Advertisement

ಶಾಲಾ ವಾಸ್ತವ್ಯಕ್ಕೆ ವರ್ಷ ಕಳೆದರೂ ಬಗೆ ಹರಿಯದ ಹಲವು ಸಮಸ್ಯೆಗಳು

06:45 PM Nov 17, 2020 | mahesh |

ಹನೂರು (ಚಾಮರಾಜನಗರ): ಸರ್ಕಾರಿ ಶಾಲೆಯ ಸ್ಥಿತಿಗತಿ, ಮಕ್ಕಳ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಕಂಡು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಶಾಲಾ ವಾಸ್ತವ್ಯ ಮುಗಿದು ವರ್ಷವೇ ಕಳೆದಿದ್ದರೂ ಇನ್ನೂ ಕೂಡ ಹಲವಾರು ಸಮಸ್ಯೆಗಳು ಬಗೆಹರಿಯದಿರುವುದು ವಿಪರ್ಯಾಸವಾಗಿದೆ.

Advertisement

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಈ ಪೈಕಿ ಶಾಲಾ ವಾಸ್ತವ್ಯವೂ ಕೂಡ ಒಂದಾಗಿದೆ. ಇವರ 2ನೇ ಶಾಲಾ ವಾಸ್ತವ್ಯ ಜರುಗಿದ್ದು ಅವರೇ ಉಸ್ತುವಾರಿಯ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದ ಶಾಲೆಯಲ್ಲಿ. ರಾಜ್ಯದ ಗಡಿ ಗ್ರಾಮವಾದ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ 2019ರ ನವೆಂಬರ್ 18ರಂದು ಶಾಲಾ ವಾಸ್ತವ್ಯ ಹೂಡಿದ್ದರು. ನವೆಂಬರ್ 19 2019ರಂದು ಪುದೂರು, ಪಾಲಾರ್, ವಡಕೆಹಳ್ಳ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡು ಸಮಸ್ಯೆಗಳನ್ನು ಈಡೇರಿಸುವ ಭರವಸೆಗಳನ್ನು ನೀಡಿದ್ದರು. ಈ ಪೈಕಿ ಕೆಲ ಸಮಸ್ಯೆಗಳಷ್ಟೇ ಬಗೆಹರಿದಿದ್ದು ಇನ್ನೂ ಹತ್ತು ಹಲವು ಸಮಸ್ಯೆಗಳು ಬಗೆಹರಿಯದೆ ಭರವಸೆಯಾಗಿಯೇ ಉಳಿದಿವೆ.

ಬಗೆಹರಿದ ಸಮಸ್ಯೆಗಳು: ಗೋಪಿನಾಥಂ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡುವ ಮುನ್ನ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದ ಸಚಿವರಿಗೆ ಶಾಲಾ ವಿದ್ಯಾರ್ಥಿಗಳು ಗಡಿಗ್ರಾಮವಾದ ಗೋಪಿನಾಥಂನಲ್ಲಿ ಕನ್ನಡ ಮಾಧ್ಯಮ ಶಾಲೆ ಆರಂಭಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಸಚಿವರು ವಾಸ್ತವ್ಯದ ನಂತರದ 2-3 ದಿನಗಳಲ್ಲಿಯೇ ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಲು ಆದೇಶಿಸಿದ್ದರು. ಇದನ್ನು ಹೊರತುಪಡಿಸಿ ಪ್ರೌಢ ಶಾಲೆಯ ಮೈದಾನದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದಾಗಿ ವಿದ್ಯಾರ್ಥಿಗಳು ಭಯದಿಂದಲೇ ಇರಬೇಕಾಗಿದ್ದು ಆ ವಿದ್ಯುತ್ ಮಾರ್ಗವನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರು. ಇದನ್ನೂ ಕೂಡ ಕೆಲವೇ ದಿನಗಳಲ್ಲಿ ಬಗೆಹರಿಸಿದ್ದರು.

ಬಗೆಹರಿಯದ ಸಮಸ್ಯೆಗಳು: ಗೋಪಿನಾಥಂ ಗ್ರಾಮದ ಸುತ್ತಮುತ್ತಲ ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ ನಡೆದು ಅಥವಾ ತೆಪ್ಪದ ಮೂಲಕ ನದಿ ಹಾಯ್ದು ಶಾಲೆಗೆ ಬರಬೇಕಾದ ಪರಿಸ್ಥಿತಿಯಿದ್ದು ಕೂಡಲೇ ವಿದ್ಯಾರ್ಥಿ ನಿಲಯ ಪ್ರಾರಂಭಿಸಬೇಕು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಯೋಗಾಲಯ ತೆರೆಯಬೇಕು ಎಂದು ಮನವಿ ಮಾಡಿದ್ದರು.

