ಹಾವೇರಿ: ರಾಜ್ಯದಲ್ಲಿ ಸರ್ಕಾರ ರಚಿಸಲು ಯಡಿಯೂರಪ್ಪ ಒಬ್ಬಂಟಿಯಾಗಿ ಆಟ ಆಡುತ್ತಿದ್ದಾರೆ. ಅವರ ಆಟದಲ್ಲಿ ನಿರ್ಣಾಯಕರು, ಆಟಗಾರರು, ಹಿಡಿತಗಾರರು ಯಾರೂ ಇಲ್ಲ ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹಮದ್ ವ್ಯಂಗ್ಯವಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ. ಅವರು ಸಿಎಂ ಆಗಿ ಸರ್ಕಾರ ರಚಿಸುವ ಹಗಲು ಕನಸು ಕಾಣುತ್ತಿದ್ದಾರೆ. ರಾಜಕಾರಣದಲ್ಲಿ “ಆಪರೇಶನ್’ ಎಂಬುದು ಬಿಜೆಪಿ ತಂದ ಸಂಸ್ಕೃತಿ. ಈ ಸಂಸ್ಕೃತಿಯನ್ನು ಅವರೇ ಹುಟ್ಟು ಹಾಕಿದ್ದು, ಆ ಅಭ್ಯಾಸ ಕಾಂಗ್ರೆಸ್‌ಗೆ ಇಲ್ಲ. ಅಂಥ ಸಂದರ್ಭವೂ ಕಾಂಗ್ರೆಸ್‌ಗೆ ಬಂದಿಲ್ಲ ಎಂದರು.
ಸರ್ಕಾರ ರಚಿಸುವ ಹಿನ್ನೆಲೆಯಲ್ಲಿ ಬಿಜೆಪಿಯವರು ಎಲ್ಲ ಶಾಸಕರಿಗೂ ಆಹ್ವಾನ ಕೊಟ್ಟಿದ್ದಾರೆ. ಈ ಹಿಂದೆ ಹೊಸದಾಗಿ ಸರ್ಕಾರ ರಚಿಸುವಾಗ ನನಗೂ ಆಹ್ವಾನ ಕೊಟ್ಟಿದ್ದರು. ಶಾಸಕರನ್ನು ಆಹ್ವಾನಿಸುವ ಪ್ರಯತ್ನವನ್ನು ಅವರು ಈಗಲೂ ಮುಂದುವರಿಸಿದ್ದಾರೆ. ಆದರೆ, ಕಾಂಗ್ರೆಸ್-ಜೆಡಿಎಸ್ ಶಾಸಕರೆಲ್ಲರೂ ಒಟ್ಟಾಗಿದ್ದು, ಐದು ವರ್ಷ ಸುಭದ್ರ ಆಡಳಿತ ಕೊಡುತ್ತೇವೆ ಎಂದು ಹೇಳಿದರು. ರಾಜಕಾರಣ ಬೆಳಗಾವಿಯಿಂದ ಬಳ್ಳಾರಿಗೆ ಸ್ಥಳಾಂತರವಾಗಿದೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು.
ಇಡಿಯಿಂದ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ವತಃ ಸಚಿವ ಡಿ.ಕೆ. ಶಿವಕುಮಾರ್ ಅವರೇ ತಿಳಿಸಿದ್ದಾರೆ. ಮುಂದೆ ನೋಟಿಸ್ ಬಂದರೆ ಅದನ್ನು ಎದುರಿಸುವ ಶಕ್ತಿ ಅವರಿಗಿದೆ. ಅವರು ದೆಹಲಿಗೆ ಹಣ ವರ್ಗಾಯಿಸಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ.
– ಜಮೀರ್ ಅಹಮದ್, ಸಚಿವ