Advertisement

ಅಮೆರಿಕದಲ್ಲಿ ಕ್ರಿಸ್‌ ಮಸ್‌, ಹೊಸ ವರ್ಷದ ಹುರುಪು-ಥ್ಯಾಂಕ್ಸ್‌ ಗಿವಿಂಗ್‌ ಟು ನ್ಯೂ ಇಯರ್‌

03:30 PM Dec 25, 2024 | Team Udayavani |

ವರ್ಷಾಂತ್ಯದ ಸಂಭ್ರಮ ಆರಂಭವಾಗುವುದೇ ನವೆಂಬರ್‌ ತಿಂಗಳಲ್ಲಿ. ಅದರಲ್ಲೂ ನವೆಂಬರ್‌ ತಿಂಗಳ ಕೊನೆಯ ವಾರದಲ್ಲಿ, ಕೊನೆಯ ಗುರುವಾರ ಮತ್ತು ಶುಕ್ರವಾರದಿಂದ. ಈ ವರ್ಷದ ವಿಷಯವನ್ನೇ ತೆಗೆದುಕೊಂಡರೆ, ಈ ತಾರೀಕುಗಳು ನ.26, 29. ನ.28ರಂದು ಥ್ಯಾಂಕ್ಸ್‌ ಗಿವಿಂಗ್‌ ಎಂಬ ಆಚರಣೆಯಾದರೆ, ನ.29 ಬ್ಲಾಕ್‌ ಫ್ರೈಡೆ ಎಂಬ ಆಚರಣೆ. ಈ ಆಚರಣೆಗಳ ಮಹತ್ವವನ್ನು ಕೊಂಚ ಆಳವಾಗಿ ನೋಡಬೇಕು ಎಂದರೆ ಹಲವು ವರ್ಷಗಳ ಹಿಂದಕ್ಕೆ ಹೋಗಬೇಕು.

Advertisement

ಹೇಗೆ ಭಾರತಾದ್ಯಂತ ಸಂಕ್ರಾಂತಿಯು ಪೈರು ತೆಗೆಯುವ ಸಮೃದ್ಧಿಯ ಸಂಕೇತವೋ ಅದರಂತೆಯೇ ಥ್ಯಾಂಕ್ಸ್‌ ಗಿವಿಂಗ್‌ ಎಂಬುದೂ ಫಸಲಿಗೆ ಸಂಬಂ ಧಿಸಿದ ಹಬ್ಬವಾಗಿದೆ. ಅಂದಿನ ಮಧ್ಯಾಹ್ನ-ಸಂಜೆಯೂಟವು ಒಂದು ಸಾಂಸಾರಿಕ ಕೂಟವೇ ಆಗಿರುತ್ತದೆ. ಮನೆಯ ಹಿರಿಯರು, ಅವರ ಮಕ್ಕಳು ಮತ್ತವರ ಸಂಸಾರ, ಸಮೀಪದ ಬಂಧು-ಬಳಗ, ನಗರದ ಅಥವಾ ಬೇರಾವುದೇ ನಗರದಲ್ಲಿ ಓದುತ್ತಿರುವ ಮಕ್ಕಳು ಹೀಗೆ ಎಲ್ಲರೂ ಒಟ್ಟಾಗಿ ಆಚರಿಸುವ ಒಂದು ವಿಶೇಷ ಹಬ್ಬ.

ಅಂದಿನ ಊಟವು ಸಾಕಷ್ಟು ಮಂದಿಯಿಂದ ಕೂಡಿದ್ದೇ ಆಗಿದ್ದು ಅಡುಗೆಯ ತಯಾರಿ, ಊಟದ ತಯಾರಿ, ಎಲ್ಲರೂ ಒಗ್ಗೂಡಿದಾಗ ಆಗುವ ಸಂಭ್ರಮ ಇತ್ಯಾದಿಗಳಿಂದಾಗಿ ಊಟದ ಕಾರ್ಯಕ್ರಮವು ಕೆಲವು ಗಂಟೆಗಳೇ ನಡೆಯುತ್ತದೆ. ಜತೆಗೆ ನಿತ್ಯಕ್ಕಿಂತ ಹೆಚ್ಚು ಸೇವನೆಯೂ ಆಗಿರುತ್ತದೆ.

