ಸರಿಯಾಗಿ ಒಂದು ವರ್ಷದ ಹಿಂದೆ ಮಧ್ಯರಾತ್ರಿ “ಒಂದು ದೇಶ ಒಂದು ತೆರಿಗೆ’ ಎಂಬ ಧ್ಯೇಯದೊಂದಿಗೆ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜಗತ್ತಿನ ಅತಿ ದೊಡ್ಡ ತೆರಿಗೆ ಸುಧಾರಣೆ ಕ್ರಮ ಎಂಬ ಹಿರಿಮೆಗೆ ಪಾತ್ರವಾಗಿದೆ. ದೇಶದ ಆರ್ಥಿಕ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾಗುವಂತಹ ನಿರ್ಧಾರ. ಕಳೆದೊಂದು ವರ್ಷದಲ್ಲಿ ಇಡೀ ಆಡಳಿತ ಯಂತ್ರ ಮತ್ತು ಕಾರ್ಯಾಂಗ ಜಿಎಸ್‌ಟಿ ಅನುಷ್ಠಾನವನ್ನು ಯಶಸ್ಸುಗೊಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದು ಅದರ ಫಲವಾಗಿ ಇಂದು ದೇಶದ ಆರ್ಥಿಕತೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
ಯಾವುದೇ ಬೃಹತ್ ಸುಧಾರಣೆಗಳನ್ನು ತರುವಾಗ ಒಂದಿಷ್ಟು ಸಮಸ್ಯೆಗಳಾಗುವುದು, ಹಿನ್ನಡೆಯಾಗುವುದು ಮತ್ತು ಜನಸಾಮಾನ್ಯರು ತೊಂದರೆಗೀಡಾಗುವುದು ಸಹಜ ಬೆಳವಣಿಗೆ. ಜಿಎಸ್‌ಟಿ ವಿಚಾರದಲ್ಲೂ ಆರಂಭದಲ್ಲಿ ಇವೆಲ್ಲ ಎದುರಾಗಿತ್ತು. ಒಂದು ಹಂತದಲ್ಲಿ ಆರ್ಥಿಕತೆಗೆ ಭಾರೀ ಹಿನ್ನಡೆಯೂ ಉಂಟಾಗಿತ್ತು. ಈ ಸಂದರ್ಭದಲ್ಲಿ ಜಿಎಸ್‌ಟಿಯನ್ನು ವಿರೋಧಿಸಿದವರೆಲ್ಲ ನಾವು ಹೇಳಿದ ಭವಿಷ್ಯ ನಿಜವಾಯಿತು ಎಂದು ಬೀಗಿದ್ದೂ ಇದೆ. ಆದರೆ ಕ್ರಮೇಣ ಜಿಎಸ್‌ಟಿ ತನ್ನ ಪರಿಣಾಮವನ್ನು ತೋರಿಸಲಾರಂಭಿಸಿತು. ತೆರಿಗೆ ಸಂಗ್ರಹ ಹೆಚ್ಚಳವಾಗಿದ್ದು ಮಾತ್ರವಲ್ಲದೆ ದೇಶದಲ್ಲಿ ವಿತ್ತೀಯ ಶಿಸ್ತು ಕಾಣಿಸಿಕೊಂಡಿದೆ. ತೆರಿಗೆ ಕಳ್ಳತನ ಮತ್ತು ತೆರಿಗೆ ವಂಚನೆಯನ್ನು ತಡೆಗಟ್ಟುವಲ್ಲಿ ಜಿಎಸ್‌ಟಿ ತಕ್ಕಮಟ್ಟಿಗೆ ಸಫಲವಾಗಿದೆ. ಜಿಎಸ್‌ಟಿ ಅನುಷ್ಠಾನಕ್ಕೆ ಬಂದ ಮೊದಲ ಎಂಟು ತಿಂಗಳಲ್ಲಿ 7.41 ಲಕ್ಷ ಕೋ. ರೂ. ತೆರಿಗೆ ಸಂಗ್ರಹವಾಗಿತ್ತು. ಇದೇ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾದರೆ ವಾರ್ಷಿಕ ಸಂಗ್ರಹ 11.11 ಲಕ್ಷ ಕೋ. ರೂ. ದಾಟಬಹುದು ಎಂದು ಲೆಕ್ಕಹಾಕಲಾಗಿದೆ. ಮಾಸಿಕ ಸರಾಸರಿ 92,581 ಕೋ. ರೂ. ತೆರಿಗೆ ಸಂಗ್ರಹವಾಗುತ್ತಿರುವುದು ದೇಶದ ಆರ್ಥಿಕ ಇತಿಹಾದಲ್ಲಿ ಇದೇ ಮೊದಲು ಎನ್ನುವುದು ಜಿಎಸ್‌ಟಿಯ ಯಶೋಗಾಥೆಯನ್ನು ತಿಳಿಸುತ್ತದೆ.
