Advertisement

ನರ್ಮ್ ಗೆ ವರುಷ : ಉಡುಪಿ ಜನತೆಗೆ ಹರುಷ

07:15 AM Sep 07, 2017 | |

ಉಡುಪಿ : ನಗರ ಹಾಗೂ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಜೆ- ನರ್ಮ್ ಬಸ್‌ ಸಂಚಾರಕ್ಕೆ ಸೆ. 7 ಕ್ಕೆ ಒಂದು ವರ್ಷ ತುಂಬುತ್ತಿದೆ. ಖಾಸಗಿ ಬಸ್‌ ಮಾಲಕರ ಭಾರೀ ಒತ್ತಡದ ಮಧ್ಯೆಯೂ ನರ್ಮ್ ಬಸ್‌ಗಳು ಜಿಲ್ಲೆಯಾದ್ಯಂತ ಸಂಚರಿಸು ತ್ತಿದ್ದು, ಜನಮೆಚ್ಚುಗೆ ಗಳಿಸುತ್ತಿದೆ. 

Advertisement

2016 ರ ಸೆ. 7 ರಂದು ಉಡುಪಿಯ ಬೀಡಿನಗುಡ್ಡೆಯ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕಾಲೇಜುಗಳ ಸುಮಾರು 3,000 ಕ್ಕೂ ಅಧಿಕ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ  12 ನರ್ಮ್ ಬಸ್‌ಗಳು ಸಂಚಾರ ಆರಂಭಿಸಿದ್ದವು. ಸದ್ಯ ನರ್ಮ್ ಬಸ್‌, ಉಡುಪಿ- ಶಿವಮೊಗ್ಗ, ಉಡುಪಿ- ಕಾರ್ಕಳ ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಉಡುಪಿಯಿಂದ 48 ಬಸ್‌ಗಳು ಹಾಗೂ ಕುಂದಾಪುರದಲ್ಲಿ 6 ಬಸ್‌ ಹೀಗೆ ಒಟ್ಟು ಈಗ 54 ಬಸ್‌ಗಳು ಸಂಚರಿಸುತ್ತಿವೆ.

ಆರಂಭದ ಹಂತದಲ್ಲಿ ಮಣಿಪಾಲ-  ಉಡುಪಿ- ಮಲ್ಪೆ- ಹೂಡೆ ಮಾರ್ಗವಾಗಿ 2 ಬಸ್‌, ಉಡುಪಿ- ಸಂತೆಕಟ್ಟೆ- ಕೆಮ್ಮಣ್ಣು- ಹೂಡೆ ಮಾರ್ಗದಲ್ಲಿ 1 ಬಸ್‌, ಪರ್ಕಳ- ಉಡುಪಿ- ಉದ್ಯಾವರ- ಪಿತ್ರೋಡಿ ಮಾರ್ಗದಲ್ಲಿ 1 ಬಸ್‌, ಉಡುಪಿ- ನಿಟ್ಟೂರು- ಸಂತೆಕಟ್ಟೆ- ಕೆಮ್ಮಣ್ಣು- ಹೂಡೆ ಮಾರ್ಗವಾಗಿ 1 ಬಸ್‌ ಹೀಗೆ 5 ಬಸ್‌, ಆ ಬಳಿಕ 7 ಬಸ್‌ ಒಟ್ಟು 12 ಬಸ್‌ಗಳ ಸಂಚಾರ ಆರಂಭಗೊಂಡಿತು. 

