Advertisement

ಹತಾಶರಾಗಿದ್ದಾರೆ ಯಡಿಯೂರಪ್ಪ

07:56 AM Feb 04, 2019 | Team Udayavani |

ಚಿತ್ತಾಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹತಾಶರಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳಿಸುವ ವಿಫಲ ಯತ್ನ ಮಾಡುತ್ತಲೇ ಇದ್ದಾರೆ. ಆದರೆ ಅವರು ಅಂದುಕೊಂಡಂತೆ ಏನು ಆಗಲ್ಲ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ತಾಲೂಕಿನ ಡೋಣಗಾಂವ, ಭಂಕಲಗಾ, ಭೀಮನಳ್ಳಿ, ದಂಡಗುಂಡ ಮತ್ತು ಕರದಳ್ಳಿ ಗ್ರಾಮದಲ್ಲಿ 4.51 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂದು ಬಿಜೆಪಿಯವರು ಕೊಟ್ಟಿರುವ ಎಲ್ಲ ಡೆಡ್‌ಲೈನ್‌ಗಳು ಈಗಾಗಲೇ ಮುಗಿದು ಹೋಗಿವೆ. ಇದೀಗ ಸರ್ಕಾರ ಬೀಳಿಸಲು ಅವರ ಬಳಿ ಮತ್ತೇ ಯಾವ ಡೆಡ್‌ಲೈನ್‌ ಇದೆ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ರಾಜ್ಯದಲ್ಲಿ ಹಮ್ಮಿಕೊಂಡಿರುವ ಬರ ಅಧ್ಯಯನ ಬರೀ ನಾಟಕವಾಗಿದೆ. ಶಾಸಕ ಶ್ರೀರಾಮಲು ನನ್ನ ಕ್ಷೇತ್ರಕ್ಕೆ ಬಂದ್ದು ಬರ ಅಧ್ಯಯನ ಮಾಡುವುದು, ಕ್ಷೇತ್ರದ ಜನರ ಜತೆ ಚರ್ಚಿಸುವುದು ಬಿಟ್ಟು ಕಾಟಾಚಾರದ ಭೇಟಿ ನೀಡಿ ಯಾರ ಜತೆಗೂ ಚರ್ಚಿಸದೇ ಹೋಗಿದ್ದಾರೆ. ಅವರು ಒಂದು ಕ್ವಿಂಟಲ್‌ ತೊಗರಿಗೆ ಎಷ್ಟು ಮೌಲ್ಯ ಎಂದು ಹೇಳಿಬಿಡಲಿ ನೋಡೋಣ ಎಂದು ಸವಾಲು ಹಾಕಿದರು.

ಮೋದಿ ಕೇವಲ ಘೋಷಣೆ ಮಾಡಿದ್ದಾರೆ ಹೊರತು ಯಾವ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ. ಅವರು ಜಾರಿಗೆ ತಂದಿದ್ದು ಅದಾನಿ, ಅಂಬಾನಿ ದುಡ್ಡು ಬಳಸಿ ರಾಜ್ಯದಲ್ಲಿ ಆಪರೇಷನ್‌ ಕಮಲ ಮಾಡುತ್ತಿರುವುದು. ಇದನ್ನು ಜನರು ಗಮನಹರಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ ಮಾತನಾಡಿದರು.

Advertisement

ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಅಧ್ಯಕ್ಷ ಸಾಬಣ್ಣ ವೈ. ಕಾಶಿ, ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಪಾಶಾಮಿಯ್ನಾ ಖುರೇಶಿ, ಮುಖಂಡರಾದ ರಮೇಶ ಮರಗೋಳ, ನಿಂಗಣ್ಣ ಹೇಗಲೇರಿ, ಶರಣು ಡೋಣಗಾಂವ, ಶಾಂತಪ್ಪ ಚಾಳಿಕಾರ, ಭೀಮು ಹೋತಿನಮಡಿ, ಬಸವರಾಜ ಚಿನ್ನಮಳ್ಳಿ, ಈರಪ್ಪ ಭೋವಿ, ಮಲ್ಲಿಕಾರ್ಜುನ ಮುಡಬೂಳಕರ್‌, ನಾಗರಾಜ ಸಜ್ಜನ, ಮಲ್ಲಿಕಾರ್ಜುನ ಬಮ್ಮನಳ್ಳಿ, ಶೇಖ ಬಬ್ಲು, ಶಿವಾಜಿ ಕಾಶಿ, ನಜೀರ್‌ ಆಡಕಿ, ಕಲೀಂ ಇದ್ದರು.

ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ ಅವರ ಕಾರ್ಯಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ನಾನು ಯಾರ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಮತ್ತು ಅಡ್ಡಿಪಡಿಸಿಲ್ಲ. ಚಿತ್ತಾಪುರ ಜನರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದದಿಂದ ನಾನು ಎರಡು ಬಾರಿ ಶಾಸಕನಾಗಿ ಎರಡು ಬಾರಿ ಸಚಿವನಾಗಿ ಕ್ಷೇತ್ರಕ್ಕೆ ಬೇಕಾದ ಎಲ್ಲ ರೀತಿಯ ಸೌಲಭ್ಯವನ್ನು ಪ್ರಾಮಾಣಿಕವಾಗಿ ಅವರ ಮನೆ ಬಾಗಿಲಿಗೆ ಮುಟ್ಟಿಸುತ್ತಿದ್ದೇನೆ. ನನಗೆ ಕ್ಷೇತ್ರ, ಜಿಲ್ಲೆಯ ಜನರ ಅಭಿವೃದ್ಧಿ ಮುಖ್ಯ. ಅದು ಬಿಟ್ಟು ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಲ್ಲ. ಅಷ್ಟಕ್ಕೂ ಜಾಧವ ಅವರು ನಮ್ಮ ಪಕ್ಷದವರು, ವಿದ್ಯಾವಂತರಿದ್ದಾರೆ. ಆ ತರಹದ ಯಾವುದೇ ಸಮಸ್ಯೆಗಳು ಇದ್ದರೇ ಕೂಡಲೇ ಪಕ್ಷದ ಹಿರಿಯ ನಾಯಕರೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಲಿ.
•ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಖಾತೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next