37 ಭಿನ್ನ ತೆರಿಗೆ ಮಂಡಳಿಗಳು, 16 ಭಿನ್ನ ತೆರಿಗೆಗಳು ಮತ್ತು 15 ಭಿನ್ನ ಸೆಸ್ ಮತ್ತು ಮೇಲೆ¤ರಿಗೆಗಳನ್ನು ಒಗ್ಗೂಡಿಸಿ ಏಕರೂಪದ ಪರೋಕ್ಷ ತೆರಿಗೆ ಸಂಹಿತೆಯನ್ನು ರೂಪಿಸುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿ ಸಂವಿಧಾನ ತಿದ್ದಪಡಿ ಮಾಡಿದ್ದು ಮೊದಲ ಮೈಲುಗಲ್ಲಾಗಿತ್ತು. ಕರಡು ಕಾನೂನು ರಚನೆ ಮತ್ತು ನಿಯಮಗಳ ರೂಪಣೆ ಸರಕಾರ ಎದುರಿಸಿದ ಎರಡನೇ ದೊಡ್ಡ ಸವಾಲು. ಎಲ್ಲ ರಾಜ್ಯಗಳನ್ನು ಒಂದೇ ಸೂತ್ರದಡಿ ತರಲು ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಮತ್ತು ಜಾಲವನ್ನು ರಚಿಸುವುದು ಮೂರನೇ ಸವಾಲಾಗಿತ್ತು. ಈ ಎಲ್ಲ ಸವಾಲುಗಳನ್ನು ಎದುರಿಸುವಲ್ಲಿ ಸರಕಾರ ತೋರಿಸಿದ ಜಾಣ್ಮೆ ಮತ್ತು ಸಂಯಮ ಗಮನಾರ್ಹವಾದದ್ದು. ಈ ನಿಟ್ಟಿನಲ್ಲಿ ಜಿಎಸ್‌ಟಿ ಕೌನ್ಸಿಲ್ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿನಿಯಮಗಳನ್ನು ರಚಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಘನತೆಯನ್ನೂ ಎತ್ತಿ ಹಿಡಿದಿದೆ.
ಯಾವುದೇ ಹೊಸ ಸುಧಾರಣೆಯಿಂದ ಜನಸಾಮಾನ್ಯರ ಬದುಕಿನಲ್ಲಿ ಧನಾತ್ಮಕವಾದ ಯಾವ ಬದಲಾವಣೆಗಳಾಗಿವೆ ಎನ್ನುವುದು ಅದರ ಯಶಸ್ಸಿನ ಮಾನದಂಡವಾಗುತ್ತದೆ. ಮಾರುಕಟ್ಟೆಯಲ್ಲಿ ಅಗತ್ಯ ದಿನಸಿಯೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿದ್ದು, ಇದರ ಪರಿಣಾಮವಾಗಿ ಹಣದುಬ್ಬರವೂ ನಿಯಂತ್ರಣಕ್ಕೆ ಬಂದಿದೆ. ಇದು ಜಿಎಸ್‌ಟಿಯ ಬಲುದೊಡ್ಡ ಸಾಧನೆಯೆಂದೇ ಹೇಳಬಹುದು.
ಆರಂಭಿಕ ಎಡರುತೊಡರುಗಳನ್ನು ನಿವಾರಿಸಿಕೊಂಡು ಜಿಎಸ್‌ಟಿ ಈಗ ಎರಡನೇ ವರ್ಷಕ್ಕೆ ಕಾಲಿರಿಸಿದೆ. ಜಿಎಸ್‌ಟಿ ಕೌನ್ಸಿಲ್ ಮತ್ತು ಸರಕಾರ ಈ ಸುಧಾರಣೆಯನ್ನು ಮುಂದುವರಿಸಿಕೊಂಡು ಹೋಗಲು ತೆರಿಗೆ ಸಲ್ಲಿಕೆ ಪದ್ಧತಿಯನ್ನು ಇನ್ನಷ್ಟು ಸರಳಗೊಳಿಸುವ ಅಗತ್ಯವಿದೆ. ಸರಳೀಕೃತ ಮತ್ತು ಪಾರದರ್ಶಕ ಜಿಎಸ್‌ಟಿ ವ್ಯಾಪಾರಿಗಳಿಗೆ, ಕೈಗಾರಿಕೆಗಳಿಗೆ ಮಾತ್ರವಲ್ಲದೆ ಜನಸಾಮಾನ್ಯರಿಗೂ ಪ್ರಯೋಜನಕಾರಿ. ಅದೇ ರೀತಿ ಜಿಎಸ್‌ಟಿ ದರಗಳಲ್ಲೂ ಇನ್ನಷ್ಟು ಸುಧಾರಣೆಗಳಾಗುವ ಅಗತ್ಯವಿದೆ. ಪ್ರಸ್ತುತ ಇರುವ ನಾಲ್ಕು ದರಗಳನ್ನು ಅಂತರಾಷ್ಟ್ರೀಯ ಮಾನದಂಡಕ್ಕನುಗುಣವಾಗಿ ಮೂರಕ್ಕಿಳಿಸಿಕೊಳ್ಳಬೇಕು. ಅಂತೆಯೇ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗುಳಿದಿರುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮವನ್ನು ಒಳಗೆ ತರುವ ಕೆಲಸವಾಗಬೇಕು. ಇವೆರಡು ರಾಜ್ಯಗಳಿಗೆ ದೊಡ್ಡ ಮೊತ್ತದ ಕಂದಾಯ ತಂದುಕೊಡುವ ಮೂಲಗಳು ಎನ್ನುವುದು ನಿಜ. ಆದರೆ ಒಂದು ದೇಶ ಒಂದು ತೆರಿಗೆ ಧ್ಯೇಯ ಪೂರ್ಣ ಪ್ರಮಾಣದಲ್ಲಿ ಸಾಕಾರವಾಗಬೇಕಾದರೆ ಇದು ಆಗುವುದು ಅನಿವಾರ್ಯ.