ಥ್ಯಾಂಕ್ಸ್‌ ಗಿವಿಂಗ್‌ ಊಟದ ಅನಂತರ ವಿಶ್ರಾಂತಿ ಪಡೆದು, ಮರುದಿನ ಬೆಳಗ್ಗೆ ಅಂದರೆ ಹಗಲಿನ ಮೂರು ಅಥವಾ ನಾಲ್ಕು ಗಂಟೆಗೆ ಎದ್ದು ಶಾಪಿಂಗ್‌ ಹೊರಡುತ್ತಾರೆ. ಬ್ಲಾಕ್‌ ಫ್ರೈಡೆ ಎಂಬುದು ಶಾಪಿಂಗ್‌ ವಿಶೇಷ ದಿನ. ಅಂದು ಹೆಚ್ಚಿನ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ಹಾಗಂತ ಅಂಥಾ ಪದಾರ್ಥಗಳು ಹೇರಳ ಅಂತ ಅಲ್ಲ. ಉದಾಹರಣೆಗೆ ಒಂದು ಟಿವಿ ಎಂದುಕೊಳ್ಳೋಣ. ಅರ್ಧ ಬೆಲೆಗೆ ದೊರೆಯುವ ಈ ಟಿವಿಯು ಒಂದು ಅಂಗಡಿಯಲ್ಲಿ ಬಹುಶ: ಐದೋ ಹತ್ತೋ ಇರಬಹುದು. ಹೀಗಾಗಿ ಆ ಪದಾರ್ಥ ಬೇಕು ಅಂತ ಇರುವವರು ಎಷ್ಟು ಸಾಧ್ಯವೋ ಅಷ್ಟು ಬೇಗನೆದ್ದು ಅಂಗಡಿಯ ಮುಂದೆ ಸಾಲು ನಿಲ್ಲುತ್ತಾರೆ. ಕೆಲವು ಪದಾರ್ಥಗಳು ಅಂಗಡಿಯ ಬಾಗಿಲು ತೆರೆದೊಡನೆ ನುಗ್ಗಿ, ಕೊಳ್ಳುವುದು ಉಂಟು.

Advertisement

ಏನಿದು ಕಥೆ? ಅಂದೂ ಇಂದೂ ಕಾಲವು ಒಂದರ್ಥದಲ್ಲಿ ಒಂದೇ. ಅವರವರ ಕಷ್ಟ ಅವರವರಿಗೆ ಇದ್ದಿದ್ದೇ. ಬ್ಲಾಕ್‌ ಫ್ರೈಡೆಯಿಂದ ಮುಂದೆ ಒಂದು ತಿಂಗಳ ಆಸುಪಾಸಿನಲ್ಲೇ ಕ್ರಿಸ್ಮಸ್‌ ಹಬ್ಬದ ಆಚರಣೆ ಎಂಬುದು ನಿಮಗೂ ಗೊತ್ತು. ಬ್ಲಾಕ್‌ ಫ್ರೈಡೆ ದಿನದಂದು ಕಡಿಮೆ ಬೆಲೆಯಲ್ಲೇ ಉತ್ತಮವಾದ ವಸ್ತುಗಳನ್ನು ತೆಗೆದಿಟ್ಟುಕೊಂಡು ಕ್ರಿಸ್ಮಸ್‌ ದಿನದಂದು ಮನೆಯ ಮಂದಿಗೆ ಉಡುಗೊರೆ ನೀಡುವ ಒಂದು ಅಭ್ಯಾಸ ಅಥವಾ ಅನುಕೂಲ ಬಹಳ ಮುಂಚಿನಿಂದ ಬಂದಿದೆ.

ಒಂದು ತಿಂಗಳ ಮುಂಚೆ ತೆಗೆದಿಟ್ಟುಕೊಳ್ಳುವುದು ದೊಡ್ಡ ವಿಷಯವಲ್ಲ ಬದಲಿಗೆ ಕ್ರಿಸ್ಮಸ್‌ ದಿನದವರೆಗೂ ಅದನ್ನು ಮಕ್ಕಳ ಕಣ್ಣಿಗೆ ಅಥವಾ ಮನೆಯ ಇತರ ಸದಸ್ಯರ ಕಣ್ಣಿಗೆ ಬೀಳದಂತೆ ಕಾಪಾಡಿಕೊಳ್ಳುವುದೇ ದೊಡ್ಡ ವಿಷಯ. ಪ್ರತೀ ಬಾರಿಯ ಪಗಾರಕ್ಕೆ ಕಾಯುವ ಮಂದಿಗೆ ಯಾವ ದೇಶದಲ್ಲೂ ಕಡಿಮೆಯಿಲ್ಲ ಅಲ್ಲವೇ? ಸನ್ನಿವೇಶಗಳು, ಸಂದರ್ಭಗಳು, ಸವಾಲುಗಳು ಎಲ್ಲೆಲ್ಲಿಯೂ ಇದ್ದೇ ಇರುತ್ತದೆ. ಇಂಥಾ ಒಂದು ಸನ್ನಿವೇಶಕ್ಕೆಂದೇ ಹುಟ್ಟಿಕೊಂಡದ್ದು ಬ್ಲಾಕ್‌ ಫ್ರೈಡೆ.