ರಾಜ್ಯದ ಮತ್ತೊಂದು ಗಡಿಗ್ರಾಮವಾದ ಪಾಲಾರ್ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶಿಲನೆ ನಡೆಸಿದ ವೇಳೆ ಶಾಲೆಗೆ ಸುತ್ತು ಗೋಡೆ ಇರದ ಪರಿಣಾಮ ಆನೆ ಸೇರಿದಂತೆ ವಿವಿಧ ವನ್ಯಜೀವಿಗಳು ಶಾಲೆಯ ಆಸುಪಾಸಿನಲ್ಲಿಯೇ ಸಂಚರಿಸುತ್ತವೆ. ಇದರಿಂದಾಗಿ ವಿದ್ಯಾರ್ಥಿಗಳು ಭಯದಿಂದಲೇ ವಿದ್ಯಾಭ್ಯಾಸ ಪಡೆಯುವಂತಾಗಿದೆ. ಆದುದರಿಂದ ಸುತ್ತುಗೊಡೆ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಇನ್ನು ವಡಕೆಹಳ್ಳ ಗ್ರಾಮದ ಶಾಲೆಗೆ ಭೇಟಿ ನೀಡಿದ್ದ ವೇಳೆ ಶಿಥಿಲಗೊಂಡಿರುವ ಶಾಲೆಯ ಸುತ್ತುಗೋಡೆಯನ್ನು ಮರು ನಿರ್ಮಾಣ ಮಾಡುವಂತೆ ಹಾಗೂ ರಂಗಮಂದಿರವನ್ನು ಸ್ಥಳಾಂತರಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಸಚಿವರು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನೂ ನೀಡಿದ್ದರು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚನೆಯನ್ನೂ ನೀಡಿದ್ದರು. ಆದರೆ ಶಾಲಾ ವಾಸ್ತವ್ಯ ಹೂಡಿ ವರ್ಷ ಕಳೆದರೂ ಈ ಭರವಸೆಗಳು ಭರವಸೆಯಾಗಿಯೇ ಉಳಿದಿದೆ.

Advertisement

ಈಡೇರದ ಪುದೂರು ಗ್ರಾಮಸ್ಥರ ಪಟ್ಟಾ ಬೇಡಿಕೆ: ದಿ||ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಗೋಪಿನಾಥಂ ಜಲಾಶಯ ನಿರ್ಮಾಣ ವೇಳೆ ನಿರಾಶ್ರಿತರಿಗೆ 40 ಎಕರೆ ಜಮೀನನ್ನು ನೀಡಿದ್ದರು. ಆದರೆ ಅರಣ್ಯಾಧಿಕಾರಿಗಳು ಈ ಜಮೀನು ಇಲಾಖೆಗೆ ಸೇರಿದ್ದಾಗಿದೆ ಎನ್ನುತ್ತಿದ್ದಾರೆ. ಆದುದರಿಮದ ಕೂಡಲೇ ತಮಗೆ ಪಟ್ಟಾ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದ್ದರು. ಈ ವೇಳೆ ಸಚಿವರು ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಪಿಡಿಓ ಕಿರಣ್‍ಕುಮಾರ್ ಅವರಿಗೆ ಸೂಚನೆ ನೀಡಿದ್ದರು. ಆದರೆ ಈ ಸಮಸ್ಯೆ ಇನ್ನೂ ಕೂಡ ಬಗೆಹರಿಯದೆ ಸಮಸ್ಯೆಯಾಗಿಯೇ ಉಳಿದಿದೆ.

ಶಾಲಾ ವಾಸ್ತವ್ಯದ ವೇಳೆ ಸಚಿವರ ಗಮನಕ್ಕೆ ತಂದ ಸಮಸ್ಯೆಗಳು ಬಗೆ ಹರಿದಿರುವುದಕ್ಕಿಂತ ಸಮಸ್ಯೆಯಾಗಿಯೇ ಉಳಿದಿರುವುದು ಹೆಚ್ಚಾಗಿವೆ. ಈ ದಿಸೆಯಲ್ಲಿ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಟಿ ಬೀಸಿ ಕೂಡಲೇ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎನ್ನುವುದು ಸಾರ್ವಜನಿಕರ ಒಕ್ಕೊರಲ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next