Advertisement

CM ಸಿದ್ದರಾಮಯ್ಯ ಬುಡಕ್ಕೆ ನೀರು ಬಂದಿದ್ದಕ್ಕೆ ಯಡಿಯೂರಪ್ಪ ಗುರಿ: ಕೇಂದ್ರ ಸಚಿವ ಜೋಶಿ

06:30 PM Jun 14, 2024 | Team Udayavani |

ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಹಗರಣದಿಂದ ಸಿಎಂ ಸಿದ್ದರಾಮಯ್ಯ ಅವರ ಬುಡಕ್ಕೆ ನೀರು ಬಂದಿದ್ದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರಿಯಾಗಿಸಿ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ ಜೋಶಿ ಶುಕ್ರವಾರ ಕಿಡಿ ಕಾರಿದ್ದಾರೆ.

Advertisement

ಪ್ರಧಾನಿ ಮೋದಿ ಸಚಿವ ಸಂಪುಟದಲ್ಲಿ ಎರಡನೇ ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಶುಕ್ರವಾರ ನಗರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ಮೇಲೆ ಜಾಮೀನು ರಹಿತ ವಾರೆಂಟ್ ಆಗುತ್ತಿದ್ದಂತೆ ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ನಡೆದಿದೆ. 82 ವರ್ಷದ ವ್ಯಕ್ತಿ ಮೇಲೆ ಈ ರೀತಿ ತನಿಖೆ ಆರಂಭಿಸಿರುವುದು ಸರಿಯಲ್ಲ’ಎಂದರು.

‘ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ಜನಪ್ರಿಯ ನಾಯಕ. ಅವರ ಮೇಲೆ ಈ ರೀತಿಯ ಆರೋಪ ಹೊರಿಸುತ್ತಿರುವುದೇ ಅಪಚಾರ. ವಾಲ್ಮೀಕಿ ನಿಗಮದ ಹಗರಣ ಸಿದ್ದರಾಮಯ್ಯ ಬುಡಕ್ಕೆ ಬಂದಿದೆ. ಈ ಕಾರಣಕ್ಕಾಗಿ ಅದನ್ನು ವಿಷಯಾಂತರ ಮಾಡಲು ಈ ರೀತಿ ಮಾಡಲಾಗುತ್ತಿದೆ. ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ’ ಎಂದು ಹರಿಹಾಯ್ದರು.

‘ಸ್ವತಃ ಸರ್ಕಾರವೇ ಕೋರ್ಟ್‌ಗೆ ಹೋಗಿ ಮನವಿ ಮಾಡಿದೆ. ಸರ್ಕಾರಿ ಅಭಿಯೋಜಕರು ವಾರೆಂಟ್ ಜಾರಿ ಮಾಡುವಂತೆ ಕೋರಿ, ಯಡಿಯೂರಪ್ಪ ಬಂಧನದ ಆದೇಶ ತೆಗೆದುಕೊಂಡು ಬಂದಿದೆ. ಆದರೆ ಯಡಿಯೂರಪ್ಪ ಅವರು ಸಮಯ ಕೇಳಿದ್ದರು. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ನಾವು ಸೂಕ್ತ ಹೋರಾಟ ಮಾಡುತ್ತೇವೆ’ ಎಂದರು.

ಈ ಪ್ರಕರಣ ನಡೆದು ಆರು ತಿಂಗಳಾಗಿದೆ. ಸಂತ್ರಸ್ತೆ ಈಗಾಗಲೇ ಈ ರೀತಿ 50-60 ಜನರ ಮೇಲೆ ದೂರು ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಸತ್ಯವಂತ ಗೃಹ ಸಚಿವರು ಅಂದೇ ಹೇಳಿದ್ದರು. ಕೋರ್ಟ್‌ನಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಿ ಅಂತ ಕೇಳಿದೆ. ಇದರಲ್ಲಿ ಸರ್ಕಾರದ್ದೇ ನೇರ ಪಾತ್ರವಿದೆ. ಈ ವಿಚಾರದಲ್ಲಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಇದರಿಂದ ಯಡಿಯೂರಪ್ಪ ಮತ್ತು ಬಿಜೆಪಿ ತುಳಿಯಬಹುದೆಂದು ಭಾವಿಸಿದರೆ ಶುದ್ಧ ತಪ್ಪು. ನಾವು ಪುನಃ ಪುಟಿದೇಳುತ್ತೇವೆ ಎಂದರು.

