ಗಂಗಾವತಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ದುರಸ್ತಿ ಕಾರ್ಯ ಬರದಿಂದ ನಡೆದಿದೆ. ಆದರೆ ಗುಣಮಟ್ಟ ಕಾಪಾಡಿಕೊಳ್ಳುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ. ಕಾಲುವೆ ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರ ಉಪಗುತ್ತಿಗೆ ನೀಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಯಂತೆ ಕಾಮಗಾರಿ ನಡೆದಿಲ್ಲ ಎಂದು ರೈತರು ಜಲಸಂಪನ್ಮೂಲ ಇಲಾಖೆ ವಿರುದ್ಧ ಆರೋಪಿಸಿದ್ದಾರೆ.
ತಾಲೂಕಿನ ಜಂಗ್ಲಿ ರಂಗಾಪುರ, ಮಲ್ಲಾಪುರ ಹತ್ತಿರ ಎಡದಂಡೆ ಕಾಲುವೆ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಕಾಲುವೆಯಲ್ಲಿ ಸಿಮೆಂಟ್ ಬೆಡ್ ಹಾಕಿ ಟಿವಾಲ್ ನಿರ್ಮಿಸಿ ಕಾಲುವೆ ಬಲಭಾಗದಲ್ಲಿ ಒಂದು ಮೀಟರ್‌ನಷ್ಟು ಮರಂ ಹಾಕಿ ನಂತರ ಕಬ್ಬಿಣದ ಸರಳುಗಳ ಲೈನಿಂಗ್ ಮಾಡುವುದು ಯೋಜನೆಯಲ್ಲಿರುವ ಕೆಲಸವಾಗಿದೆ. ಉಪಗುತ್ತಿಗೆ ಪಡೆದ
ಗುತ್ತಿಗೆದಾರರು ಬೆಡ್ ಟಿವಾಲ್ ನಿರ್ಮಿಸುತ್ತಿಲ್ಲ. ಕಾಲುವೆ ಬಲಭಾಗದಲ್ಲಿರುವ ಮಣ್ಣನ್ನು ಜೆಸಿಬಿ ಮೂಲಕ ಹರಡಿ ಕಬ್ಬಿಣದ ಸರಳಗಳನ್ನು ಹಾಕಲಾಗಿದೆ. ಈ ಭಾಗದಲ್ಲಿಯೇ ಹೆಚ್ಚು ನೀರಿನ ಹರಿವು ಇದ್ದು ಇಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳದಿದ್ದರೆ ಕಾಲುವೆಗೆ ನೀರು ಹರಿಸಿದ ಸಂದರ್ಭದಲ್ಲಿ ಸೋರಿಕೆಯಾಗುವ ಸಂಭವವಿದೆ. ಅನೇಕ ಭಾರಿ ಇಲ್ಲಿಯೇ ಸೋರಿಕೆ ಕಂಡು ಬಂದಿದ್ದು, ಇಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವುದು ಅವಶ್ಯವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಎಡದಂಡೆ ಕಾಲುವೆ ರೈತರು ಒಂದೇ ಬೆಳೆ ಬೆಳೆಯುತ್ತಿದ್ದು, ಈ ಭಾರಿಯೂ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಕಾರಣ ಜಲಾಶಯಕ್ಕೆ ಇನ್ನೂ ನೀರು ಬಂದಿಲ್ಲ. ಈ ಮಧ್ಯೆ ಅಧಿಕಾರಿಗಳು ಮತ್ತು ಕಾಮಗಾರಿ ಗುತ್ತಿಗೆ ಪಡೆದ ಗುತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡದೇ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ.
ಅಧಿಕಾರಿಗಳು ಗೈರು: ಸ್ಥಳೀಯರು ಹೇಳುವಂತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಜಲಸಂನ್ಮೂಲ ಇಲಾಖೆ ಇಂಜಿನಿಯರಗಳು ಇದ್ದು ಪರಿಶೀಲಿಸಬೇಕು. ಆದರೆ ಮುಖ್ಯಕಾಲುವೆ ಕಾಮಗಾರಿ ಕೆಲಸ ನಡೆಯುತ್ತಿದ್ದರೂ ಅಧಿಕಾರಿಗಳು ಇದುವರೆಗೂ ಒಂದರೆಡು ಸಾರಿ ಮಾತ್ರ ಬಂದು ಹೋಗಿದ್ದಾರೆ. ಕಾಮಗಾರಿ ಗುಣಮಟ್ಟದ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
•ಕೆ.ನಿಂಗಜ್ಜ