ಹೊಸಂಗಡಿ: ಹೊಸಬಾಳು ಬಳಿ ಕುಬ್ಜಾ ನದಿಗೆ 40 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆ ಶಿಥಿಲಗೊಂಡು 2 ವರ್ಷಗಳಾಗುತ್ತ ಬಂದರೂ ಯಡಮೊಗೆ – ಹೊಸಂಗಡಿ ಸಂಪರ್ಕಿಸುವ ಹೊಸ ಸೇತುವೆ ನಿರ್ಮಾಣಕ್ಕೆ ಇನ್ನೂ ಕೂಡ ಕಾಲ ಕೂಡಿ ಬಂದಿಲ್ಲ.
ಕಳೆದ ಮಳೆಗಾಲದಲ್ಲಿ ತಾತ್ಕಲಿಕವಾಗಿ ನಿರ್ಮಿಸಿದ್ದ ಸಣ್ಣ ಸೇತುವೆಯೂ ಕೊಚ್ಚಿ ಹೋಗಿತ್ತು. ಈ ಬಾರಿ ಊರವರೇ ನಿರ್ಮಿಸಿಕೊಂಡ ಬದಲಿ ಸೇತುವೆಯೂ ಮುಳುಗುವ ಭೀತಿ ಜತೆಗೆ ಕೊಚ್ಚಿಕೊಂಡು ಹೋಗಿ, ಸಂಪರ್ಕ ಕಡಿತಗೊಳ್ಳುವ ಆತಂಕ ಇಲ್ಲಿನ ಜನರದ್ದು.
ಜಿಲ್ಲಾ ಪಂಚಾಯತ್ ಅನುದಾನದಡಿ 3.50 ಲಕ್ಷ ರೂ. ವೆಚ್ಚದಲ್ಲಿ ಶಿಥಿಲಗೊಂಡ ಸೇತುವೆ ಪಕ್ಕದಲ್ಲಿಯೇ 12 ಪೈಪ್‌ಗ್ಳನ್ನು ಬದಲಿ ನಿರ್ಮಿಸಲಾಗಿತ್ತು. ಅದು ಕಳೆದ ವರ್ಷದ ಜೂ. 13 ರಂದು ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿತ್ತು. ಇದರಿಂದಾಗಿ 3.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬದಲಿ ಸೇತುವೆ (ಮೋರಿ) ಕೂಡ ನೆರೆಗೆ ಕೊಚ್ಚಿ ಹೋಗಿದ್ದರಿಂದ ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕ ಕಡಿತಗೊಂಡಿತ್ತು.
ಕಳೆದೆರಡು ವರ್ಷಗಳ ಹಿಂದೆ ಸ್ಥಳೀಯರು ಜಿಲ್ಲಾ ಪಂಚಾಯತ್‌ಗೆ ದೂರು ಕೊಟ್ಟಿದ್ದರಿಂದ ಆಗಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಶಿವಾನಂದ ಕಾಪಶಿ ಅವರು ಸ್ವತಃ ಸ್ಥಳವನ್ನು ಪರಿಶೀಲಿಸಿದ್ದರು. ಬಳಿಕ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಆದೇಶಿಸಿದ್ದರು.
ಮತ್ತೆ ಆತಂಕ
ಕಳೆದ ವರ್ಷ ಕೊಚ್ಚಿಹೋದ ಸೇತುವೆಯ ಅಳಿದುಳಿದ ಪೈಪ್‌ಗ್ಳನ್ನೆಲ್ಲ ಸೇರಿಸಿ, ಊರವರೇ ಶ್ರಮದಾನದ ಮೂಲಕ ಸಂಚಾರಕ್ಕೆ ಅನುಕೂಲವಾಗುವಂತೆ ಬದಲಿ ಸೇತುವೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ.
ಆದರೆ ಅದು ಹಳೆಯ ಸೇತುವೆಗಿಂತ ಕೆಳಮಟ್ಟದಲ್ಲಿರುವುದರಿಂದ ಭಾರೀ ಮಳೆ ಬಂದಾಗ ನೆರೆಯಲ್ಲಿ ಕೊಚ್ಚಿಕೊಂಡು ಹೋಗುವ ಭೀತಿ ಇದೆ.
ಈ ಸೇತುವೆಯನ್ನು ನೂರಾರು ವಿದ್ಯಾರ್ಥಿಗಳು, ನಿತ್ಯ ಸಂಚಾರಿಗಳು ಆಶ್ರಯಿಸಿದ್ದು, ಇನ್ನಾದರೂ ಸಂಬಂಧಪಟ್ಟ ಇಲಾಖೆ ಸಮಸ್ಯೆ ಬಗೆ ಹರಿಸುವುದೇ ಎಂದು ಕಾದು ನೋಡಬೇಕಿದೆ.