ಯಾದಗಿರಿ: ಗುರುಮಠಕಲ್ ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ ಎಂಬುದಕ್ಕೆ ಬೇರೆ-ಬೇರೆ ಪಕ್ಷಗಳಿಂದ ಜೆಡಿಎಸ್‌ಗೆ ಸೇರ್ಪಡೆಯಾಗುತ್ತಿರುವುದೇ ತಾಜಾ ನಿದರ್ಶನ. ಎಲ್ಲ ವರ್ಗದಜನರೊಂದಿಗೆ ಕ್ಷೇತ್ರದ ಅಭಿವೃದ್ಧಿ ಮಾಡುವುದು ನನ್ನ ಗುರಿ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.
ಯಾದಗಿರಿಯ ನಿವಾಸದಲ್ಲಿ ಗುರುಮಠಕಲ್ ಕ್ಷೇತ್ರದ ಕರಣಗಿಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜಪ್ಪ ದೇಸಾಯಿ ಅವರನ್ನು ಜೆಡಿಎಸ್‌ಗೆ ಬರಮಾಡಿಕೊಂಡು ಮಾತನಾಡಿದ ಅವರು, ದೇಸಾಯಿ ಕಟ್ಟಾ ಕಾಂಗ್ರೆಸ್‌ನ ಅನುಯಾಯಿ. ಆದರೆ ಆ ಪಕ್ಷದಲ್ಲಿ ಅವರಿಗೆ ಸೂಕ್ತಸ್ಥಾನಮಾನ ಸಿಗಲಿಲ್ಲ. ಈ ರೀತಿ ಸಾಕಷ್ಟು ಹಿರಿಯರು ಕಾಂಗ್ರೆಸ್‌ನಲ್ಲಿ ನೋವು ಅನುಭವಿಸುತ್ತಿದ್ದಾರೆ. ದೇಸಾಯಿ ಅವರು ಜೆಡಿಎಸ್ ಸೇರ್ಪಡೆಯಾಗಿರುವುದು ನನಗೆ ಆನೆಬಲ ಬಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಳೆದ 5 ದಶಕಗಳಿಂದ ಕಂದಕೂರ ಮನೆತನ ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಿದೆ. ಸತ್ಯ, ನ್ಯಾಯ ಹಾಗೂ ನಿಷ್ಠೆಯ ಆಧಾರದಲ್ಲಿ ನಾವು ನಡೆಯುತ್ತಿದ್ದೇವೆ. ಅದಕ್ಕಾಗಿಯೇ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ಗುರುಮಠಕಲ್ ಕ್ಷೇತ್ರದಅಭಿವೃದ್ಧಿಯೇ ನನ್ನ ಮೂಲಮಂತ್ರ. ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ್ದ ಅನುದಾನ ಈಗಿನ ಮುಖ್ಯಮಂತ್ರಿಗಳು ತಡೆಹಿಡಿದಿದ್ದಾರೆ. ಅನುದಾನ ಬಿಡುಗಡೆಗೆ ಕೋರಿ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದರು.
ಕಡೇಚೂರು ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕಾರ ಮಾಡಲು ಮುಂದಾಗಿದ್ದನ್ನು ಅರಿತು ನಾನೇ ಸ್ವತಃ ಅವರ ಬಳಿ ತೆರಳಿ ಸಮಸ್ಯೆ ಆಲಿಸಿದ್ದೇನೆ. ಕಡೇಚೂರು-ಬಾಡಿಯಾಳ ಕೈಗಾರಿಕಾ ವಲಯದಲ್ಲಿನ ಏನೇ ಸಮಸ್ಯೆ ಇದ್ದರೂ ತಾನು ಆ ಭಾಗದ ಗ್ರಾಮಗಳ ಜನರ ಬೆನ್ನೆಲುಬಾಗಿದ್ದೇನೆ ಎಂದು ಭರವಸೆ ನೀಡಿದ್ದು ಗ್ರಾಮಸ್ಥರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿರುವುದು ಸಂತಸದ ಸಂಗತಿ ಎಂದರು.
ಇದೇ ವೇಳೆ ಪ್ರಮುಖರಾದ ಅಂಜಪ್ಪ ನಾಕೀನ್, ಬಸವರಾಜಪ್ಪಕೊತ್ತಪಲ್ಲಿ, ಯಂಕಣ್ಣ ಗಿರಣಿ,ಶಂಕ್ರಪ್ಪ ಕರಣಗಿ, ತಾಯಪ್ಪ,ರಾಮಲಿಂಗಪ್ಪ ಎಜ್ಜಲ್ಲಿ, ಹಯ್ನಾಳಪ್ಪ ಪೂಜಾರಿ ಪಕ್ಷಕ್ಕೆ ಸೇರ್ಪಡೆಯಾದರು. ಮುಖಂಡರಾದ ಜಿ.ತಮ್ಮಣ್ಣ, ವೆಂಕಟೇಶ ಪುಲಾರಿ ಇದ್ದರು.