ಕುಷ್ಟಗಿ: ಮಳೆಗಾಲದ ವೇಳೆ ಮನೆಯ ತಾರಸಿ ಮೇಲೆ ಬಿದ್ದ ಮಳೆ ನೀರನ್ನು ಹಿಡಿದಿಡುವ ಮಳೆ ಕೊಯ್ಲು ವಿಧಾನದಿಂದ (ರೇನ್ ವಾಟರ್ ಹಾರ್ವೆಸ್ಟಿಂಗ್) ವರ್ಷಪೂರ್ತಿ ಕುಡಿವ ನೀರಿನ ಸಮಸ್ಯೆಯಿಂದ ನಿಶ್ಚಿಂತೆಯಿಂದ ಎಂಬುದನ್ನು ಕುಷ್ಟಗಿಯ ಸಿವಿಲ್ ಇಂಜನಿಯರ್ ವೀರೇಶ ಬಂಗಾರಶೆಟ್ಟರ್ ನಿರೂಪಿಸಿದ್ದಾರೆ.
ಪಟ್ಟಣದ ಕೃಷ್ಣಗಿರಿ ಕಾಲೋನಿಯಲ್ಲಿ ವಾಸವಿರುವ ಸಿವಿಲ್ ಇಂಜನಿಯರ್ ವೀರೇಶ ಬಂಗಾರಶೆಟ್ಟರ ಅವರು, ಪತ್ರಿಕೆಗಳಲ್ಲಿ ಪ್ರಕಟಗೊಂಡ ಮಳೆ ಕೊಯ್ಲು ವಿಧಾನ ಕುರಿತ ವರದಿಗಳಿಂದ ಪ್ರೇರಣೆಗೊಂಡು ತಮ್ಮ ಮನೆಯಲ್ಲೂ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಇವರ ಕುಟುಂಬ ವರ್ಷಪೂರ್ತಿ ಮಳೆ ನೀರನ್ನು ಕುಡಿಯುತ್ತಿದ್ದು, ಇವರಿಗೆ ಪ್ರಸಕ್ತ ಬೇಸಿಗೆಯಲ್ಲೂ ಕುಡಿವ ನೀರಿನ ಸಮಸ್ಯೆ ಎದುರಾಗಿಲ್ಲ. ಕುಡಿವ ನೀರಿನ ವಿಷಯದಲ್ಲಿ ಇವರು ಸ್ವಾವಲಂಬನೆ ಸಾಧಿಸಿದ್ದಾರೆ.
ಇಂಟರ್‌ಲಿಂಕ್ ವ್ಯವಸ್ಥೆ: ತಮ್ಮ ಮನೆಯ 100 ಚದರ ಅಡಿ ತಾರಸಿ ಮೇಲೆ, ಮಳೆಗಾಲದಲ್ಲಿ ಬಿದ್ದ ನೀರು ವ್ಯವಸ್ಥಿತವಾಗಿ ಹರಿಯುವ ಪೈಪ್‌ಲೈನ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಳೆಗಾಲದ ಆರಂಭದಲ್ಲಿ ಬಿದ್ದ ನೀರು ಕೈ ತೋಟಕ್ಕೆ ಹೋಗುವ ವ್ಯವಸ್ಥೆ ಮಾಡಿದ್ದು, ನಂತರ ಬೀಳುವ ಮಳೆ ನೀರನ್ನು 6 ಸಾವಿರ ಲೀಟರ್ ಸಾಮರ್ಥ್ಯದ ತೊಟ್ಟಿಯಲ್ಲಿ ಸಂಗ್ರಹಿಸುತ್ತಿದ್ದಾರೆ. ಈ ನೀರಿನ ತೊಟ್ಟಿ ತುಂಬಿದಂತೆಲ್ಲ ನೆಲಮಟ್ಟದಲ್ಲಿ ಪ್ರತ್ಯೇಕ ಇಂಟರ್ ಲಿಂಕ್ ವ್ಯವಸ್ಥೆಯಲ್ಲಿ ನೀರಿನ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಒಂದು ಬದಿಯಲ್ಲಿ 6 ಸಾವಿರ ಲೀಟರ್ ಸಾಮಾರ್ಥ್ಯದ ಮೂರು ನೀರಿನ ತೊಟ್ಟಿ, ಇನ್ನೊಂದು ಬದಿಯಲ್ಲಿ 3 ಸಾವಿರ ಲೀಟರ್ ಸಾಮಾರ್ಥ್ಯದ ಮೂರು ನೀರಿನ ತೊಟ್ಟಿ ನಿರ್ಮಿಸಿಕೊಂಡಿದ್ದು, ಈ ಟ್ಯಾಂಕ್‌ಗಳಲ್ಲಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಶುದ್ಧೀಕರಿಸಲು ಆರ್‌ಓ ಫಿಲ್ಟರ್ ಅಳವಡಿಸಿದ್ದಾರೆ. ಮಳೆ ನೀರನ್ನು ಕುಡಿಯಲು ಹಾಗೂ ಅಡುಗೆಗೆ ಮಾತ್ರ ಬಳಸಲಾಗುತ್ತದೆ. ಇವರಿಗೆ ಇದುವರೆಗೂ ನೀರಿನ ಸಮಸ್ಯೆ ಎಂದು ಕೊಡ ಹಿಡಿದು ಹೊರಗೆ ಬಂದಿಲ್ಲ. ಹಣ ಕೊಟ್ಟು ಶುದ್ಧ ನೀರನ್ನು ಖರೀದಿಸಿಲ್ಲ.
