ಬೆಂಗಳೂರು: ಕೊಬ್ಬರಿ ಸರ್ವಋತು ಬೆಳೆಯಾಗಿದ್ದು, ಅದಕ್ಕೆ ವರ್ಷ ಪೂರ್ತಿ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ಕೃಷಿ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ ಅವರನ್ನು ಒಳಗೊಂಡ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಕೇಂದ್ರ ಸರ್ಕಾರವು ಪ್ರಸ್ತುತ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು 11,750 ರೂ. ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು 1,250 ರೂ. ಪ್ರೋತ್ಸಾಹಧನ ನೀಡುತ್ತಿದೆ. ಇದುವರೆಗೆ 50,184 ಮೆಟ್ರಿಕ್ ಟನ್ ಖರೀದಿ ಮಾಡಿದೆ. ಖರೀದಿ ಗುರಿ ಇರುವುದು 54,750 ಮೆಟ್ರಿಕ್ ಟನ್. ಆದರೆ, ಕೊಬ್ಬರಿ ಸರ್ವಋತು ಬೆಳೆಯಾಗಿರುವುದರಿಂದ ರೈತರ ಅನುಕೂಲಕ್ಕಾಗಿ ವರ್ಷಪೂರ್ತಿ ಬೆಂಬಲ ಬೆಲೆಯೊಂದಿಗೆ ಖರೀದಿಸಲು ಕೇಂದ್ರಕ್ಕೆ ಮನವಿ ಸಲ್ಲಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಯಿತು.
ಅಷ್ಟೇ ಅಲ್ಲ, ನಿಗದಿತ 54,750 ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಸಂಪೂರ್ಣ ಗುರಿ ಸಾಧಿಸಬೇಕು. ಜತೆಗೆ ತೆಂಗಿನಕಾಯಿ ಕೂಡ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಕೊಬ್ಬರಿ ಉತ್ಪನ್ನಗಳ ಮೌಲ್ಯವರ್ಧನೆಗೆ ಗಮನಹರಿಸಬೇಕು. ಮಧ್ಯವರ್ತಿಗಳಿಗೆ ಲಾಭ ಮಾಡದೆ ರೈತರಿಗೆ ಅನುಕೂಲವಾಗುವಂತೆ ಸಕಾಲದಲ್ಲಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಬೇಕು ಹಾಗೂ ಖರೀದಿಸಿದ ಉತ್ಪನ್ನಗಳಿಗೆ ತಕ್ಷಣ ಹಣ ನೀಡಬೇಕು ಎಂದೂ ಕೇಂದ್ರಕ್ಕೆ ಮನವಿ ಸಲ್ಲಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಕೃಷಿ ಆವರ್ತ ನಿಧಿಗೆ ಕಾಯಂ ಅನುದಾನ ಒದಗಿಸಬೇಕು. ಅದರ ಒಟ್ಟು ಪ್ರಮಾಣ ಏರಿಕೆಯಾಗುತ್ತಾ ಹೋಗಬೇಕು ಎಂದು ಸಮಿತಿ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. ಚಾಮರಾಜನಗರ ರೈತರಿಂದ ಅರಿಶಿಣ ಖರೀದಿಸಿ ಹಣ ನೀಡಿಕೆ ವಿಳಂಬ ಮಾಡಿದ್ದ ಪ್ರಕರಣಗಳಲ್ಲಿ 53 ರೈತರಿಗೆ ಬಡ್ಡಿ ಸೇರಿಸಿ ನೀಡುವಂತೆ ಸಮಿತಿ ಸೂಚಿಸಿತು. ಬರುವ ಜನವರಿಯಿಂದ ಬೆಂಬಲ ಬೆಲೆಯೊಂದಿಗೆ ಭತ್ತ, ರಾಗಿ, ಜೋಳ ಖರೀದಿಸಬೇಕು. ಈ ಹಿಂದಿನಂತೆ ಯಾವುದೇ ಲೋಪಗಳು ಪುನರಾವರ್ತನೆಯಾಗದೆ ರೈತರಿಗೆ ಅನುಕೂಲ ಮಾಡಿ, ನಿಯಮಾನುಸಾರ ಖರೀದಿಸಬೇಕು.
ಈರುಳ್ಳಿ ರಫ್ತಿಗೆ ತೆರಿಗೆ; ಕ್ರಮಕ್ಕೆ ಮನವಿ
ಈರುಳ್ಳಿ ರಫ್ತಿನ ಮೇಲೆ ಅಧಿಕ ತೆರಿಗೆ ವಿಧಿಸಿರುವುದರಿಂದ ರೈತರಿಗೆ ಉತ್ತಮ ದರ ಪಡೆಯುವ ಅವಕಾಶ ತಪ್ಪಿದೆ. ಈ ಬಗ್ಗೆ ಕೇಂದ್ರ ಕ್ರಮ ವಹಿಸಬೇಕು ಎಂದು ಒತ್ತಾಯಿಸಲು ಸಮಿತಿ ನಿರ್ಣಯಿಸಿತು.
ಆವರ್ತ ನಿಧಿ ಬಳಸಿ ಬೇರೆ ಬೇರೆ ಇಲಾಖೆಗಳು ಖರೀದಿಸಿದ್ದು, ಅದನ್ನು ಆದಷ್ಟು ಬೇಗ ಮರುಪಾವತಿ ಮಾಡಬೇಕು. ಇದಕ್ಕೆ ಹಣಕಾಸು ಇಲಾಖೆ ಮಧ್ಯಪ್ರವೇಶಿಸಿ ನೆರವಾಗಬೇಕು. ಇನ್ಮುಂದೆ ಆವರ್ತ ನಿಧಿ ಬಳಸಿದರೆ ಅದಕ್ಕೆ ಸೂಕ್ತ ಬಡ್ಡಿ ಪಾವತಿ ಮಾಡಿ ಹಿಂದಿರಿಗಿಸಬೇಕು ಎಂದು ಸಂಬಂಧಪಟ್ಟ ಏಜೆನ್ಸಿಗಳು, ಇಲಾಖೆಗಳಿಗೆ ಸೂಚನೆ ನೀಡಬೇಕು. ಪಡಿತರ ಆಹಾರ ಸಾಮಗ್ರಿ ಖರೀದಿ ಪ್ರಕ್ರಿಯೆಯಲ್ಲಿ ಕೇಂದ್ರದ ಸಂಸ್ಥೆಗಳ ಜತೆಗೆ ರಾಜ್ಯದ ಸಂಸ್ಥೆಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಲು ಸಮತಿ ಸಲಹೆ ನೀಡಿತು.