ಹತ್ತು ವರ್ಷಕ್ಕೂ ಮುಂಚಿನ ವರೆಗೂ ಇಂಥದ್ದೇ ಆಚರಣೆಯಿತ್ತು. ಆಮೇಲೆ ವ್ಯಾಪಾರಸ್ಥರಲ್ಲಿ ಅದೇನೋ ಹಪಾಪಿತನ ಹೆಚ್ಚಾಯ್ತು. ಒಬ್ಬ ಮಳಿಗೆಯವನು ನಾಲ್ಕು ಗಂಟೆಗೆ ಅಂಗಡಿ ತೆರೆಯುತ್ತಾನೆ ಎಂದರೆ ಅದಕ್ಕೆ ಪೈಪೋಟಿ ನೀಡಲು ಮಗದೊಬ್ಬ ಮೂರು ಗಂಟೆಗೆ. ಮಗದೊಬ್ಬ ಮತ್ತೂ ಮುಂದೆ ಹೋಗಿ ಹನ್ನೆರಡು ಗಂಟೆಗೆ ಅಂತಾಯ್ತು. ಈ ಪೈಪೋಟಿ ಹೆಚ್ಚಿ ಮನ ರೋಸಿದ್ದು ಯಾವಾಗ ಎಂದರೆ ಥ್ಯಾಂಕ್ಸ್‌ ಗಿವಿಂಗ್‌ ಹಬ್ಬದ ಮಧ್ಯಾಹ್ನವೇ ಈ ವ್ಯವಹಾರಗಳ ಭರಾಟೆಗಳು ಶುರುವಾದಾಗ.

ಒಂದರ್ಥದಲ್ಲಿ ನಮ್ಮ ಮುಖ್ಯ ಹಬ್ಬಗಳಂದೇ ಕೆಲಸಕ್ಕೆ ರಜೆ ಇಲ್ಲದೇ, ರಜೆಯನ್ನೂ ನೀಡದೇ ಇದ್ದಾಗ ಹೇಗೆ ಮನ ರೋಸುವುದೋ ಹಾಗೆ. ಸ್ಥಳೀಯರು ಹಬ್ಬವನ್ನು ಆಚರಿಸುವಾಗ, ಹಬ್ಬ ಆಚರಣೆ ಇಲ್ಲದ ಇತರರು ಕಡಿಮೆ ಬೆಲೆಯ ಪದಾರ್ಥಗಳನ್ನು ಕೊಂಡು ಬೇರೆಯವರಿಗೆ ಇಲ್ಲದಂತೆ ಮಾಡಿದ್ದು. ಈಗ ಕ್ರಮೇಣ ಆ ದಿನಗಳಿಗೆ ಬರುತ್ತಿದೆ ಅಂತಲ್ಲ ಬದಲಿಗೆ ಇಡೀ ವಾರ ಅಥವಾ ಹಬ್ಬದ ಅನಂತರವೂ ಬ್ಲಾಕ್‌ ಫ್ರೈಡೆ ದಿನದ ಆಫರ್‌ ಕೊಡುತ್ತೇವೆ ಎಂಬುದು. ಒಂದರ್ಥದಲ್ಲಿ ಡಿಮ್ಯಾಂಡ್‌ ಇದೆ ಎನ್ನುತ್ತಾ ಸಪ್ಲೈ ಹೆಚ್ಚಳ.