ನಿತ್ಯ 20 ಲೀಟರ್ ಮಳೆ ನೀರು: ವೀರೇಶ ಬಂಗಾರಶೆಟ್ಟರ್ ಅವರ ಪ್ರಕಾರ 1 ಸೆ.ಮೀ. ಮಳೆಯಾದರೆ 100 ಚದರ ಅಡಿ ತಾರಸಿ ಮೇಲೆ ಸಾವಿರ ಲೀಟರ್ ನೀರು ಜಮೆಯಾಗಲಿದೆ. ಸದ್ಯ ತಾಲೂಕಿನಲ್ಲಿ ಸರಾಸರಿ ಮಳೆ ಸರಾಸರಿ 6.43 ಮಿ.ಮೀ ಮಳೆಯಾಗುತ್ತಿದ್ದು, ಅವರ ಮನೆ ತಾರಸಿಯಿಂದ ಸರಾಸರಿ 60ರಿಂದ 65 ಸಾವಿರ ಲೀಟರ್ ನಷ್ಟು ನೀರು ಜಮೆಯಾಗುತ್ತದೆ. ಮಳೆ ನೀರು ಕೊಯ್ಲು ವಿಧಾನದಿಂದ ಒಟ್ಟು 27 ಸಾವಿರ ಲೀಟರ್ ನೀರು ನೆಲಮಟ್ಟದ ನೀರಿನ ತೊಟ್ಟಿಯಲ್ಲಿ ಹಾಗೂ 6 ಸಾವಿರ ಲೀಟರ್ ಮನೆಯ ಕಟ್ಟಡಕ್ಕೆ ಹೊಂದಿಕೊಂಡಿರುವ ನೀರಿನ ತೊಟ್ಟಿಯಲ್ಲಿ ಒಟ್ಟು 33 ಸಾವಿರ ಲೀಟರ್ ಸಂಗ್ರಹವಾಗುತ್ತಿದೆ. ಕುಟುಂಬದಲ್ಲಿ ನಾಲ್ವರಿದ್ದು ದಿನಕ್ಕೆ 20 ಲೀಟರ್ ನೀರು ಬಳಕೆಯಾಗುತ್ತದೆ. ಮಳೆನೀರು ಸೇವನೆಯಿಂದ ಆರೋಗ್ಯದಿಂದ ಇರಲು ಸಾಧ್ಯವಾಗಿದೆ. ಹೆಚ್ಚವರಿ ನೀರನ್ನು ಮನೆಯ ಕೈ ತೋಟಕ್ಕೆ ಬಳಕೆಯಾಗುತ್ತದೆ. ನೀರಿಗಾಗಿ ಕೊಳವೆಬಾವಿ ಹಾಕಿಸಿಕೊಂಡಿಲ್ಲ. ಪುರಸಭೆ ಪೂರೈಸುವ ನೀರನ್ನು ಬಳಸಲು ಉಪಯೋಗಿಸಲಾಗುತ್ತದೆ.
ಮಂಜುನಾಥ ಮಹಾಲಿಂಪುರ