ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆ ತರಾತುರಿಯಲ್ಲಿ ಕೈಗೊಂಡಿದ್ದ 1281.21 ಕೋಟಿ ರೂ. ಮೊತ್ತದ ಕಾಮಗಾರಿಗೆ ‘ಬ್ರೇಕ್’ ಹಾಕಲಾಗಿದೆ.
ಆರ್ಥಿಕ ಇಲಾಖೆಯ ಅನುಮೋದನೆ ಪಡೆಯದೆ 1281.21 ಕೋಟಿ ರೂ. ಮೊತ್ತದ ಕಾಮಗಾರಿಗಳಲ್ಲಿ ಕೆಲವೊಂದಕ್ಕೆ ಕಾಮಗಾರಿ ಆದೇಶ ಸಹ ನೀಡಿರುವುದು ಪತ್ತೆಯಾಗಿದ್ದು, ತಕ್ಷಣಕ್ಕೆ ಪ್ರಾರಂಭವಾಗದ ಕಾಮಗಾರಿಗಳ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಲಾಗಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ , ಹಾಸನ ಹಾಗೂ ಮಂಡ್ಯ ಭಾಗಕ್ಕೆ ಹೆಚ್ಚಿನ ಕಾಮಗಾರಿಗಳನ್ನು ಹಂಚಿಕೆ ಮಾಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈಗ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ತಿಂಗಳೊಳಗೆ ಕಾಮಗಾರಿ ಸ್ಥಗಿತಕ್ಕೆ ಆದೇಶಿಸಿರುವುದು ರಾಜಕೀಯವಾಗಿ ಕುತೂಹಲ ಕೆರಳಿಸಿದೆ.
ಆರ್ಥಿಕ ಇಲಾಖೆ ಅನುಮತಿ ದೊರೆಯದಿದ್ದರೂ, ಕೆಲವೊಂದು ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಿ ಆದೇಶ ಸಹ ನೀಡಲಾಗಿತ್ತು. ಈಗ ಆರ್ಥಿಕ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿ 1281.20 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ತಡೆಯೊಡ್ಡಿದೆ.
2018-19ನೇ ಸಾಲಿನ ಕೊನೆಯ ತ್ತೈಮಾಸಿಕದ ಅಂತ್ಯದಲ್ಲಿ ಹಾಗೂ 2019-20ನೇ ಸಾಲಿನ ಅವಧಿಯಲ್ಲಿ ಹೊಸ ಕಾಮಗಾರಿಗಳನ್ನು ಅಪೆಂಡಿಕ್ಸ್-ಇ ನಲ್ಲಿ ಸೇರಿಸುವ ಷರತ್ತಿಗೊಳಪಟ್ಟು ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಸೇರ್ಪಡೆ ಮಾಡಿ 2019-20ನೇ ಸಾಲಿನ ರಸ್ತೆ ಮತ್ತು ಸೇತುವೆ ಹೊಸ ಕಾಮಗಾರಿಗಳ ಅಪೆಂಡಿಕ್ಸ್-ಇ ಅನ್ನು ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಸಲ್ಲಿಸಲಾಗಿತ್ತು. ಆದರೆ, ಆರ್ಥಿಕ ಇಲಾಖೆಯು ಹಿಂಬರಹದಲ್ಲಿ ಅಪೆಂಡಿಕ್ಸ್-ಇಗೆ ಅನುಮೋದನೆ ನೀಡಿರುವುದಿಲ್ಲ. ಆದ್ದರಿಂದ ಸದರಿ ಅಪೆಂಡಿಕ್ಸ್ -ಇ ನಲ್ಲಿ ಪ್ರಸ್ತಾಪಿಸಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ನಿರ್ದೇಶಿಸಲಾಗಿದೆ ಎಂದು ಅಪರ ಮುಖ್ಯ ಕಾರ್ಯದರ್ಶಿಯವರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಖ್ಯ ಎಂಜಿನಿಯರ್ ಸಂಪರ್ಕ ಮತ್ತು ಕಟ್ಟಡ ವಿಭಾಗಕ್ಕೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.
ಈ ಮಧ್ಯೆ, ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒನ್ ಟೈಮ್ ಕಾಮಗಾರಿಗಳು ಎಂದು ಆಗಿನ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು 1200 ಕೋಟಿ ರೂ.ಕಾಮಗಾರಿಗಳಿಗೆ ಒಪ್ಪಿಗೆ ನೀಡಿದ್ದರು. ನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ 500 ಕೋಟಿ ರೂ.ಕಾಮಗಾರಿಗಳನ್ನು ಸೇರಿಸಲಾಯಿತು. ಇದೀಗ ಆ ಕಾಮಗಾರಿಗಳ ಪೈಕಿ ಕಾಮಗಾರಿ ಆದೇಶ ನೀಡದ ಹಾಗೂ ಟೆಂಡರ್ ಪ್ರಕ್ರಿಯೆ ನಡೆಸದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಂತೆ ಸೂಚನೆ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
– ಎಸ್. ಲಕ್ಷ್ಮಿನಾರಾಯಣ