ಇವಿಷ್ಟು ನವೆಂಬರ್‌ ಕಥೆಯಾದರೆ, ವರ್ಷಾಂತ್ಯದ ಸಂಭ್ರಮದ ಎರಡನೆಯ ಭಾಗವೇ ಡಿಸೆಂಬರ್‌. ಮೊದಲ ಹದಿನೈದು ದಿನಗಳು ಒಂದರ್ಥದಲ್ಲಿ ಮಾಮೂಲಿ ಎಂಬಂತೆ ಇರುತ್ತದೆ ದಿನನಿತ್ಯದ ಜೀವನ. ಆದರೆ ಪ್ರಮುಖವಾದ ಅಂಶ ಎಂದರೆ ಕ್ರಿಸ್ಮಸ್‌ ಬರುತ್ತಿದೆ, ರಜಾ ದಿನಗಳು ಬರುತ್ತಿದೆ ಎಂಬ ಹುರುಪು ಎಲ್ಲೆಲ್ಲೂ ಕಾಣುತ್ತದೆ. ಯಾವುದೇ ಮಳಿಗೆಗೆ ಹೋದರೂ ಅಲ್ಲೊಂದು ಸಂಭ್ರಮ. ನವಿರಾದ ಸಂಗೀತ, ಹಬ್ಬದ ವಾತಾವರಣದ ಅಲಂಕಾರಗಳು, ಆಕರ್ಷಣೆಗಳು ಕಾಣುತ್ತವೆ. ಮನೆಮನೆಗಳೂ ದೀಪಾಲಂಕಾರದಿಂದ ಶೋಭಿತವಾಗಿರುತ್ತದೆ.

ದೀಪಾಲಂಕಾರದಿಂದ ಕಂಗೊಳಿಸುವ ಆಟಿಕೆಗಳು ಮನೆಯ ಮುಂದಿನ ಹಸುರು ಹಾಸನ್ನು ಅಲಂಕರಿಸುತ್ತದೆ. ಪ್ರತೀ ವರ್ಷವೂ ಕ್ರಿಸ್ಮಸ್‌ ದಿನದಂದು ಸ್ನೋ ಬೀಳಲಿ ಎಂಬ ಆಶಯ ಹೊರುವುದು ಸಾಮಾನ್ಯ. ಅದರಂತೆ ಎಲ್ಲೆಡೆಯ ಸಾಮಾನ್ಯ ಗೀತೆಯೇ ”let it snow’ ಎಂಬುದು. ಮಂಜು ಬಿದ್ದಾಗ ಉಂಟಾಗುವ ಆ ಬೆಳಕಿನ ಜತೆ ದೀಪಾಲಂಕಾರವು ಬಹಳ ಸೊಗಸಾಗಿ ಕಾಣುತ್ತದೆ.

ಡಿಸೆಂಬರ್‌ 15ರ ಅನಂತರ ರಜಾ ದಿನಗಳ ಸಂಭ್ರಮ ಹೆಚ್ಚುತ್ತದೆ. ಕಚೇರಿಗಳಲ್ಲಿ ದಿನದಿನಕ್ಕೆ ಜನರು ಕಡಿಮೆಯಾಗುತ್ತಾ ಸಾಗುತ್ತಾರೆ. ವರ್ಷಾರಂಭದಿಂದ ರಜೆಯನ್ನು ಉಳಿಸಿಕೊಳ್ಳುತ್ತಾ ಬಂದವರಿಗೆ ಇದ್ದಕ್ಕಿದ್ದ ಹಾಗೆ ಉಳಿದುಕೊಂಡಿರುವ ರಜೆಯ ಬಗ್ಗೆ ಅರಿವು ಉಂಟಾಗುತ್ತದೆ. ಉಳಿದ ರಜೆಯನ್ನು ಉಪಯೋಗಿಸದಿದ್ದರೆ ಅವನ್ನು ಮುಂದಿನ ವರ್ಷಕ್ಕೆ ಸೇರಿಸಲಾಗದು ಎಂಬ ನೀತಿ ಹೆಚ್ಚಿನ ಕಚೇರಿಯಲ್ಲಿರುವುದರಿಂದ, ರಜೆಯನ್ನು ತೆಗೆದುಕೊಳ್ಳುವವರು ಹೆಚ್ಚು. ರಜೆಯು ಖರ್ಚಾಗಿ ಬೇರೆ ದಾರಿಯಿಲ್ಲದವರ ಮೇಲೆ ಕೊಂಚ ಹೆಚ್ಚು ಕೆಲಸ ಬೀಳುವುದು ಸರ್ವೇ ಸಾಮಾನ್ಯ. ಆದರೆ ಡಿಸೆಂಬರ್‌ ತಿಂಗಳ ಕೊನೆಯಲ್ಲಿ ಸಾಮಾನ್ಯವಾಗಿ ಕೆಲಸ ಕಡಿಮೆ ಇದ್ದೇ ಇರುತ್ತದೆ.