Advertisement

ಜನ ನಿಮಗೆ ಮೊನ್ನೆಯೇ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಕೇವಲ 9 ಸ್ಥಾನಕ್ಕೆ ನೀವು ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಜನ ಎಲ್ಲ ರೀತಿಯಿಂದಲೂ ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಾಲ್ಮೀಕಿ ನಿಗಮದಲ್ಲಿ 87ಕೋಟಿ ರೂ. ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಅವರದೇ ನೇರ ಕೈವಾಡವಿದೆ. ಈ ಭಯಕ್ಕೆ ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಪ್ರಭಾವಕ್ಕೆ ಒಳಗಾಗಬಾರದು
ನಟ ದರ್ಶನ್ ಪ್ರಕರಣದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೇ ಸಮಗ್ರ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಇದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಕೆಲ ಸಚಿವರು, ಕಾಂಗ್ರೆಸ್‌ನ ಕೆಲ ಶಾಸಕರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ತನಿಖೆಯ ಮೊದಲೇ ಅವರನ್ನು ಮುಕ್ತಗೊಳಿಸುವ ಸಂಚು ರೂಪಿಸುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಇದು ಸರಿಯಲ್ಲ. ಉನ್ನತ ತನಿಖೆಯಾಗಬೇಕು ಎಂದರು.

ಗ್ಯಾರಂಟಿಗಳ ಕುರಿತ ಅಪಸ್ವರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅವರ ಸರ್ಕಾರದಲ್ಲಿಯೇ ಗೊಂದಲವಿದೆ. ಚುನಾವಣೆಗಾಗಿ ಸರ್ಕಾರ ಗ್ಯಾರಂಟಿ ಮಾಡಿದೆ ಅನ್ನುವುದು ಸ್ಪಷ್ಟ. ಒಬ್ಬರು ಗ್ಯಾರಂಟಿ ಬೇಡ ಅನ್ನುತ್ತಾರೆ. ಮತ್ತೊಬ್ಬರು ಮುಂದುವರಿಸುತ್ತೇವೆ ಅನ್ನುತ್ತಾರೆ. ಹೀಗಾಗಿ ಗ್ಯಾರಂಟಿಗಳ ಸ್ಥಿತಿ ಅತಂತ್ರವಾಗಿದೆ ಎಂದರು

ಜನರಿಗೆ ನೇರವಾಗಿ ತಲುಪುತ್ತದೆ
ಯಾವುದೇ ಖಾತೆ ಲೈಟ್ ವೇಟ್ ಅಲ್ಲ, ಹೆವಿ ವೇಟ್ ಅಲ್ಲ.ನನಗೆ ಸಿಕ್ಕಿರುವ ಖಾತೆ ಜನರಿಗೆ ನೇರವಾಗಿ ತಲುಪುತ್ತದೆ.ರಕ್ಷಣ ಖಾತೆಗೆ ಬಿಟ್ಟರೆ ಅತೀ ಹೆಚ್ಚು ಬಜೆಟ್ ಬರುವ ಖಾತೆ ನನ್ನದು ಎಂದರು.

ಅದ್ದೂರಿ ಸ್ವಾಗತ
ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಚಿವ ಪ್ರಹ್ಲಾದ ಜೋಶಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬಿಜೆಪಿಯ ಸ್ಥಳೀಯ ಶಾಸಕರು, ಧುರೀಣರು, ಕಾರ್ಯಕರ್ತರು ಭವ್ಯವಾಗಿ ಸ್ವಾಗತಿಸಿದರು. ಭಾರತ ಮಾತಾ ಕೀ ಜೈ, ನರೇಂದ್ರ ಮೋದಿ ಜೈ, ಪ್ರಹ್ಲಾದ ಜೋಶಿ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು.

ವಿಮಾನ ನಿಲ್ದಾಣ ಮುಖ್ಯ ಪ್ರವೇಶ ದ್ವಾರ ಬಳಿ ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮೀಣ ವತಿಯಿಂದ ಬೃಹತ್ ಕ್ರೇನ್ ಮೂಲಕ ಅಂದಾಜು 20ಅಡಿ ಎತ್ತರದ ಬೃಹದಾಕಾರದ ಸೇಬುಗಳ ಹಾರ ಹಾಕಿ, ಪಟಾಕಿ ಸಿಡಿಸಿ ಜಯಘೋಷಗಳ ಮುಂಖಾತರ ಭವ್ಯವಾಗಿ ಸ್ವಾಗತಿಸಿದರು.

ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮಹಾಪೌರ ವೀಣಾ ಬರದ್ವಾಡ, ಉಪ ಮಹಾಪೌರ ಸತೀಶ ಹಾನಗಲ್, ವಿಪ ಸದಸ್ಯ ಪ್ರದೀಪ ಶೆಟ್ಟರ, ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಬಿಜೆಪಿಯ ಪಾಲಿಕೆ ಸದಸ್ಯರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರ ಸ್ಥಳೀಯ ಬೆಂಬಲಿಗರು ಜೋಶಿ ಅವರ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next