Advertisement

ಬಿಎಸ್‌ವೈ ಸಭೆಗೆ ಗೈರು: ಅತೃಪ್ತರ ನಿರ್ಧಾರ

03:50 AM Jan 19, 2017 | Team Udayavani |

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಧೋರಣೆ ವಿರುದ್ಧ ರಣಕಹಳೆ ಮೊಳಗಿಸಿರುವ ಅತೃಪ್ತ ಬಿಜೆಪಿ ಮುಖಂಡರು, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಬುಧವಾರ ಮಾಜಿ ಸಚಿವ ಸೊಗಡು ಎಸ್‌. ಶಿವಣ್ಣ ಅವರ ನಿವಾಸದಲ್ಲಿ ಸಭೆ ನಡೆಸಿದ್ದು, ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು ಯಡಿಯೂರಪ್ಪ ಧೋರಣೆ ಖಂಡಿಸಿ, ಜ.19ರಂದು ಯಡಿಯೂರಪ್ಪ ಕರೆದಿರುವ ಸಭೆಗೆ ಭಾಗವಹಿಸದಿರಲು ನಿರ್ಧರಿಸಿದರು.

Advertisement

ನಗರದ ಊರುಕೆರೆಯಲ್ಲಿರುವ ಸೊಗಡು ನಿವಾಸದಲ್ಲಿ ಭಾರತ್‌ ಮಾತಾ ಪೂಜಾ ಕಾರ್ಯಕ್ರಮದ ಹೆಸರಿನಲ್ಲಿ ಅತೃಪ್ತ ಮುಖಂಡರೆಲ್ಲ ಸೇರಿದ್ದರು. ಈಶ್ವರಪ್ಪ ನೇತೃತ್ವದಲ್ಲಿ  ಮಾಜಿ ಶಾಸಕರು, ಸಂಸದರು, ಎಂಎಲ್‌ಸಿಗಳು ಸೇರಿ 24 ಬಿಜೆಪಿ ಅತೃಪ್ತ ಪ್ರಮುಖ ಮುಖಂಡರು ಸಭೆ ಸೇರಿ, ಸುಮಾರು 2 ಗಂಟೆಗಳ ಕಾಲ ಮುಂದಿನ ರಾಜಕೀಯ ನಡೆ ಕುರಿತು ಚರ್ಚೆ ನಡೆಸಿದರು. ಜತೆಗೆ ರಾಜ್ಯ, ಜಿಲ್ಲಾ ಮಟ್ಟದ ನೂರಾರು ಕಾರ್ಯಕರ್ತರು ಇದರಲ್ಲಿ ಭಾಗಿಯಾಗಿದ್ದರು.

2 ತಾಸು ಚರ್ಚೆ:
ಸೊಗಡು ನಿವಾಸದಲ್ಲಿ ಸೇರಿದ ಮುಖಂಡರ ಮೂಲ ಉದ್ದೇಶ ಬಿಎಸ್‌ವೈ ವಿರುದ್ಧ ನಿರ್ಣಯ ತೆಗೆದುಕೊಳ್ಳುವುದೇ ಆಗಿತ್ತು. ಹೀಗಾಗಿ ಸುದೀರ್ಘ‌ ಚರ್ಚೆ ನಡೆಸಿದ ಮುಖಂಡರು ಯಡಿಯೂರಪ್ಪವಿರುದ್ಧ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿದ್ದು, ರಾಜ್ಯಾಧ್ಯಕ್ಷರಾದ ಮೇಲೆ ಮೂಲ ಬಿಜೆಪಿಗರನ್ನು ದೂರವಿಟ್ಟಿರುವುದಕ್ಕೆ ಪಕ್ಷದ ಮುಖಂಡರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಪಕ್ಷಕ್ಕಾಗಿ 20-30 ವರ್ಷಗಳಿಂದ ಶ್ರಮಿಸಿದ್ದೇವೆ. ಆದರೆ ಈಗ ನಮ್ಮನ್ನು ಕಡೆಗಣಿಸಿಲಾಗುತ್ತಿದೆ ಒಂದು ಕೋಟಿಗೂ ಹೆಚ್ಚು ಸದಸ್ಯತ್ವ ನೋಂದಣಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿದ್ದಾರೆ. ಪಕ್ಷದಲ್ಲಿ ಕೆಲವರ ಮಾತೇ ವೇದ ವಾಕ್ಯವಾಗಿದೆ. ಹೀಗಿರುವಾಗ ಪಕ್ಷ ಸಂಘಟನೆ ಮಾಡುವುದು ಹೇಗೆ ಎಂದು ಹಲವರು ಈಶ್ವರಪ್ಪ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿದರು ಎಂದು ತಿಳಿದು ಬಂದಿದೆ.

