Advertisement

ಅವರಪ್ಪನಾಣೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲ್ಲ

03:19 PM Jul 14, 2017 | Team Udayavani |

ಲಿಂಗಸುಗೂರು: ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ ಭ್ರಮೆಯಲ್ಲಿದ್ದಾರೆ. ಅವರಪ್ಪನಾಣೆ ಬಿ.ಎಸ್‌. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದರು. ಲಿಂಗಸುಗೂರು ನಗರದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ವಿಸ್ತಾರಕರ ಮೂಲಕ ಬಿಜೆಪಿ ಸಮಾಜದಲ್ಲಿ ಜಾತಿ ಬೀಜ ಬಿತ್ತಲು ಮುಂದಾಗಿದೆ. ಆ ಮೂಲಕ ಅಧಿಕಾರ
ಹಿಡಿಯಲು ಮುಂದಾದ ಬಿಜೆಪಿಗೆ ವೈಫಲ್ಯ ಕಟ್ಟಿಟ್ಟ ಬುತ್ತಿ ಎಂದರು.

Advertisement

ನಾವೂ ಹಿಂದುಗಳೇ. ನಾವು ಶ್ರೀರಾಮ, ಆಂಜನೇಯ, ವಿಷ್ಣುವಿನ ಪೂಜೆ ಮಾಡುತ್ತೇವೆ. ಆದರೆ, ಬಿಜೆಪಿಯವರು ಹಿಂದುಗಳನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಜಾತಿ ಬೀಜ ಬಿತ್ತಿಯೇ ಬಿಜೆಪಿ ಗೆಲುವು ಸಾ ಧಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ಅಂಥ ಆಟ ನಡೆಯುವುದಿಲ್ಲ ಎಂದರು. ಅಧಿಕಾರದಲ್ಲಿದ್ದಾಗ ಬಿಜೆಪಿಯವರು ದಲಿತರಿಗೆ ಏನೂ ಮಾಡಲಿಲ್ಲ. ಆದರೆ, ಈಗ ದಲಿತರ ಕಡೆಗೆ ನಮ್ಮ ನಡೆ ಎನ್ನುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ದಲಿತರಿಗೆ ಖರ್ಚು ಮಾಡಿದ್ದು ಕೇವಲ 25 ಸಾವಿರ ಕೋಟಿ ರೂ. ಆದರೆ, ನಮ್ಮ ಸರ್ಕಾರ 85 ಸಾವಿರ ಕೋಟಿ ರೂ. ಖರ್ಚು ಮಾಡಿದೆ ಎಂದು ಹೇಳಿದರು.

ಸಾಲ ಮನ್ನಾ ಮಾಡಿಸಲಿ: ಬಿ.ಎಸ್‌. ಯಡಿಯೂರಪ್ಪನವರು ಉತ್ತರನ ಪೌರುಷ ತೋರದೆ ಪ್ರಧಾನಿಗೆ ಹೇಳಿ ರಾಷ್ಟ್ರೀಕೃತ ಬ್ಯಾಂಕ್‌
ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಲಿ. ರೈತರ ಸಾಲ ಮನ್ನಾ ಮಾಡಿದರೆ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಿದೆ ಎಂದು ಕೇಂದ್ರ ಸಚಿವ ಅರುಣ ಜೇಟ್ಲಿ ಹೇಳುತ್ತಿದ್ದಾರೆ. ಆದರೆ, ಕಾರ್ಪೋರೇಟ್‌ ವಲಯದ ಸಾವಿರಾರು ಕೋಟಿ ಮನ್ನಾ ಮಾಡಿದರೆ ದೇಶದ ಆರ್ಥಿಕ ಸ್ಥಿತಿ ಚನ್ನಾಗಿರುತ್ತದಾ? ಯಡಿಯೂರಪ್ಪನವರೇ ತಾಕತ್ತಿದ್ದರೆ ಸಂಸತ್‌ಗೆ ಮುತ್ತಿಗೆ ಹಾಕಿ ನರೇಂದ್ರ ಮೋದಿ ಮೂಗು
ಹಿಡಿದು ರೈತರ ಸಾಲ ಮನ್ನಾ ಮಾಡಿಸಿ ಎಂದು ಸವಾಲೆಸೆದರು. ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಅಚ್ಛೇ ದಿನ್‌ ಆಯೇಗಾ ಎನ್ನುತ್ತಿದ್ದರು. ಆದರೆ, ಮೂರು ವರ್ಷ ಕಳೆಯಿತು. ಯಾರಿಗಾದರೂ ಅಚ್ಛೇ ದಿನ್‌ ಬಂದಿದೆಯಾ? ಅಚ್ಛೇ ದಿನ್‌ ನಹಿ ಆಯೇಗಾ ಎಂದು ಟೀಕಿಸಿದರು. ನಾಲ್ಕು ವರ್ಷದಲ್ಲಿ ನಾವೇನು ಮಾಡಿದ್ದೇವೆ ಹಾಗೂ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರ
ಏನೇನು ಮಾಡಿದೆ ಎಂಬುದರ ಬಗ್ಗೆ ಚರ್ಚಿಸಲು ಬಹಿರಂಗ ಚರ್ಚೆಗೆ ಬಿಜೆಪಿಯವರಿಗೆ ಪಂಥಾಹ್ವಾನ ನೀಡುತ್ತೇನೆ. ಬಿ.ಎಸ್‌. ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ಬರಲಿ ಎಂದು ಸವಾಲೆಸೆದರು. 

ಉದ್ಯೋಗ ಸೃಷ್ಟಿ ಎಲ್ಲಿದೆ?: ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ, ಈವರೆಗೆ ಕೇವಲ ನಾಲ್ಕು ಲಕ್ಷ ಹುದ್ದೆ ನಿರ್ಮಿಸಿದ್ದಾರೆ. ಅಧಿಕಾರಕ್ಕೆ ಬಂದು 100 ದಿನದಲ್ಲಿ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದಿದ್ದರು. ಆದರೆ, 15 ಪೈಸೆ ಕೂಡ ಹಾಕಿಲ್ಲ. ಬಿಜೆಪಿಯವರ ಬಾಯಿ ಬಡಾಯಿದ್ದಂತೆ. ಮಾಜಿ ಸಿಎಂ ಯಡಿಯೂರಪ್ಪ
ಹೋದಲ್ಲೆಲ್ಲ ಬರೀ ಮಾತಾಡುತ್ತಿದ್ದಾರೆ. ಅವರ ತಾಳಕ್ಕೆ ಶೋಭಾ ಕರಂದ್ಲಾಜೆ ಮೇಳದಂತಿದ್ದಾರೆ ಎಂದು ವ್ಯಂಗ್ಯವಾಡಿದರು.ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ, ನೀರಾವರಿ ಸಚಿವ ಎಂ.ಬಿ. ಪಾಟೀಲ, ಸಂಸದ ಬಿ.ವಿ. ನಾಯಕ ಸೇರಿ ಜಿಲ್ಲೆಯ ಜನಪ್ರತಿನಿ  
ಧಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next