ಕೋರ್ಟ್‌ನಿಂದ ತಡೆ
1997 ಹಾಗೂ 2007ರ ಕಾಯ್ದೆ ಪ್ರಕಾರ ಎಲ್ಲ ಸರಕಾರಿ ಹಾಗೂ ಖಾಸಗಿ ಬಸ್‌ಗಳಿಗೆ ಒಂದೇ ರೀತಿಯ ಸಮಯದ ಅಂತರವನ್ನು ನಿಗದಿ ಮಾಡಬೇಕು ಎನ್ನುವ ಕಾನೂನಿನ್ವಯ ಉಡುಪಿ ನಗರದಿಂದ ಸಂಚರಿಸುವ 55 ಕೆಎಸ್ಸಾರ್ಟಿಸಿ ಬಸ್‌ಗಳ ಪರವಾನಿಗೆ ರದ್ದು ಮಾಡಿ ರಾಜ್ಯ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಆ ಬಳಿಕ ಡಿಸಿ ಅವರ ಆದೇಶದಂತೆ, ಆರ್‌ಟಿಒ ಅವರು 8 ಬಸ್‌ ಹೊರತುಪಡಿಸಿ ಉಳಿದ ಎಲ್ಲ ಬಸ್‌ಗಳಿಗೆ ಹೊಸದಾಗಿ ತಾತ್ಕಾಲಿಕ ಪರವಾನಿಗೆ ನೀಡಿದ್ದರು. 

ಬೇಕಿದೆ 25- 30 ಬಸ್‌
ಉಡುಪಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ಯಶ್ವಸಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆಗಳಿಂದ ನರ್ಮ್ ಬಸ್‌ಗಳು ಬೇಕಾಗಿವೆ ಎಂದು ಬೇಡಿಕೆಗಳು ಕೂಡ ಬಂದಿವೆ. ಜಿಲ್ಲೆಯ ಎಲ್ಲ ಭಾಗಗಳಲ್ಲಿ ಸರಕಾರಿ ಬಸ್‌ ಸೇವೆ ಒದಗಿಸಬೇಕಾದರೆ ಇನ್ನೂ ಸುಮಾರು 25 ರಿಂದ 30 ಬಸ್‌ಗಳು ಬೇಕಾಗಿವೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
 
ಪ್ರಯಾಣಿಕ ಸ್ನೇಹಿ

ಈ ನರ್ಮ್ ಬಸ್‌ಗಳು ಪ್ರಯಾಣಿಕ ಸ್ನೇಹಿ ಬಸ್‌ಗಳಾಗಿದ್ದು, ಹಿರಿಯ ನಾಗರೀಕರು, ಮಹಿಳೆಯರು, ಮಕ್ಕಳಿಗೆ ಬಸ್‌ ಹತ್ತಲು ಮತ್ತು ಇಳಿಯಲು ಅನುಕೂಲವಿದೆ. ಈ ಬಸ್‌ಗಳು ಅತ್ಯಾಧುನಿಕ ವಿನ್ಯಾಸಗಳಿಂದ ಕೂಡಿದ್ದು, ಲೋ ಫ್ಲೋರ್‌ ಮೆಟ್ಟಿಲು, ಬಸ್‌ ಒಳಗಡೆ  ಸಿ.ಸಿ. ಕ್ಯಾಮೆರಾ, ಸ್ವಯಂಚಾಲಿತ ಬಾಗಿಲಿದೆ. ಪ್ರಥಮ ಹಂತದಲ್ಲಿ ಕಾರ್ಯಾಚರಿಸಿದ ನಗರ ಸಾರಿಗೆ ಬಸ್‌ ಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ.

Advertisement

1,345 ವಿದ್ಯಾರ್ಥಿ ಪಾಸ್‌
ನರ್ಮ್ ಬಸ್‌ಗಳಲ್ಲಿ ಹಿರಿಯ ನಾಗರೀಕರಿಗೆ (60 ವರ್ಷ ಮೇಲ್ಪಟ್ಟು) ಶೇ. 25 ರಿಯಾಯಿತಿ, 1 ರಿಂದ 7 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ, ಪ್ರಸ್ತುತ 1,345 ವಿದ್ಯಾರ್ಥಿ ಪಾಸ್‌, ಅದರಲ್ಲಿ ಎಸ್‌ಸಿ ಹಾಗೂ ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ ಕ್ರಮವಾಗಿ 93 ಮತ್ತು 142 ಉಚಿತ ಪಾಸ್‌ ವಿತರಿಸಲಾಗಿದೆ. ಅದಲ್ಲದೇ ಈ ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ದರ ಸ್ಪರ್ಧಾತ್ಮಕವಾಗಿದ್ದು, ಖಾಸಗಿ ಬಸ್‌ಗಳ ದರಕ್ಕಿಂತ ಕಡಿಮೆಯಾಗಿದೆ.

