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ.

Advertisement

ಇನ್ನೊಂದೆಡೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೇ ಆಗಿದ್ದರೂ ಅಭ್ಯರ್ಥಿಗಳ ಆಯ್ಕೆ ವಿಚಾರವನ್ನು ಸಮೀಕ್ಷಾ ವರದಿ ಆಧರಿಸಿ ವರಿಷ್ಠರೇ ಅಂತಿಮಗೊಳಿಸುತ್ತಾರೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಅವರಿಗೂ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆ ಮೂಲಕ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಪರೋಕ್ಷ ಸೂಚನೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ಮೂರು ದಿನಗಳ ರಾಜ್ಯ ಭೇಟಿಗಾಗಿ ಶನಿವಾರ ಬೆಂಗಳೂರಿಗೆ ಆಗಮಿಸಿದ ಅವರು, ಕೋರ್‌ ಕಮಿಟಿ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್‌ ಮತ್ತು ಸಂಸದರು ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳು, ಮೋರ್ಚಾಗಳ ಅಧ್ಯಕ್ಷರು- ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರ ಜತೆ ಪ್ರತ್ಯೇಕ ಸಭೆಗಳನ್ನು ನಡೆಸಿ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ಶಾಸಕರು, ಸಂಸದರ ಸಭೆಯಲ್ಲಿ ಅತ್ಯಂತ ಸೌಮ್ಯವಾಗಿದ್ದ ಅಮಿತ್‌ ಶಾ ಅವರು ಕೋರ್‌ ಕಮಿಟಿ ಸಭೆ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಕಠಿಣವಾಗಿದ್ದರು ಎಂದು ಮೂಲಗಳು ಹೇಳಿವೆ.

ಭಿನ್ನಾಭಿಪ್ರಾಯ ವಿಚಾರ ನಮಗೆ ಬಿಡಿ:
ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಆದರೆ, ರಾಜ್ಯಮಟ್ಟದಲ್ಲಿ ನಾಯಕರ ಭಿನ್ನಾಭಿಪ್ರಾಯಗಳಿಂದ ಸಮಸ್ಯೆಯಾಗುತ್ತಿದೆ ಎಂದು ಪದಾಧಿಕಾರಿಗಳ ಸಭೆಯಲ್ಲಿ ಮೂವರು ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಅಮಿತ್‌ ಶಾ, ರಾಜ್ಯಮಟ್ಟದ ನಾಯಕ ನಡುವೆ ಇರುವ ಭಿನ್ನಾಭಿಪ್ರಾಯಗಳ ಬಗ್ಗೆ ನಾವು ಗಮನ ಹರಿಸುತ್ತೇವೆ. ಈ ಬಗ್ಗೆ ಯೋಚನೆ ಮಾಡದೆ  ಬೂತ್‌ ಮಟ್ಟದಲ್ಲಿ ಸಂಘಟನೆ ಬಲಗೊಳಿಸುವ ಕೆಲಸಕ್ಕೆ ನೀವು ಗಮನಹರಿಸಿ ಎಂದು ಎಲ್ಲಾ ವಿಭಾಗಗಳ ಮುಖಂಡರಿಗೆ ಖಡಕ್‌ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತ್ಯೇಕ ಕ್ರಿಯಾ ಯೋಜನೆ:
ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯಮಟ್ಟದ ಎಲ್ಲಾ ನಾಯಕರು, ಮುಖಂಡರು, ಸಂಸದರು, ಶಾಸಕರು, ಸ್ಥಳೀಯ ಮುಖಂಡರಿಗೆ ಪಕ್ಷದ ವತಿಯಿಂದಲೇ ಕಾರ್ಯತಂತ್ರಗಳನ್ನು ರೂಪಿಸಲಾಗುವುದು. ಅವುಗಳನ್ನು ಅನುಷ್ಠಾನಗೊಳಿಸಿ ಮುಂಬರುವ ಚುನಾವಣೆಯಲ್ಲಿ ನೀವೂ ಗೆದ್ದು ಬರಬೇಕು, ಉಳಿದವರೂ ಗೆಲ್ಲುವಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಕೆಲಸ ಮಾಡಬೇಕು ಎಂದು ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮತ್ತು ಸಂಸದರ ಸಭೆಯಲ್ಲಿ ಅಮಿತ್‌ ಶಾ ಅವರು ಸೂಚನೆ ನೀಡಿದರು ಎಂದು ಹೇಳಲಾಗಿದೆ.

Advertisement

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಸಹ ಉಸ್ತುವಾರಿ ಪುರಂದರೇಶ್ವರಿ, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದಗೌಡ, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ನಾಯಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ
ಪಕ್ಷದ ನಾಯಕರ ನಡುವಿನ ಭಿನ್ನಾಭಿಪ್ರಾಯ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ವೈಫ‌ಲ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಈ ವಿಚಾರದಲ್ಲಿ ರಾಜ್ಯ ಸಮಿತಿ ತನ್ನ ತಪ್ಪು ತಿದ್ದಿಕೊಳ್ಳದೇ ಇದ್ದಲ್ಲಿ ಅದನ್ನು ಬದಲಾವಣೆ ಮಾಡಲು ಹಿಂಜರಿಯುವುದಿಲ್ಲ ಎಂಬ ಕಠಿಣ ಸೂಚನೆ ನೀಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ, ಅದರಲ್ಲೂ ಮುಖ್ಯವಾಗಿ ಸಚಿವ ಡಿ.ಕೆ.ಶಿವಕುಮಾರ್‌ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಬಿಜೆಪಿಯ ಕೆಲವು ನಾಯಕರು ಮೃದು ಧೋರಣೆ ಅನುಸರಿಸಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ ಅಮಿತ್‌ ಶಾ, ಈ ರೀತಿ ಮುಂದುವರಿದರೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಹೋರಾಟಕ್ಕಿಳಿಯಬೇಕು ಎಂದು ಖಡಕ್ಕಾಗಿ ಸೂಚಿಸಿದರು ಎಂದು ತಿಳಿದುಬಂದಿದೆ.