ಕ್ರಿಸ್ಮಸ್‌ ಹಬ್ಬವು ಹತ್ತಿರವಾಗುತ್ತಿದ್ದಂತೆ ದೀಪಾಲಂಕಾರಗಳ ವೀಕ್ಷಣೆ ಎಂಬ ವಾರ್ಷಿಕ ಚಟುವಟಿಕೆ ಶುರುವಾಗುತ್ತದೆ. ಸಂಜೆ/ರಾತ್ರಿಗಳಲ್ಲಿ ತಮ್ಮತಮ್ಮ ಕಾರಿನಲ್ಲಿ ಕ್ರಿಸ್ಮಸ್‌ ಲೈಟ್‌ಗಳನ್ನು ನೋಡಲು ಹೋಗುವುದು ಸಾಮಾನ್ಯ ನೋಟ. ಕೆಲವೊಮ್ಮೆ ಬೇರೆ ನಗರಗಳಿಂದ ನಮ್ಮ ನಗರಕ್ಕೆ ಬಸ್‌ ಮಾಡಿಕೊಂಡು ಬಂದಿರುವುದನ್ನೂ ನೋಡಿದ್ದೇನೆ. ಸ್ಥಳೀಯರು ಉದ್ದನೆಯ ಲಿಮೋ ಕಾರನ್ನು ಗಂಟೆಗಳ ವರೆಗೆ ಬಾಡಿಗೆ ಮಾಡಿಕೊಂಡು ಕ್ರಿಸ್ಮಸ್‌ ದೀಪಾಲಂಕಾರಗಳನ್ನು ನೋಡಲು ಹೋಗುವುದೂ ಸಂಪ್ರದಾಯ ಎನ್ನಬಹುದು.

ನಮ್ಮ ನಗರದಲ್ಲಿ ಕಳೆದ 50 ವರ್ಷಗಳಿಂದ ಅತ್ಯಂತ ಸೊಗಸಾಗಿ ಲಕ್ಷಕ್ಕೂ ಹೆಚ್ಚು ದೀಪಗಳನ್ನು ಜೋಡಿಸಿ ನಗರದ ಜನತೆಗೆ ಮತ್ತು ಸುತ್ತಮುತ್ತಲ ನಗರದ ಜನರಲ್ಲೂ ಸಂತೋಷ ಹಂಚುತ್ತಿರುವ Phifer (ಫೈಫರ್‌) ಸಂಸಾರವು ಶ್ಲಾಘನೀಯರು ಮತ್ತು ವಂದನೀಯರು. ನಗರದ ಟಿವಿ ಚಾನಲ್‌ನವರು “ಕ್ರಿಸ್ಮಸ್‌ ಲೈಟ್‌ ಫೈಟ್‌’ ಎಂಬ ಸ್ಪರ್ಧೆಯನ್ನೂ ಆಯೋಜಿಸಿ, ಅತ್ಯಂತ ಸೊಗಸಾಗಿ ಅಲಂಕಾರ ಮಾಡಿರುವವರನ್ನು ಗುರುತಿಸಿ ಬಹುಮಾನವನ್ನೂ ನೀಡುತ್ತಾರೆ. ಸ್ಥಳೀಯ Lewis Ginter botanical gardenನಲ್ಲಿ ಕ್ರಿಸ್ಮಸ್‌ ವೇಳೆಯಲ್ಲಿ ಬಲು ಸೊಗಸಾಗಿ ಅಲಂಕಾರ ಮಾಡಿರುತ್ತಾರೆ ಜತೆಗೆ ಅವನ್ನು ಡ್ರೈವ್‌-ಇನ್‌ ಮಾದರಿಯಲ್ಲಿ ವೀಕ್ಷಿಸಲು ಅವಕಾಶವಿರುತ್ತದೆ. ಕಾಲಿಡಲು ಜಾಗವಿರುವುದಿಲ್ಲ ಎನ್ನುವ ಬದಲಿಗೆ ಟೈರ್‌ ಇಡಲು ಜಾಗ ಇರೋದಿಲ್ಲ ಎನ್ನಬಹುದು.

