2024 ಹಲವು ಕಾರಣಗಳಿಂದಾಗಿ ನೆನಪಿಸಿಕೊಳ್ಳಬೇಕಾಗಿದೆ. 2024ರಲ್ಲಿ ಪ್ರಮುಖ ಘಟನೆ ನಡೆದಿದ್ದು, ಅದರೊಂದಿಗೆ ದೇಶದ ರಾಜಕಾರಣ ಪ್ರಮುಖ ರಾಜಕೀಯ ಮುಖಂಡರನ್ನು ಕಳೆದುಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿ ವಿಧಿವಶರಾದ ಕೆಲವು ಪ್ರಮುಖ ರಾಜಕಾರಣಿಗಳ ವಿವರ ಇಲ್ಲಿದೆ..
ಕಾಂಗ್ರೆಸ್ ಮುಖಂಡ ಇವಿಕೆಎಸ್ ಇಳಂಗೋವನ್:
ತಮಿಳುನಾಡು ಕಾಂಗ್ರೆಸ್ ನ ಮಾಜಿ ಅಧ್ಯಕ್ಷ, ಹಿರಿಯ ಮುಖಂಡ ಇವಿಕೆಎಸ್ ಇಳಂಗೋವನ್ ಡಿಸೆಂಬರ್ 14ರಂದು ನಿಧನರಾಗಿದ್ದರು. ಶ್ವಾಸಕೋಶ ಸಂಬಂಧಿ ರೋಗದಿಂದ ಬಳಲುತ್ತಿದ್ದ ಇಳಂಗೋವನ್ ಅವರು ಎರಡು ವಾರಕ್ಕಿಂತಲೂ ಹೆಚ್ಚು ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಇಳಂಗೋವನ್ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ 2004ರಿಂದ 2009ರವರೆಗೆ ಕೇಂದ್ರ ಜವಳಿ ಖಾತೆ ಸಚಿವರಾಗಿದ್ದರು.
ಬಾಬಾ ಸಿದ್ದಿಖಿ:
ಬಾಬಾ ಸಿದ್ದಿಖಿ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಬಾರಿ ಶಾಸಕರಾಗಿದ್ದರು. ಆದರೆ ನಂತರ ಸಿದ್ದಿಖಿ ಅಜಿತ್ ಪವಾರ್ ಬಣದ ಎನ್ ಸಿಪಿಗೆ ಸೇರಿದ್ದರು. 2024ರ ಅಕ್ಟೋಬರ್ 12ರಂದು ಮುಂಬೈನಲ್ಲಿ ಸಿದ್ದಿಖಿ ಅವರನ್ನು ಗುಂಡಿಟ್ಟು ಹ*ತ್ಯೆಗೈಯಲಾಗಿತ್ತು. ನಟೋರಿಯಸ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಬಾಬಾ ಸಿದ್ದಿಖಿಯನ್ನು ಹ*ತ್ಯೆಗೈದಿರುವ ವಿಚಾರ ಬಹಿರಂಗವಾಗಿತ್ತು.
ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 12ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಸಿದ್ಧಿಖಿ ಹತ್ಯೆ ರಾಜಕೀಯ ಶೂನ್ಯತೆ ಆವರಿಸುವಂತೆ ಮಾಡಿದೆ.
ಸೀತಾರಾಮ್ ಯೆಚೂರಿ:
ಸಿಪಿಐಎಂ ಮುಖಂಡ ಸೀತಾರಾಮ್ ಯೆಚೂರಿ (72ವರ್ಷ) ಅವರು ಸೆಪ್ಟೆಂಬರ್ 12ರಂದು ನ್ಯೂಮೋನಿಯಾ ಮಾದರಿಯ ಎದೆಯ ಸೋಂಕಿನಿಂದ ಮೃ*ತಪಟ್ಟಿದ್ದರು. ಯೆಚೂರಿ ಅವರ ಆಶಯದಂತೆ ಅವರ ಮೃತದೇಹವನ್ನು ಏಮ್ಸ್ ಆಸ್ಪತ್ರೆಗೆ ದಾನವಾಗಿ ನೀಡಲಾಗಿತ್ತು. ಯೆಚೂರಿ ಅವರು ಪಶ್ಚಿಮಬಂಗಾಳದಿಂದ ರಾಜ್ಯಸಭಾ ಸಂಸದರಾಗಿದ್ದರು. 1992ರಿಂದ ಯೆಚೂರಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಎಂ)ದ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದರು. ಅಲ್ಲದೇ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು.