ಅಮಿತ್‌ ಶಾ ಅಸಮಾಧಾನಕ್ಕೆ ಕಾರಣವಾದ ಅಂಶಗಳು
– ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಕ್ಷವು ನಿರೀಕ್ಷಿತ ಪ್ರಮಾಣದಲ್ಲಿ ಹೋರಾಟ ನಡೆಸದೇ ಇರುವುದು.
– ಪಕ್ಷದ ನಾಯಕರೊಳಗಿನ ಭಿನ್ನಾಭಿಪ್ರಾಯದಿಂದ ಸುಮಾರು ಆರು ತಿಂಗಳು ಪಕ್ಷ ಸಂಘಟನೆ ಸ್ಥಗಿತಗೊಂಡಿದ್ದು.
– ನಾಯಕ ನಡುವಿನ ಭಿನ್ನಮತದಿಂದ ಮನಬಂದಂತೆ ಹೇಳಿಕೆ ನೀಡಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದು.
– ವಿವಿಧ ಮೋರ್ಚಾಗಳ ವತಿಯಿಂದ ಸಭೆ, ಸಂಘಟನಾ ಚಟುವಟಿಕೆಗಳು ನಿಯಮಿತವಾಗಿ ನಡೆಯದಿರುವುದು.
– ಶಾಸಕರು, ಸಂಸದರು ಸೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಸರಿಯಾಗಿ ತಲುಪಿಸದಿರುವುದು.
– ಬಹು ನಿರೀಕ್ಷಿತ ವಿಸ್ತಾರಕ ಯೋಜನೆ ಎಲ್ಲಾ ಬೂತ್‌ಗಳನ್ನು ತಲುಪದೆ ಕೆಲವೆಡೆ ಅಪೂರ್ಣಗೊಂಡಿರುವುದು.
– ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಗೆ ಕ್ರಮ ವಹಿಸದಿರುವುದು.

ಶಾಸಕರಿಗೆ ಪೆನ್ನು, ಪ್ಯಾಡ್‌ ಕೊಡಿಸಿದ ಶಾ
ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರ ಸಭೆಗೆ ಬರಿಗೈಲಿ ಬಂದ ಕೆಲವು ಶಾಸಕರು, ಸಂಸದರಿಗೆ ಅಮಿತ್‌ ಶಾ ಅವರೆ ಪೆನ್ನು, ಪ್ಯಾಡ್‌ ಕೊಡಿಸಿದ ಪ್ರಸಂಗ ನಡೆಯಿತು.

ಮಧ್ಯಾಹ್ನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರ ಜತೆ ಶಾ ಪ್ರತ್ಯೇಕವಾಗಿ ಸಭೆ ನಡೆಸಿದರು. ಸಭೆಯಲ್ಲಿ ಪಕ್ಷ ಸಂಘಟನೆ ಕುರಿತಂತೆ ಏನು ಮಾಡಬೇಕು? ಯಾವ ರೀತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅಮಿತ್‌ ಶಾ ಹೇಳುತ್ತಿದ್ದಾಗ ಕೆಲವರು ಸುಮ್ಮನೆ ಕುಳಿತಿದ್ದರು. ಇದನ್ನು ಗಮನಿಸಿದ ಶಾ, ಹೊರಗೆ ನಿಂತಿದ್ದ ಪಕ್ಷದ ಕಾರ್ಯಕರ್ತರೊಬ್ಬರನ್ನು ಕರೆಸಿ, ಪೆನ್ನು, ಪ್ಯಾಡ್‌ ಇಲ್ಲದೇ ಬಂದವರಿಗೆ ಅವುಗಳನ್ನು ನೀಡುವಂತೆ ಸೂಚಿಸಿದರು. ಇದರಿಂದ ಅಂಥವರು ಮುಜುಗರ ಅನುಭವಿಸಬೇಕಾಯಿತು ಎಂದು ಹೇಳಲಾಗಿದೆ.

ಮೇಷ್ಟ್ರ ಮುಂದೆ ಕೂತ ವಿದ್ಯಾರ್ಥಿಗಳಂತಿದ್ದರು
ಅಮಿತ್‌ ಶಾ ಅವರು ಶನಿವಾರ ಕೋರ್‌ ಕಮಿಟಿ ಸದಸ್ಯರು, ವಿಧಾನಸಭೆ, ವಿಧಾನ ಪರಿಷತ್‌ ಮತ್ತು ಸಂಸದರು ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳು, ಮೋರ್ಚಾಗಳ ಅಧ್ಯಕ್ಷರು- ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರ ಜತೆ ಪ್ರತ್ಯೇಕ ಮೂರು ಸಭೆಗಳನ್ನು ನಡೆಸಿದ್ದು ಎಲ್ಲಾ ಸಭೆಗಳಲ್ಲಿ ಮೇಷ್ಟ್ರ ಮುಂದೆ ಕುಳಿತ ವಿದ್ಯಾರ್ಥಿಗಳಂತೆ ರಾಜ್ಯದ ಮುಖಂಡರು, ಜನಪ್ರತಿನಿಧಿಗಳು ಕುಳಿತಿದ್ದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next