ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ಬೀದಿಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ರೋಡ್ ಶೋ ಮೂಲಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಸರವಣ ಪರ ಮತಯಾಚನೆ ಮಾಡಿದರು.
ಮತ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ಕಳೆದ ಮೂರುವರೆ ದಶಕಗಳಿಂದ ನಗರದ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರದಲ್ಲಿ ಯಾವುದೇ ಪ್ರಮುಖ ಅಭಿವೃದ್ಧಿ ಕಾರ್ಯಗಳು ನಡೆಯದೆ ಕ್ಷೇತ್ರ ಹಿಂದುಳಿದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ನಿಮ್ಮ ಮನೆಯ ಮಗ ಸರವಣ ಅವರು ಕಣಕ್ಕಿಳಿದಿದ್ದಾರೆ. ಮತದಾರ ಪ್ರಭುಗಳಾದ ತಾವುಗಳು ತಮ್ಮ ಅಮೂಲ್ಯ ಮತವನ್ನು ಕಮಲದ ಗುರುತಿಗೆ ನೀಡುವ ಮೂಲಕ ಭಾರಿ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಪ್ರಚಾರಕ್ಕೂ ಮುನ್ನ ಹಲಸೂರಿನಲ್ಲಿರುವ ತಮಿಳು ಕವಿ ತಿರುವಳ್ಳುವರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅವರ ಜತೆಯಲ್ಲಿ ಸಂಸದ ಪಿ.ಸಿ. ಮೋಹನ್, ಶಾಸಕ ಉದಯ ಗರುಡಾಚಾರ್, ಮೇಯರ್ ಗೌತಮ್‌ಕುಮಾರ್ ಜೈನ್, ಬಿಜೆಪಿ ಮುಖಂಡ ನಿರ್ಮಲ್ ಕುಮಾರ್ ಸುರಾನಾ ಇದ್ದರು.
ಕ್ಷೇತ್ರದ ಪ್ರಮುಖ ಬಡಾವಣೆಗಳಲ್ಲಿ ರೋಡ್ ಶೋ ನಡೆಸಿದ ಸಿಎಂ ಯಡಿಯೂರಪ್ಪ ಅವರು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ನಮ್ಮ ಸರ್ಕಾರಕ್ಕೆ ನೀವು ಬೆಂಬಲ ನೀಡಿದರೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಹಿಂದೆ ಈ ಕ್ಷೇತ್ರದ ವಾರ್ಡ್‌ಗೆ ಪಾಲಿಕೆ ಸದಸ್ಯನಾಗಿ ಸೇವೆ ಸಲ್ಲಿರುವ ಸರವಣ ಅವರಿಗೆ ಮತ ನೀಡುವ ಮೂಲಕ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಕರೆ ನೀಡಿದರು.
ರಸಲ್ ಮಾರ್ಕೆಟ್‌ನಲ್ಲಿ ಮತಯಾಚನೆ: ಬೆಳಗ್ಗೆ ರಸಲ್ ಮಾರ್ಕೆಟ್‌ನಿಂದ ಮತ ಪ್ರಚಾರ ಆರಂಭಿಸಿದ ಸರವಣ ಅವರು, ಅಲ್ಲಿನ ವ್ಯಾಪಾರಿಗಳ ಜತೆ ಸಮಾಲೋಚನೆ ನಡೆಸಿ, ನಿಮ್ಮ ಸಮಸ್ಯೆಗಳನ್ನು ಹಾಗೂ ಕಷ್ಟಗಳನ್ನು ನೇರವಾಗಿ ಕಂಡಿದ್ದೇನೆ. ಅವುಗಳೆಲ್ಲವೂ ನನ್ನ ಮನಸ್ಸಿನಲ್ಲಿವೆ. ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನಿಮ್ಮೆಲ್ಲರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ನಂತರ ಸ್ಥಳೀಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ವಿವಿಧ ಭಾಗದ ಮನೆ ಮನೆಗೆ ತೆರಳಿ ಮತಯಾಚಿಸಿದರು. ಸಂಜೆ ಜಯಮಹಲ್ ವಾರ್ಡ್ ಬಡಾವಣೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದರು. ಸರವಣ ಅವರಿಗೆ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಾಥ್ ನೀಡಿದರು.