ಜಿಟ್ಟಾ ಬಾಲಕೃಷ್ಣ ರೆಡ್ಡಿ:
ಭಾರತ್ ರಾಷ್ಟ್ರೀಯ ಸಮಿತಿ (BRS) ಮುಖಂಡ, ಟಿಆರ್ ಎಸ್ ನ ಮಾಜಿ ಯುವ ಕಾರ್ಯಕರ್ತ ಬಾಲಕೃಷ್ಣ ರೆಡ್ಡಿ (52ವರ್ಷ) ಸೆಪ್ಟೆಂಬರ್ 6ರಂದು ನಿಧನರಾಗಿದ್ದರು. ತೆಲಂಗಾಣ ರಾಜ್ಯಕ್ಕೆ ನೀಡಿರುವ ಕೊಡುಗೆ ಮೂಲಕ ಜನಪ್ರಿಯರಾಗಿದ್ದರು. ರೆಡ್ಡಿ ನಿಧನ ಬಿಆರ್ ಎಸ್ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತ್ತು.
ನಟ್ವರ್ ಸಿಂಗ್:
ಯುಪಿಎ ಮೊದಲ ಅವಧಿಯ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದ ನಟ್ವರ್ ಸಿಂಗ್(95ವರ್ಷ) ಆಗಸ್ಟ್ 10ರಂದು ನಿಧನರಾಗಿದ್ದರು. ಐಎಫ್ ಎಸ್ ಅಧಿಕಾರಿಯಾಗಿದ್ದ ಸಿಂಗ್, ತಮ್ಮ ಹುದ್ದೆಗೆ ರಾಜೀನಾಮೆ ನೀಡಿ 1984ರಲ್ಲಿ ರಾಜಕೀಯ ಪ್ರವೇಶಿಸಿದ್ದರು. ಆಹಾರಕ್ಕಾಗಿ ತೈಲ ಹಗರಣದ ಪ್ರಕರಣದಲ್ಲಿ ಸಿಂಗ್ ಹೆಸರು ಕೇಳಿಬಂದ ನಂತರ ಅವರ ರಾಜಕೀಯ ಜೀವನ ಮಸುಕಾಗಿತ್ತು. 2006ರಲ್ಲಿ ಕಾಂಗ್ರೆಸ್ ಪಕ್ಷ ಸಿಂಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ನಂತರ 2008ರಲ್ಲಿ ಸಿಂಗ್ ಬಿಜೆಪಿ ಸೇರ್ಪಡೆಗೊಂಡಿದ್ದರು. ಆದರೆ ನಾಲ್ಕು ತಿಂಗಳಲ್ಲೇ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು.
ಸುಶೀಲ್ ಕುಮಾರ್ ಮೋದಿ:
ಬಿಹಾರ ರಾಜಕೀಯ ವಲಯದಲ್ಲಿ ಅತೀ ದೊಡ್ಡ ಹೆಸರು ಮಾಡಿದ್ದ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಅವರು ಮೇ 13ರಂದು ಕೊನೆಯುಸಿರೆಳೆದಿದ್ದರು. ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮೋದಿ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಬಿಹಾರ ಸರ್ಕಾರದಲ್ಲಿ ವಿತ್ತ ಸಚಿವರಾಗಿ, ವಿರೋಧ ಪಕ್ಷದ ನಾಯಕನಾಗಿ, ಎಂಎಲ್ ಸಿ ಹಾಗೂ ಸಂಸದರಾಗಿ ಅನುಭವ ಹೊಂದಿದ್ದರು. ಸುಶೀಲ್ ಕುಮಾರ್ ಮೋದಿ ಅವರು ಪಿಐಎಲ್ ನಿಂದಾಗಿ ಲಾಲೂ ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ದೋಷಿಯಾಗಲು ಪ್ರಮುಖ ಪಾತ್ರವಹಿಸಿತ್ತು.