ಬೆಂಗಳೂರು: ಮಹದಾಯಿ ನೀರು ಹಂಚಿಕೆ ವಿವಾದ ಬಗೆ ಹರಿಸುವುದಾಗಿ ರಾಜ್ಯದ ಜನತೆಗೆ ಸುಳ್ಳು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನರಗುಂದ ನವಲಗುಂದ ರೈತರ ಬಳಿ ಹೋಗಿ ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಕ್ಷಮೆ ಕೇಳಲಿ. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಯಡಿಯೂರಪ್ಪ ಒತ್ತಡ ತರಲಿ ಎಂದು ಆಗ್ರಹಿಸಿದರು.
ಬಿಜಪಿಯವರು ರಾಜ್ಯದ ಜನತೆಯಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಅನಂತ ಕುಮಾರ್ ಹೇಳಿಕೆಗಳಿಂದ ರಾಜ್ಯದ ಜನತೆ ಭಯಭೀತರಾಗಿದ್ದಾರೆ. ಮುಂದೈತೆ ಮಾರಿ ಹಬ್ಬ ಎಂದು ಹೇಳುವ ಬಿಜೆಪಿ ನಾಯಕರ ಮಾತಿನ ಅರ್ಥ ಏನು ಎಂದು ದಿನೇಶ್ ಪ್ರಶ್ನಿಸಿದ್ದಾರೆ.
ಪರೇಶ್ ಮೇಸ್ತಾ ಪ್ರಕರಣದಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದ ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರದಲ್ಲಿಯೇ ಸಾವಿಗೀಡಾದ ಧನ್ಯಶ್ರೀ ಸಾವಿನ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಅವಳು ಹಿಂದೂ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರು ರಾಜ್ಯದಲ್ಲಿ ಗಲಾಟೆ ಮಾಡುತ್ತಿರುವುದರಿಂದ ಕನ್ನಡಿಗರ ಪ್ರಾಣ ಹೋಗುತ್ತಿದೆ. ಪಿಎಫ್ಐ, ಎಸ್‌ಟಿಪಿಐ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದರೆ, ಪ್ರಧಾನಿ ಬಳಿಗೆ ಹೋಗಿ ಬಿಜೆಪಿಯವರು ಒತ್ತಾಯ ಮಾಡಲಿ ಎಂದು ಹೇಳಿದ್ದಾರೆ.