ಮೈಸೂರು: ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪನವರ ವಿರುದ್ಧ ಮತ್ಸರದಿಂದ ಮತ್ತೆ ಪ್ರಕರಣಗಳನ್ನು ದಾಖಲಿಸಲು ಮುಂದಾಗಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದರು. ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇàಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಡಿದ್ದ ಆರೋಪಗಳು ಸಾಬೀತಾಗಿಲ್ಲ. ಈ ನಡುವೆ ರಾಜ್ಯದ ಜನತೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಒಪ್ಪಿಕೊಂಡಿದ್ದು, ಇದರಿಂದ ವಿಚಲಿತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಡಿಯೂರಪ್ಪ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಪ್ರಕರಣ ದಾಖಲಾಗುವಂತೆ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಅಂತ್ಯದ ಕಾಲ ಸನ್ನಿಹಿತವಾಗಿದ್ದು, ಬೆದರಿಕೆ ತಂತ್ರ ಅನುಸರಿಸುತ್ತಿರುವ ಸಿದ್ದರಾಮಯ್ಯ ಸಣ್ಣ ವ್ಯಕ್ತಿ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದರು.
ಚುನಾವಣೆಯಲ್ಲಿ ಉತ್ತರ: ದ್ವೇಷದ ರಾಜಕಾರಣ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ಅವರ ಮುಂದೆ ಸಿದ್ದರಾಮಯ್ಯ ಅವರ ಆಟ ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸುತ್ತಿದ್ದು, ಹೀಗಿದ್ದರೂ ದಪ್ಪ ಚರ್ಮದ ಸಿದ್ದರಾಮಯ್ಯ ಯಾವುದಕ್ಕೂ ಅಂಜುತ್ತಿಲ್ಲ ಎಂದು ಟೀಕಿಸಿದರು.
ದೋಷಿ ಇಂದಿರಾ: ಇಂದಿರಾ ಕ್ಯಾಂಟೀನ್ ಆರಂಭಿಸಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಪ್ರತಾಪ್ ಸಿಂಹ, ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ, ಚುನಾವಣಾ ಅಕ್ರಮವೆಸಗಿ ನ್ಯಾಯಾಲಯದಿಂದ ದೋಷಿ ಎಂದು ಸಾಬೀತಾಗಿದ್ದ ಇಂದಿರಾಗಾಂಧಿ ಹೆಸರಿಟ್ಟಿರುವುದು ಸರಿಯಲ್ಲ. ಕೋರ್ಟ್‌ನಿಂದಲೇ ದೋಷಿ ಎಂದು ತೀರ್ಮಾನವಾಗಿದ್ದ ದೇಶದ ಮೊದಲ ಮಹಿಳಾ ಪ್ರಧಾನಿ ಚುನಾವಣೆಯಲ್ಲಿ ಅಕ್ರಮ ಎಸೆಗಿದ್ದರು. ಅಂತವರ ಫೋಟೋ ಇಟ್ಟುಕೊಂಡು ಇಂದಿರಾ ಕ್ಯಾಂಟೀನ್ ನಡೆಸುತ್ತಿದ್ದು, ಇಂತವರನ್ನು ಆರಾಧಿಸುತ್ತಿರುವ ಕಾಂಗ್ರೆಸ್ಸಿಗರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದರು.