Advertisement

Lok Sabha Election 2024 ಯಡಿಯೂರಪ್ಪ , ಬಂಗಾರಪ್ಪ ಪುತ್ರರ ಸೆಣಸಾಟದ ಕಣ

11:45 PM Mar 05, 2024 | Shreeram Nayak |

ಶಿವಮೊಗ್ಗ: ರಾಜ್ಯ ರಾಜಕೀಯದ ಶಕ್ತಿ ಕೇಂದ್ರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲು ವೇದಿಕೆ ಸಜ್ಜಾಗಿದೆ. ಎಂಟು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ಸಮಬಲ ಹೊಂದಿದ್ದು, ಮಾಜಿ ಸಿಎಂ ಮಕ್ಕಳೇ ಮತ್ತೊಮ್ಮೆ ಮುಖಾಮುಖಿ ಆಗುವುದು ಬಹುತೇಕ ಖಚಿತವಾಗಿದೆ.

Advertisement

ಶಿವಮೊಗ್ಗ ಕ್ಷೇತ್ರ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಒಳಗೊಂಡಂತೆ ಎಂಟು ವಿಧಾನಸಭಾ ಕ್ಷೇತ್ರವನ್ನು ಹೊಂದಿದೆ. ನಾಲ್ಕರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್‌, ಒಂದರಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. 2019ರ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರ ಹೊರತುಪಡಿಸಿದರೆ ಉಳಿದೆಲ್ಲೆಡೆ ಬಿಜೆಪಿ ಶಾಸಕರಿದ್ದರು. 2014ರಲ್ಲಿ ಮೂರರಲ್ಲಿ ಜೆಡಿಎಸ್‌, ನಾಲ್ಕರಲ್ಲಿ ಕಾಂಗ್ರೆಸ್‌, ಒಂದರಲ್ಲಿ ಬಿಜೆಪಿ ಶಾಸಕರಿದ್ದರು. ಜೆಡಿಎಸ್‌ ಬಿಜೆಪಿಗೆ ಬೆಂಬಲ ನೀಡಿರುವುದರಿಂದ ಈ ಬಾರಿ ಕ್ಷೇತ್ರದ ಲೆಕ್ಕಾಚಾರ ಕೊಂಚ ಭಿನ್ನವಾಗಿದೆ.

1952ರಿಂದ ಇಲ್ಲಿವರೆಗೂ ಉಪ ಚುನಾ ವಣೆ ಸೇರಿ ಒಟ್ಟು 19 ಬಾರಿ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದು, ಕಾಂಗ್ರೆಸ್‌ 10 ಬಾರಿ ಗೆಲುವು ಸಾಧಿಸಿದೆ. ಬಿಜೆಪಿ ಆರು ಬಾರಿ ಗೆದ್ದರೆ, ಸೋಷಿಯಲಿಸ್ಟ್‌ ಪಾರ್ಟಿಯಿಂದ ಜೆ.ಎಚ್‌. ಪಟೇಲ್‌, ಸಮಾಜವಾದಿ ಹಾಗೂ ಕರ್ನಾಟಕ ಜನತಾ ಪಕ್ಷದ ಚಿಹ್ನೆ ಅಡಿ ಬಂಗಾರಪ್ಪ ಗೆಲುವು ಸಾಧಿಸಿದ್ದರು.

1996ರ ವರೆಗೂ ಕಾಂಗ್ರೆಸ್‌ ಅಧಿಪತ್ಯ ಹೊಂದಿತ್ತು. 1996ರಲ್ಲಿ ಬಂಗಾರಪ್ಪ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಅಲ್ಲಿಯೂ ತಮ್ಮ ಹಿಡಿತ ಸಾಧಿಸಿದ್ದರು. 1999ರಲ್ಲಿ ಕಾಂಗ್ರೆಸ್‌, 2004ರಲ್ಲಿ ಬಿಜೆಪಿ, 2005ರಲ್ಲಿ ಸಮಾಜವಾದಿ ಪಕ್ಷದಿಂದಲೂ ಬಂಗಾರಪ್ಪ ಗೆದ್ದಿದ್ದರು. ಯಾವುದೇ ಪಕ್ಷಕ್ಕೆ ಹೋದರೂ ಬಂಗಾರಪ್ಪನವರಿಗೆ ಗೆಲುವು ಎಂಬಂತಿತ್ತು. 2009ರಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ. ವೈ.ರಾಘವೇಂದ್ರ ಅವರು ಬಂಗಾರಪ್ಪ ಅವರಿಗೆ ಸೋಲಿನ ರುಚಿ ತೋರಿಸಿದರು. 2014ರಲ್ಲಿ ಯಡಿಯೂರಪ್ಪ ಸಹ ಭಾರೀ ಅಂತರದ ಗೆಲುವು ಸಾ ಧಿಸಿದರು. 2009ರಿಂದ ಬಂಗಾರಪ್ಪ, ಯಡಿಯೂರಪ್ಪ ಕುಟುಂಬದ ಕುಡಿಗಳು ಮುಖಾಮುಖೀಯಾಗುತ್ತಿವೆ.

