Advertisement
ಬೆಳಗ್ಗೆ 11.20ಕ್ಕೆ ಕಾಪನಹಳ್ಳಿ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ, ತಮ್ಮ ಮನೆ ದೇವರು ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಗವಿಮಠ ಶ್ರೀಗಳಾದ ಶ್ರೀ ಸ್ವತಂತ್ರ ಚನ್ನವೀರ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಅಲ್ಲಿಂದ ಬೂಕನಕೆರೆ ಗ್ರಾಮಕ್ಕೆ ಆಗಮಿಸಿ, ತಮ್ಮ ಹುಟ್ಟೂರು ಬೂಕನಕೆರೆ ಗ್ರಾಮ ದೇವತೆ ಗೋಗಾಲಮ್ಮಗೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕ ಕೇಶವಮೂರ್ತಿ ಅವರು ಯಡಿಯೂರಪ್ಪ ಹೆಸರಿನಲ್ಲಿ ದೇವರಿಗೆ ಅರ್ಚನೆ ಸಲ್ಲಿಸಿದರು. ಸೋಮವಾರ ನಡೆಯುವ ವಿಶ್ವಾಸಮತದಲ್ಲಿ ಗೆಲುವಾಗಲಿ ಹಾಗೂ ಮುಖ್ಯಮಂತ್ರಿಗಳಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ನಿರ್ವಿಘ್ನವಾಗಿ ಆಡಳಿತ ನಡೆಸಲು ಗೋಗಾಲಮ್ಮ ದೇವಿ ಶಕ್ತಿ ನೀಡಲಿ ಎಂದು ಬಿಎಸ್‌ವೈ ಪ್ರಾರ್ಥಿಸಿದರು.
Related Articles
Advertisement
ಮೇಲುಕೋಟೆಗೆ ಭೇಟಿ: ಶನಿವಾರ ಮಧ್ಯಾಹ್ನ ಮೇಲುಕೋಟೆಗೆ ಆಗಮಿಸಿ, ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದರು. ಮುಖ್ಯಮಂತ್ರಿಯವರನ್ನು ಸಾಂಪ್ರದಾಯಿಕ ಪೂರ್ಣಕುಂಭ ಹಾಗೂ ಪಾದುಕಾ ಮರ್ಯಾದೆಯೊಂದಿಗೆ ಸ್ವಾಗತಿಸಲಾಯಿತು. ಚೆಲುವನಾರಾಯಣಸ್ವಾಮಿ, ಮಹಾಲಕ್ಷ್ಮೀ ಯದುಗಿರಿ ನಾಯಕಿ, ಭಗವದ್ರಾಮಾನುಜರ ದರ್ಶನ ಪಡೆದ ನಂತರ, ಪಾತಾಳಾಂಕಣದಲ್ಲಿ ರಾಜಾಶೀರ್ವಾದ ಮಾಡುವುದರೊಂದಿಗೆ ಮುಖ್ಯಮಂತ್ರಿಗಳನ್ನು ಬೀಳ್ಕೊಡಲಾಯಿತು. ಪೂರ್ಣಕುಂಭ ಸ್ವಾಗತಕ್ಕೂ ಮುನ್ನ ಜಿಲ್ಲಾಧಿಕಾರಿ ಮಂಜುಶ್ರೀ ಸೇರಿ ಇತರ ಅಧಿಕಾರಿಗಳು ಮುಖ್ಯಮಂತ್ರಿಯನ್ನು ಬರಮಾಡಿಕೊಂಡರು.
ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿ, ತಿರುಪತಿಗೆ ಸಮಾನ ಮಹತ್ವವಿರುವ ರಾಮಾನುಜರ ತಪೋಭೂಮಿಯ ಅಭಿವೃದ್ಧಿಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಈ ಹಿಂದೆ ಬಿಡುಗಡೆ ಮಾಡಿದ್ದ ಅನುದಾನ ಬಳಕೆಯ ಬಗ್ಗೆಯೂ ಪರಿಶೀಲಿಸುತ್ತೇನೆ. ವೈಷ್ಣವ ಕ್ಷೇತ್ರ ಎನಿಸಿರುವ ಮೇಲುಕೋಟೆ ಕ್ಷೇತ್ರದಲ್ಲಿ ಅನ್ನದಾನ ಭವನ ನಿರ್ಮಾಣಕ್ಕೆ ತಕ್ಷಣವೇ 2 ಕೋಟಿ ರೂ.ಬಿಡುಗಡೆ ಮಾಡುತ್ತೇನೆ. ನಾನೇ ಖುದ್ದು ಆಗಮಿಸಿ ಭೂಮಿ ಪೂಜೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.
