Advertisement

ಈಶ್ವರಪ್ಪ ಆಪ್ತರ ಸಸ್ಪೆಂಡ್‌ಗೆ ಬಿಎಸ್‌ವೈ ಸಮರ್ಥನೆ

03:45 AM Jan 14, 2017 | |

ಶಿವಮೊಗ್ಗ: ತಮ್ಮ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್‌ ಸೇರಿದಂತೆ ಕೆಲ ಮುಖಂಡರು ಬರೆದಿದ್ದಾರೆನ್ನಲಾದ ಪತ್ರ ತಮಗೆ ಬಂದಿಲ್ಲ. ಆದರೆ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬರ ಅಧ್ಯಯನ ಸಮಿತಿಯಿಂದ ಈಶ್ವರಪ್ಪ ಅವರನ್ನು ಕೈಬಿಟ್ಟಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕೆಲವರು ಪತ್ರ ಬರೆದಿದ್ದಾರೆನ್ನಲಾದ ಪತ್ರ ತಮಗೆ ಬಂದಿಲ್ಲ. ಯಾವುದೇ ಬಗೆಯ ಅಸಮಾಧಾನವಿದ್ದರೂ ಅದನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಗೊಂದಲ ಸೃಷ್ಟಿಸಬಾರದು ಎಂದು ತಾಕೀತು ಮಾಡಿದರು.

ಯಾವುದೇ ಕಾರಣಕ್ಕೂ ಪದಾಧಿಕಾರಿಗಳ ಪಟ್ಟಿಯನ್ನು ಬದಲಿಸಲು ಸಾಧ್ಯವಿಲ್ಲ. ಬೇಕಾದರೆ ಅಸಮಾಧಾನವಿದ್ದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಳಿ ತಮ್ಮ ದೂರನ್ನು ತೋಡಿಕೊಳ್ಳಲಿ. ಅಲ್ಲಿಯೇ ಚರ್ಚಿಸಲಿ. ಆದರೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಏಕಪಕ್ಷೀಯ ನಿರ್ಧಾರವಲ್ಲ:
ರಾಯಣ್ಣ ಬ್ರಿಗೇಡ್‌ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಬಿಬಿಎಂಪಿ ಮಾಜಿ ಮೇಯರ್‌ ಡಿ. ವೆಂಕಟೇಶ್‌ಮೂರ್ತಿ ಹಾಗೂ ಇನ್ನೊಬ್ಬ ಮುಖಂಡ ಅವ್ವಣ್ಣ ಮ್ಯಾಕೇರಿ ಅವರನ್ನು ಅಮಾನತು ಮಾಡಿರುವುದು ಏಕಪಕ್ಷೀಯ ನಿರ್ಧಾರವಲ್ಲ. ಶಿಸ್ತು ಸಮಿತಿಯ ತೀರ್ಮಾನ. ಪಕ್ಷದ ಹಿರಿಯ ಮುಖಂಡರ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡಿದ್ದರಿಂದ ಶಿಸ್ತು ಕ್ರಮ ಕೈಗೊಳ್ಳಲು ಸಮಿತಿಯಲ್ಲಿ ಚರ್ಚೆ ನಡೆಸಿ ತೀರ್ಮಾನಿಸಲಾಗಿದೆ ಎಂದರು.

21ರಿಂದ ಕಾರ್ಯಕಾರಿಣಿ:
ಬೆಳಗಾವಿಯಲ್ಲಿ ಜ. 21 ಮತ್ತು 22 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಲ್ಲಿ ಎಲ್ಲರಿಗೂ ಮುಕ್ತವಾಗಿ ಚರ್ಚಿಸಲು ಅವಕಾಶವಿದೆ. ರಾಜ್ಯದಲ್ಲಿ ಪಕ್ಷಕ್ಕೆ ಈ ಬಾರಿ ಉತ್ತಮ ಬೆಂಬಲ ಸಿಗುವ ಆಶಾಭಾವವಿದೆ. ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಸರಿಯಲ್ಲ. ಪಕ್ಷದಲ್ಲಿ ಯಾರೂ ಗೊಂದಲ ಮೂಡಿಸಬಾರದು ಎಂದು ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next