ಕ್ರಿಸ್ಮಸ್‌ ಮುಗೀತು ಎನ್ನುವಾಗ ಹೊಸ ವರ್ಷದ ಸ್ವಾಗತಕ್ಕೆ ತಯಾರಿ. ಅಲ್ಲಿಯ ವರೆಗೆ ಪ್ರಯಾಣ ಮಾಡದೆ ಇದ್ದವರು ಆ ಕೊನೆಯವಾರ ರಜೆಯ ಪ್ರಯೋಜನ ಪಡೆಯುತ್ತಾರೆ. ಹೊಸ ವರ್ಷ ಬಂದು ಬಿಡುತ್ತದೆ, ಎಲ್ಲೆಡೆ ಹೊಸತನದ ಅಲೆ ಏಳುತ್ತದೆ, ನಮ್ಮೆಲ್ಲ ತೊಂದರೆಗಳೂ ಪರಿಹಾರವಾಗಿ ಬಿಡುತ್ತದೆ ಎಂಬುದೇ ಜಗತ್ತಿನಾದ್ಯಂತ ಇರುವ ಒಂದು ಭ್ರಮೆ ಎಂಬುದು ನನ್ನ ಅನಿಸಿಕೆ. ಆಶಯ ಇಟ್ಟುಕೊಳ್ಳುವುದು ತಪ್ಪೇನಲ್ಲ ಬದಲಿಗೆ ಆ ಆಶಯವನ್ನು ಪೂರೈಸಿಕೊಳ್ಳುವತ್ತ ನಾವೂ ಕೊಂಚ ದುಡಿಯಬೇಕಿದೆ.

ಕ್ರಿಸ್ಮಸ್‌ ಮುಗೀತು, ಹೊಸವರ್ಷವೂ ಬಂತು, ಜನವರಿ ತಿಂಗಳ ಮೊದಲ ವಾರವೂ ಕಾಲಿಟ್ಟಿತು ಎಂದಾಗ ಕ್ರಮೇಣ ಹಬ್ಬದ ಸಡಗರ ಇಳಿಯುತ್ತದೆ. ಏರಿದ್ದೆಲ್ಲ ಇಳಿಯಲೇಬೇಕು ಎಂಬ ನೀತಿ ಇಲ್ಲಿಯೂ ಸಲ್ಲುತ್ತದೆ. ಜನವರಿ ತಿಂಗಳ ಮೊದಲ ವಾರ ಅಥವಾ ಮೊದಲ ಹತ್ತು ದಿನಗಳು ಮುಗಿವ ಹೊತ್ತಿಗೆ ದೀಪಾಲಂಕಾರಗಳು ಮತ್ತೆ ಡಬ್ಬ ಸೇರಲೇಬೇಕು ಎಂಬುದು ನಿಯಮ ಕೂಡ. ಯಾವುದೇ ಕಮ್ಯುನಿಟಿಯ ಆಡಳಿತ ವರ್ಗವೂ ಕಟ್ಟುನಿಟ್ಟಿನಿಂದ ಪಾಲಿಸುವ ಒಂದಂಶವಿದು.

ಹೆಚ್ಚಿನ ವೇಳೆ ನವೆಂಬರ್‌ ಕೊನೆಯಿಂದ ವರ್ಷದ ಕೊನೆಯ ವರೆಗೂ ಸಾಕಷ್ಟು ಆಹಾರ ಅದರಲ್ಲೂ ಸಿಹಿ ಖಾದ್ಯಗಳನ್ನು ಉಂಡು ತೇಗಿ ತೂಕ ಹೆಚ್ಚಿಸಿಕೊಂಡವರು ಜನವರಿ ಹುಟ್ಟುತ್ತಿದ್ದಂತೆ ಜಿಮ್‌ ಕಡೆ ಧಾವಿಸುತ್ತಾರೆ. ಜನವರಿ ತಿಂಗಳೊಂದರಲ್ಲೇ ಜಿಮ್‌ ಮೆಂಬರ್‌ ಶಿಪ್‌ ಏರಿಕೆಯಾಗುತ್ತದೆ. ಒಂದೆರಡು ತಿಂಗಳಲ್ಲಿ ಕಡಿಮೆಯೂ ಆಗುತ್ತದೆ. ಇದು ವರ್ಷಾರಂಭದ ರೆಸೊಲ್ಯೂಶನ್‌ ಎಂಬ ಆರಂಭ ಶೂರತ್ವದ ಸಂಕೇತ. ಬರಲಿರುವ ಹೊಸ ವರ್ಷವು ಹೊಸತನದ ಅಲೆಯನ್ನೇ ಹೊತ್ತು ತರಲಿ, ಎಲ್ಲೆಡೆ ನೋವುಗಳು ಕಡಿಮೆಯಾಗಲಿ, ನಲಿವು ಹೆಚ್ಚಲಿ ಎಂದೇ ಆಶಿಸುವ.

Advertisement

Udayavani is now on Telegram. Click here to join our channel and stay updated with the latest news.

Next