Advertisement

ಯಡಿಯೂರಪ್ಪ ನಡೆಗೆ ಕಾಂಗ್ರೆಸ್‌ ಆಕ್ಷೇಪ

12:38 PM Jun 18, 2017 | Team Udayavani |

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು ದಲಿತರ ಮನೆಗೆ ತೆರಳಿ ಉಪಹಾಸ ಸೇವನೆ ಸೋಗಲ್ಲಿ ದಲಿತರನ್ನು ಮೂರನೇ ದರ್ಜೆಯವರಂತೆ ಕಾಣುತ್ತಿದ್ದಾರೆ ಎಂದು ಕೆಎಸ್‌ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್‌ ಆರೋಪಿಸಿದ್ದಾರೆ. ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Advertisement

ಹೋಟೆಲ್‌ ಅಥವಾ ಬೇರೆಯವರು ಸಿದ್ದಪಡಿಸಿದ ಉಪಹಾರವನ್ನು ಯಡಿಯೂರಪ್ಪ ದಲಿತರ ಮನೆಯಲ್ಲಿ ಮುಖ ಸಿಂಡರಸಿಕೊಂಡು ಸೇವಿಸುತ್ತಾರೆ. ಅವರು ದಲಿತರ ಮನೆಯಲ್ಲಿ ಉಪಹಾರ ಸೇವಿಸುವ ರೀತಿಯಿಂದ ಅಸ್ಪೃಶ್ಯತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದರು. ರೈತರ ಸಾಲ ಮನ್ನಾಕ್ಕೆ ರಾಜ್ಯ ಸರ್ಕಾರದ ಕಿವಿ ಹಿಂಡುವುದಾಗಿ ಹೇಳುವ ಯಡಿಯೂರಪ್ಪ, ಈ ಹಿಂದೆ ಅವರೇ ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಸಂಬಂಧ ನಾನೇನು ನೋಟು ಪ್ರಿಂಟ್‌ ಮಾಡಿ ಹಾಕಲ್ಲ ಎಂದಿದ್ದರು.

ಈ ರೀತಿ ಹೇಳಿದ್ದ ಅವರಿಗೆ ಈಗ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಲಿ ಎಂಬುದಾಗಿ ಒತ್ತಾಯಿಸಲು ಯಾವ ನೈತಿಕ ಹಕ್ಕಿದೆ. ಅವರೇನಾರೂ ಕಿವಿ ಹಿಂಡುವುದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಿವಿ ಹಿಂಡಿ ರಾಷ್ಟ್ರೀಯ ಬ್ಯಾಂಕ್‌ಗಳ 43 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಆಗ್ರಹಿಸಿದರು.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ ಹೊಂದಿರುವುದಾಗಿ ಹೇಳುವ ಬಿಜೆಪಿ 50 ಸ್ಥಾನ ಸಹ ಗಳಿಸುವುದಿಲ್ಲ. ನಮ್ಮ ಜಿಲ್ಲೆಯಲ್ಲೇ ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ. ಇಲ್ಲಿ ಆ ಪಕ್ಷ ಒಡೆದ ಮನೆಯಂತಾಗಿದೆ. ಏನೇ ಆದರೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರಲಿದೆ.

ಅಲ್ಲದೆ, ಲೋಕಸಭಾ ಚುನಾವಣೆಯಲ್ಲೂ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಹೇಳಿದರು. ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಶ್ರೀಮತಿ ಎ.ಎಲ್‌.ಪುಷ್ಪ ಲಕ್ಷಣಸ್ವಾಮಿ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

Advertisement

ಈ ಹಿಂದೆ ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಅಧ್ಯಕ್ಷೆಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅತ್ಯಂತ ಕ್ರಿಯಾಶೀಲರಾಗಿರುವ ಅವರು ಪಕ್ಷದ ಬಲವರ್ಧನೆಗೆ ಮತ್ತಷ್ಟು ಶ್ರಮಿಸಲಿದ್ದಾರೆ ಎಂದು ಹೇಳಿದರು. ಶ್ರೀಮತಿ ಎ.ಎಲ್‌.ಪುಷ್ಪ ಲಕ್ಷಣಸ್ವಾಮಿ ಮಾತನಾಡಿ, ಜಗಳೂರು ವಿಧಾನ ಸಭಾ ಕ್ಷೇತ್ರ ಟಿಕೆಟ್‌ ಆಕಾಂಕ್ಷಿಯಾಗಿ ರಾಜಕೀಯ ಪ್ರವೇಶಿಸಿದೆ.

ಈ ಹಿಂದೆ ಕೌಶಲಾಭಿವೃದ್ಧಿ ನಿಗಮದ ಪ್ರಥಮ ಅಧ್ಯಕ್ಷೆಯಾಗಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ತಮ್ಮ ಅವಧಿಯಲ್ಲಿ ರಾಜೀವ ಗಾಂಧಿ ಕೌಶಲ್ಯ ಭವನ ನಿರ್ಮಿಸಲಾಯಿತು. ತಮ್ಮ ಕ್ರಿಯಾಶೀಲತೆ ಗಮನಿಸಿ ಕೆಪಿಸಿಸಿ ಮಹಿಳಾ ಘಟಕಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ವಿಭಾಗದ ಅಧ್ಯಕ್ಷೆ ಲಕ್ಷ್ಮಿ ಹೆಬ್ಟಾಳಕರ್‌ ನೇಮಿಸಿ, ಆರು ಜಿಲ್ಲೆಗಳ ಉಸ್ತುವಾರಿ ವಹಿಸಿದ್ದಾರೆ.

ವರಿಷ್ಠರ ವಿಶ್ವಾಸಕ್ಕೆ ತಕ್ಕಂತೆ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ಹೇಳಿದರು. ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿ‌ನಿ ಪ್ರಶಾಂತ್‌, ಉಪ ಮೇಯರ್‌ ಮಂಜುಳಮ್ಮ, ಮಹಾದೇವಮ್ಮ, ರಾಧಾಬಾಯಿ, ಪದ್ಮ ವೆಂಕಟೇಶ್‌, ಯಾಸೀನ್‌ ಪೀರ್‌ ರಜ್ವಿ, ಡಿ.ಶಿವಕುಮಾರ್‌, ಅಲ್ಲಾವಲ್ಲಿ ಘಾಜಿಖಾನ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next