ಜೇಬುಗಳ್ಳರ ಕೈಚಳಕ: ಬೂಕನಕೆರೆಯಲ್ಲಿ ಯಡಿಯೂರಪ್ಪ ಅವರನ್ನು ನೋಡಲು ಬಂದಿದ್ದ ಸಾವಿರಾರು ಸಂಖ್ಯೆಯ ಗುಂಪಿನಲ್ಲಿ ನಿಂತಿದ್ದ ಮೋದೂರು ಗ್ರಾಮದ ಕುಮಾರ್ ಅವರಲ್ಲಿದ್ದ 30 ಸಾವಿರ ಹಾಗೂ ಚೋಕನಹಳ್ಳಿ ಗ್ರಾಮದ ಸಿದ್ದಪ್ಪ ಅವರ ಜೇಬಿನಲ್ಲಿದ್ದ 20 ಸಾವಿರ ರೂ.ಗಳನ್ನು ಜೇಬುಗಳ್ಳರು ಪಿಕ್ ಪಾಕೇಟ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ರೈತರಿಂದ ಮನವಿ: ಇದೇ ವೇಳೆ ಸಿಎಂಗೆ ಮನವಿ ಸಲ್ಲಿಸಿದ ರೈತರು, ಮಳೆ ಇಲ್ಲದೆ ಕೆರೆ-ಕಟ್ಟೆಗಳು ಖಾಲಿಯಾಗಿದ್ದು, ಹೇಮಾ ವತಿ ನದಿಯಿಂದ ನೀರು ಬಿಡಬೇಕು. ಜೊತೆಗೆ, ಸಕ್ಕರೆ ಕಾರ್ಖಾ ನೆಗಳನ್ನು ಮತ್ತೆ ಆರಂಭಿಸಿ, ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು. ರೈತರಿಂದ ಮನವಿ ಸ್ವೀಕರಿಸಿದ ಬಿಎಸ್‌ವೈ, ಸ್ಥಳದಲ್ಲಿ ಹಾಜರಿದ್ದ ಅವರ ಪುತ್ರ, ಸಂಸದ ರಾಘವೇಂದ್ರ ಅವರಿಗೆ ತಕ್ಷಣ ನೀರು ಬಿಡಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಅಭಿಮಾನಿಗೆ ವಾರದೊಳಗೆಹೊಸ ಚಪ್ಪಲಿ ಕೊಡಿಸುವೆ’
ಯಡಿಯೂರಪ್ಪ ಸಿಎಂ ಆಗೋವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥಗೈದಿದ್ದ ಅಭಿಮಾನಿಯ ಹರಕೆ ಈಡೇರಿದ ಹಿನ್ನೆಲೆಯಲ್ಲಿ ವಾರದೊಳಗೆ ಹೊಸ ಚಪ್ಪಲಿ ಕೊಡಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಹದಿನಾಲ್ಕು ತಿಂಗಳ ಹಿಂದೆ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಾಗ ಬಿಎಸ್‌ವೈ ಮತ್ತೆ ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಮಂಡ್ಯ ತಾಲೂಕು ಉಪ್ಪರಕನಹಳ್ಳಿಯ ಶಿವಕುಮಾರ ಆರಾಧ್ಯ ಶಪಥ ಮಾಡಿದ್ದರು. ಅದರಂತೆ ಇಲ್ಲಿಯವರೆಗೂ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲೇ ಓಡಾಡುತ್ತಿದ್ದರು. ಶನಿವಾರ ಬೂಕನಕೆರೆಯಲ್ಲಿ ಯಡಿಯೂರಪ್ಪನವರನ್ನು ಅಭಿನಂದಿಸಲು ಶಿವಕುಮಾರ ಮುಂದಾದಾಗ ಶಪಥದ ವಿಷಯ ತಿಳಿದು ಸಿಎಂ ಸಂತಸಪಟ್ಟರು. “ನಿನ್ನ ಶಪಥ ಈಡೇರಿದೆ. ಈ ವಾರದೊಳಗೆ ನಾನೇ ನಿನಗೆ ಹೊಸ ಚಪ್ಪಲಿ ಕೊಡಿಸುತ್ತೇನೆ’ ಎಂದರು. ಮಹಿಳೆಯ ಸಮಸ್ಯೆ
ಆಲಿಸಿದ ಬಿಎಸ್‌ವೈ
ದಿವ್ಯಾಂಗ ಪುತ್ರನೊಂದಿಗೆ ಆಗಮಿಸಿದ್ದ ಮಹಿಳೆ, ಜಯಲಕ್ಷ್ಮೀ ಎಂಬಾಕೆಗೆ ಮೇಲುಕೋಟೆ ಯಲ್ಲಿ ಮುಖ್ಯಮಂತ್ರಿ ಭೇಟಿಗೆ ಪೊಲೀಸರು ಅವಕಾಶ ನಿರಾಕರಿಸಿದರು.ಇದನ್ನು ಗಮನಿಸಿದ ಸಂಸದ ರಾಘವೇಂದ್ರ, ಮಹಿಳೆ ಬಳಿಗೆ ಆಗಮಿಸಿ, ಸಮಸ್ಯೆ ಆಲಿಸಿದರು. ಅಲ್ಲದೆ, ಯಡಿಯೂರಪ್ಪ ಅವರನ್ನೂ ಆಕೆಯ ಬಳಿಗೆ ಕರೆ ತಂದರು. ಈ ವೇಳೆ ಜಯಲಕ್ಷ್ಮೀ ಅವರು, “ನನ್ನ ಮಗ ಪ್ರತಾಪ್, ಪೋಲಿಯೋ ಪೀಡಿತನಾಗಿ ಹಾಸಿಗೆ ಹಿಡಿದಿದ್ದಾನೆ.
ಸರ್ಕಾರ 2013ರಲ್ಲೇ ನನ್ನ ಮಗನಿಗೆ ಒಂದು ಸಾವಿರ ರೂ. ಅಂಗವಿಕಲ ವೇತನ ಮಂಜೂರು ಮಾಡಿದ್ದರೂ 2017ರವರೆಗೆ 500 ರೂ.ಮಾತ್ರ ನೀಡಿದ್ದಾರೆ. 2017ರಿಂದ 1000 ರೂ. ನೀಡುತ್ತಿದ್ದಾರೆ. ಈ ನಡುವೆ ಕಡಿತವಾಗಿದ್ದ 500 ರೂ.ಗಳನ್ನು ಮಂಜೂರು ಮಾಡಿಸಿ ಕೊಡಿ ಎಂದು ನಿವೇದಿಸಿಕೊಂಡರು. ಈ ಬಗ್ಗೆ ಕ್ರಮಕೈಗೊಳ್ಳು ವಂತೆ ಸಿಎಂ, ಜಿಲ್ಲಾಧಿಕಾರಿಗೆ ಸೂಚಿಸಿದರು.