ಉತ್ತಮ ಸ್ಪಂದನೆ
ಸಾಮಾಜಿಕ ಬದ್ಧತೆಯಿಂದ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆಯನ್ನು ನೀಡುತ್ತಾ ಸುಸೂತ್ರವಾಗಿ ಕಾರ್ಯಾಚರಿಸುತ್ತಿರುವ ನರ್ಮ್ಗೆ ಕೋರ್ಟ್‌ ತಡೆಯಾಜ್ಞೆಯಿದ್ದರೂ, ಜಿಲ್ಲಾಡಳಿತದಿಂದ ನೆರವಿನಿಂದ ಬಸ್‌ ಸಂಚಾರ ಅಬಾಧಿತವಾಗಿದೆ. ದಿನಕ್ಕೆ ಸುಮಾರು 2,500 ರೂ. ಯಿಂದ 3,000 ರೂ. ವರೆಗೆ ಆದಾಯ ಬರುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದು ಪ್ರಾರಂಭಿಕ ಹಂತವಾಗಿದ್ದು, ಸಿಟಿ ಬಸ್‌ ನಿಲ್ದಾಣ ನಿರ್ಮಾಣವಾದಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎನ್ನುವುದು ಕೆಎಸ್ಸಾರ್ಟಿಸಿ ಅಧಿಕಾರಿಗಳ ಅಭಿಪ್ರಾಯ. 

“ಖಾಸಗಿ- ಸರಕಾರಿ ಎರಡೂ ಬೇಕು’
ಖಾಸಗಿಯವರ ಭಾರೀ ಪ್ರತಿರೋಧದ ನಡುವೆಯೂ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರ ಹಿತದೃಷ್ಠಿಯಿಂದ ನರ್ಮ್ ಬಸ್‌ಗಳನ್ನು ಉಡುಪಿ ಜಿಲ್ಲೆಯಲ್ಲಿ ಆರಂಭಿಸಿದ್ದೇವೆ. ಬಸ್‌ ಆರಂಭಿಸುವ ಮುನ್ನ ಹಾಗೂ ಬಂದ ಬಳಿಕವೂ ಖಾಸಗಿ ಲಾಬಿ ಜೋರಾಗಿಯೇ ಇತ್ತು. ನಮ್ಮ ಜಿಲ್ಲೆಗೆ ಖಾಸಗಿ ಬಸ್‌ಗಳು ಬೇಕು ಅದರ ಜತೆಗೆ ಸರಕಾರಿ ಬಸ್‌ಗಳು ಬೇಕು. ಪೈಪೋಟಿ ಬೇಡ. ಆರೋಗ್ಯಕರ ವಾತಾವರಣವಿರಲಿ. ಬಸ್‌ ಪರವಾನಿಗೆ ಕೋರ್ಟ್‌ ಹಂತದಲ್ಲಿದ್ದು, ಅದು ಇತ್ಯರ್ಥಗೊಂಡ ತತ್‌ಕ್ಷಣ ಇನ್ನಷ್ಟು ಬಸ್‌ಗಳನ್ನು ತರಲಾಗವುದು.

– ಪ್ರಮೋದ್‌ ಮಧ್ವರಾಜ್‌, ಜಿಲ್ಲಾ ಉಸ್ತುವಾರಿ ಸಚಿವ 

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next