ಜಾತಿ ಲೆಕ್ಕಾಚಾರ ಹೇಗಿದೆ?
ಕ್ಷೇತ್ರದಲ್ಲಿ 14.82 ಲಕ್ಷ ಮತದಾರರಿದ್ದು 4 ಲಕ್ಷ ಈಡಿಗರು, 3 ಲಕ್ಷಕ್ಕೂ ಅಧಿಕ ಲಿಂಗಾಯತರು, 3 ಲಕ್ಷಕ್ಕೂ ಅಧಿಕ ಮುಸ್ಲಿಮರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಜಾತಿ ಲೆಕ್ಕಾಚಾರಗಳು ನಡೆಯುತ್ತಿಲ್ಲ. ಅಭಿವೃದ್ಧಿ, ರಾಷ್ಟ್ರೀಯತೆ, ಹಿಂದುತ್ವದ ಅಲೆ ಫ‌ಲಿತಾಂಶ ತಲೆಕೆಳಗಾಗಿಸಿವೆ. ಈ ಚುನಾವಣೆ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಲಿದೆ. ಈವರೆಗೆ ಸ್ಪರ್ಧಿಸಿ ಗೆದ್ದವರೆಲ್ಲ ಪ್ರಬಲ ಸಮುದಾಯದವರೇ ಎಂಬುದು ಇಲ್ಲಿನ ವಿಶೇಷ. ಈಡಿಗ ಮತಗಳು ಛಿದ್ರಗೊಂಡಿರುವುದು ಈಡಿಗ ಅಭ್ಯರ್ಥಿಗಳ ಗೆಲುವಿಗೆ ತೊಡಕಾಗಿದೆ.

Advertisement

ಸೇಡಿಗೆ ಕಾದು ಕುಳಿತ ಬಂಗಾರಪ್ಪ ಕುಟುಂಬ
ಬಿಜೆಪಿಯಿಂದ ಹಾಲಿ ಸಂಸದ ಬಿ. ವೈ. ರಾಘವೇಂದ್ರ ಅವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತಗೊಂಡಿದ್ದು ಕಾಂಗ್ರೆಸ್‌ನಿಂದ ಯಾರು ಎಂಬ ಕುತೂಹಲ ಹೆಚ್ಚುತ್ತಿದೆ. ಬಂಗಾರಪ್ಪ ಕುಡಿಗಳೇ ಪ್ರತಿಸ್ಪರ್ಧಿಯಾಗಲಿದ್ದಾರೆ ಎಂದು ಕಾಂಗ್ರೆಸ್‌ ಪಾಳಯದಲ್ಲಿ ಕೇಳಿ ಬರುತ್ತಿದೆ. ಸಚಿವ ಮಧು ಬಂಗಾರಪ್ಪ, ಸಹೋದರಿ ಗೀತಾ ಶಿವರಾಜ್‌ಕುಮಾರ್‌ ಹೆಸರು ಇಷ್ಟು ದಿನ ಓಡಾಡುತ್ತಿದ್ದು, ಈಗ ಬಿಜೆಪಿ ಮುಖಂಡ ಕುಮಾರ್‌ ಬಂಗಾರಪ್ಪ ಹೆಸರು ಕೇಳಿಬರುತ್ತಿದೆ. ಕುಮಾರ್‌ ಬಂಗಾರಪ್ಪ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಒಂದು ವೇಳೆ ಕಾಂಗ್ರೆಸ್‌ಗೆ ಅವರು ಬಂದರೆ ಈಡಿಗ ಸಮುದಾಯದಲ್ಲಿ ಸಂಚಲನ ಮೂಡುವುದು ಖಂಡಿತ.

ಬಂಗಾರಪ್ಪ ಮಕ್ಕಳು ಒಂದಾಗುವುದನ್ನು ಸಮುದಾಯ ಕೂಡ ಎದುರು ನೋಡುತ್ತಿದೆ. ತಂದೆ ಆದಿಯಾಗಿ ಮಕ್ಕಳಿಗೂ ಸೋಲಿನ ರುಚಿ ತೋರಿಸಿರುವ ಯಡಿಯೂರಪ್ಪ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ. ಇತ್ತ ಬಿಜೆಪಿಯಿಂದಲೂ ಕುಮಾರ್‌ ಬಂಗಾರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಪ್ರಯತ್ನ ನಡೆಯುತ್ತಿದೆ.

– ಶರತ್‌ ಭದ್ರಾವತಿ

 

Advertisement

Udayavani is now on Telegram. Click here to join our channel and stay updated with the latest news.

Next