Advertisement

ಒಂದು ಗಂಟೆ 50 ನಿಮಿಷ ಬಜೆಟ್‌ ಮಂಡಿಸಿದ ಯಡಿಯೂರಪ್ಪ

10:55 PM Mar 05, 2020 | Team Udayavani |

“ವಿಪ್ರ, ವಣಿಕ, ನೃಪನಿಗಧಿಕ, ಅನ್ನದಾತ ಕೃಷಿಕ’, “ಕೃಷಿತೋ ನಾಸ್ತಿ ದುರ್ಭಿಕ್ಷಂ’ ವಾಚನದ ಮೂಲಕ ಬಜೆಟ್‌ ಆರಂಭಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 104 ಪುಟಗಳ ಬಜೆಟ್‌ಅನ್ನು 1 ಗಂಟೆ 50 ನಿಮಿಷಗಳ ಕಾಲ ಓದಿದರು.

Advertisement

ಹಸಿರು ಶಾಲು, ಬಜೆಟ್‌ ಪುಸ್ತಕದ ಸೂಟ್‌ಕೇಸ್‌ ಹಿಡಿದು ಸದನ ಪ್ರವೇಶಿಸಿದ ಯಡಿಯೂರಪ್ಪ, ಬೆಳಗ್ಗೆ 11 ಗಂಟೆಗೆ ಬಜೆಟ್‌ ಭಾಷಣ ಪ್ರಾರಂಭಿಸಿ 12.50 ನಿಮಿಷಕ್ಕೆ ಮುಗಿಸಿದರು. ಬಜೆಟ್‌ ಭಾಷಣ ಮುಗಿಯುತ್ತಿದ್ದಂತೆ ಸಚಿವ ಸಂಪುಟ ಸದಸ್ಯರು ಅವರತ್ತ ಧಾವಿಸಿ ಅಭಿನಂದಿಸಿದರು.

ಯಡಿಯೂರಪ್ಪ ಅವರು ಭಾಷಣದ ಪ್ರಾರಂಭದಲ್ಲೇ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ಕರ್ನಾಟಕದ ಸಮಗ್ರ, ಸಮತೋಲಿತ ಮತ್ತು ಸಾಮಾಜಿಕ ನ್ಯಾಯ ಆಧರಿಸಿದ ಅಭಿವೃದ್ಧಿ, ಕೇಂದ್ರಿತ ಮುಂಗಡ ಪತ್ರ ಮಂಡಿಸುವ ಅವಕಾಶವಿತ್ತ ಕರ್ನಾಟಕದ ಜನತೆಗೆ ಚಿರ ಋಣಿಯಾಗಿದ್ದೇನೆ ಎಂದು ಹೇಳಿದರು.

ನಾನು ಮಂಡಿಸುತ್ತಿರುವ ಏಳನೆಯ ಬಜೆಟ್‌ ಇದಾಗಿದೆ. ಉಪ ಮುಖ್ಯಮಂತ್ರಿಯಾಗಿ ಎರಡು, ಮುಖ್ಯಮಂತ್ರಿಯಾಗಿ ನಾಲ್ಕು ಮುಂಗಡ ಪತ್ರ ಮಂಡಿಸಿದ್ದೇನೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ, ಸಾಮಾಜಿಕ ನ್ಯಾಯದೊಂದಿಗೆ ಸರ್ವರಿಗೂ ಸಮಬಾಳು ಮತ್ತು ಸಮಪಾಲು ನೀಡುವ ಧ್ಯೇಯ ನಮ್ಮ ದಾರಿ. ಸರ್ವೋದಯ ಗಮ್ಯದತ್ತ, ಅಂತ್ಯೋದಯದ ಹಾದಿನಲ್ಲಿ ನಮ್ಮ ಸರ್ಕಾರ ಸಾಗಿದೆ ಎಂದು ತಿಳಿಸಿದರು.

ಪುತ್ರನಿಂದ ವೀಕ್ಷಣೆ: ಬಿ.ಎಸ್‌.ಯಡಿಯೂರಪ್ಪ ಅವರು ಬಜೆಟ್‌ ಮಂಡಿಸುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಪುತ್ರ ವಿಜಯೇಂದ್ರ , ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್‌ಗೌಡ ಕುಳಿತು ವೀಕ್ಷಿಸಿದರು.

Advertisement

ಬಿಎಸ್‌ವೈ ಪೂಜೆ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಜೆಟ್‌ ಮಂಡನೆಗೆ ವಿಧಾನಸೌಧಕ್ಕೆ ಆಗಮಿಸುವ ಮುನ್ನ ಮಲ್ಲೇಶ್ವರದ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಜತೆಗಿದ್ದರು. ನಂತರ ಯಡಿಯೂರಪ್ಪ ಅವರು ವಿಧಾನಸೌಧಕ್ಕೆ ಆಗಮಿಸಿ ಸಂಪುಟ ಸಭೆ ನಡೆಸಿ ಅಲ್ಲಿಂದ ಸದನಕ್ಕೆ ಆಗಮಿಸಿ ಬಜೆಟ್‌ ಮಂಡಿಸಿದರು.

ಎಂಬಿಪಿಗೆ ತಿರುಗೇಟು: ಮುಖ್ಯಮಂತ್ರಿಯವರು ಬಜೆಟ್‌ ಭಾಷಣ ಪೂರ್ಣಗೊಳಿಸಿ ಸದನ ಶುಕ್ರವಾರಕ್ಕೆ ಮುಂದೂಡಿದ ನಂತರ ಸದನದಲ್ಲೇ ಇದ್ದ ಎಂ.ಬಿ.ಪಾಟೀಲ್‌ ಅವರು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಕುರಿತು “ಕಾರಜೋಳ್‌ ಎಲ್ಲಿ ಕೃಷ್ಣಾ ಮೇಲ್ದಂಡೆಗೆ 20 ಸಾವಿರ ಕೋಟಿ’ ಎಂದು ಕಿಚಾಯಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿ ಹಲವರು ಕಾರಜೋಳ ಬೆನ್ನಿಗೆ ನಿಂತು ನೀವು ಕೊಟ್ಟಿದ್ದಿರಾ? ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next