ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮತ್ತೆ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ಆದರೆ, ಕಾಂಗ್ರೆಸ್‌ನ ಯಾವುದೇ ಶಾಸಕರು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಪ್ರತಿ ಶಾಸಕರಿಗೆ 50 ಕೋಟಿ ರೂ.ವರೆಗೂ ಆಫರ್ ಕೊಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರ್ಯಾರೂ ಇದುವರೆಗೆ ಪಕ್ಷ ಬಿಡುವುದಾಗಿ ಹೇಳಿಲ್ಲ. ಯಡಿಯೂರಪ್ಪ ಅವರ ಕನಸು ನನಸಾಗುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್‌ನ ನಾಲ್ವರು ಶಾಸಕರು ಪಕ್ಷದ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಈಗ ಖುದ್ದು ಭೇಟಿ ಮಾಡುವಂತೆ ನೋಟಿಸ್ ನೀಡಿದ್ದೇವೆ. ಬಂದು ಭೇಟಿ ಮಾಡುವ ಸಾಧ್ಯತೆ ಇದೆ. ಜೆಡಿಎಸ್ ಜತೆ ಸೇರಿಯೇ ಲೋಕಸಭಾ ಚುನಾವಣೆ ಎದುರಿಸುತ್ತೇವೆ. ಆದರೆ, ಇನ್ನೂ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ ಎಂದರು.
ಮೈಸೂರಿನಿಂದ ಸ್ಪರ್ಧೆಗೆ ಒತ್ತಡ: “ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಸ್ಪರ್ಧಿಸುವಂತೆ ನನ್ನ ಮೇಲೂ ಒತ್ತಡವಿದೆ. ಆದರೆ, ನಾನು ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಇರಲು ತೀರ್ಮಾನಿಸಿದ್ದೇನೆ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಬೇಕೆಂಬ ಬೇಡಿಕೆ ಅವರ ಅಭಿಮಾನಿಗಳಿಂದ ಕೇಳಿ ಬಂದಿದೆ. ಅಂಬರೀಶ್ ಅವರು ಕಾಂಗ್ರೆಸ್‌ನಲ್ಲಿದ್ದರು. ಆಗ ಸುಮಲತಾ ಅವರೂ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮಾಡಿದ್ದರು. ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.