ಹೈಕಮಾಂಡ್‌ ವಿರೋಧವಿಲ್ಲ:
ಸಭೆಯಲ್ಲಿ ಮಾತನಾಡಿದ ಕೆ.ಎಸ್‌.ಈಶ್ವರಪ್ಪ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ನಮ್ಮ ಸಂಘಟಿತ ಹೋರಾಟವನ್ನು ಹೀಗೆ ಮುಂದುವರಿಸೋಣ. ರಾಯಣ್ಣ ಬಿಗ್ರೇಡ್‌ ಸಂಘಟನೆ ಮಾಡೋಣ. ಇದಕ್ಕೆ ಹೈಕಮಾಂಡ್‌ ಯಾವುದೇ ವಿರೋಧವಿಲ್ಲ ಎಂದು ಸಭೆಯಲ್ಲಿದ್ದವರಿಗೆ ಧೈರ್ಯ ತುಂಬುವ ಮಾತನಾಡಿದರು ಎಂಬುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೊಬ್ಬರು ತಿಳಿಸಿದ್ದಾರೆ.

Advertisement

ಸಭೆ ಪ್ರಮುಖ ನಿರ್ಣಯಗಳು:
ಜ.19ರಂದು ಯಡಿಯೂರಪ್ಪ ಕರೆದ ಸಭೆಯಲ್ಲಿ ಭಾಗಿಯಾಗದೆ ಇರುವುದು ಜ.26ರಂದು ಕೂಡಲಸಂಗಮದಲ್ಲಿ ಸಂಗೊಳ್ಳಿ ರಾಯಣ್ಣ ಬಿಗ್ರೇಡ್‌ನಿಂದ ವ್ಯವಸ್ಥಿತ ಸಮಾವೇಶ ಬಿಎಸ್‌ವೈ ವಿರುದ್ಧ ಸಂಘಟಿತ ಹೋರಾಟ ಮುಂದುವರಿಸುವಿಕೆ

ಯಾರೆಲ್ಲ ಇದ್ದರು?:
ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲಕುಮಾರ್‌ ಸುರಾನ, ಮಾಜಿ ಶಾಸಕರಾದ ಎಂ. ನಾರಾಯಣಸ್ವಾಮಿ, ಗುರುಸ್ವಾಮಿ, ನಂಜುಂಡಸ್ವಾಮಿ, ಕೆ.ಜಿ. ಕುಮಾರಸ್ವಾಮಿ, ಶ್ರೀಕಾಂತ್‌ ಕುಲಕರ್ಣಿ, ಬಸವರಾಜ ನಾಯಕ, ನೇಮಿರಾಜನಾಯಕ, ಸೋಮಲಿಂಗ, ರಾಯಚೂರು ಮಾಜಿ ಸಂಸದ ವಿರೂಪಾಕ್ಷಪ್ಪ, ಮಾಜಿ ಎಂಎಲ್‌ಸಿಗಳಾದ ಸಿದ್ದರಾಜು, ರಮೇಶ್‌, ಸೋಮಣ್ಣಬೇವಿನಮರದ, ಭೋಜರಾಜ್‌ ಖರೋಟಿ, ನಾರಾಯಣ. ಸಾ.ಬಾಂಡೆY, ಶಿವಮೊಗ್ಗ ಎಂಎಲ್‌ಸಿ ಭಾನುಪ್ರಕಾಶ್‌, ಬೆಂಗಳೂರಿನ ಮಾಜಿ ಮೇಯರ್‌ ವೆಂಕಟೇಶಮೂರ್ತಿ ಮೊದಲಾದ ಪ್ರಮುಖ ಮುಖಂಡರು ಸಭೆಯಲ್ಲಿದ್ದರು. ಇದಲ್ಲದೇ ಜಿಲ್ಲಾವಾರು ಬಿಜೆಪಿ ಅನೇಕ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಬಿಎಸ್‌ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next