ಇದು ಸೋಶಿಯಲ್ ಮೀಡಿಯಾ ಯುಗ ಇಲ್ಲಿ, ಪ್ರತಿನಿತ್ಯ ಫೇಸ್ ಬುಕ್, ಇನ್ಸ್ಟಾಗ್ರಾಮ್ ಸ್ಕ್ರಾಲ್ ಮಾಡಿದರೆ ನೂರಾರು ರೀಲ್ಸ್, ಶಾರ್ಟ್ಸ್ ವಿಡಿಯೋಗಳು ಸಿಗುತ್ತದೆ. ಯುವ ಜನರಿಂದ ಹಿಡಿದು ವಯಸ್ಸಾದ ಹಿರಿ ಜೀವಕ್ಕೂ ರೀಲ್ಸ್ ಹುಚ್ಚು ಅಂಟಿಕೊಂಡು ಬಿಟ್ಟಿದೆ. ಇದರ ಸಹವಾಸದಲ್ಲಿ ಬಿದ್ದು ಮೊಬೈಲ್ ನೋಡುತ್ತಾ ಕೂತರೆ ಸಮಯ ಕಳೆದು ಹೋಗುವುದು ಗೊತ್ತೇ ಆಗಲ್ಲ.
ದಿನ ನಿತ್ಯ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗಿ ಮಿಮ್ಸ್ಗಳಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತದೆ. ಈ ವರ್ಷ ಕರ್ನಾಟಕದಲ್ಲಿ ಇಂತಹ ವಿಡಿಯೋಗಳು ಸದ್ದು ಮಾಡಿವೆ. ಇಲ್ಲಿದೆ ಆ ವಿಡಿಯೋಗಳ ಕುರಿತ ಒಂದು ಕ್ವಿಕ್ ಲುಕ್..
ರಾಹುಲ್ಲಾ.. ಅಲ್ಲಾಡಿಸಪ್ಪಾ..: ಬಹುಶಃ ಸೋಶಿಯಲ್ ಮೀಡಿಯಾ ಬಳಕೆ ಮಾಡುವವರಿಗೆ ಈ ʼರಾಹುಲ್ಲಾ.. ರಾಹುಲ್ಲಾ..ʼ ಎನ್ನುವ ಮಾತು ಕೇಳಿ ಕೇಳಿ ಸಾಕಾಗಿದೆ. ಈ ಕುರಿತು ಬಂದಿರುವ ವಿಡಿಯೋಗಳು ಒಂದೆರೆಡಲ್ಲ. ಟ್ರೋಲ್ ಪೇಜ್ ಗಳಿಗೆಹಾಗೂ ಕಂಟೆಂಟ್ ಕ್ರಿಯೇಟರ್ಸ್ಗಳಿಗೆ ʼರಾಹುಲ್ಲಾʼ ನಿಂದ ಸಖತ್ ಮಜಾ ಸಿಕ್ಕಿದೆ ಎಂದರೆ ತಪ್ಪಾಗದು.
ಇದು ಮಾಜಿ ಮೇಕಪ್ ಮ್ಯಾನ್ ಹಾಗೂ ಹೋಟೆಲ್ ಮಾಲೀಕ ಚಂದ್ರು ಅವರು ಯೂಟ್ಯೂಬ್ ಚಾನೆಲ್ವೊಂದರ ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ತಮ್ಮ ಸಹಾಯಕ ಉತ್ತರ ಭಾರತದ ರಾಹುಲ್ ಎಂಬುವವನನ್ನು ಚಂದ್ರು ಅವರು ʼರಾಹುಲ್ಲಾ..” ಎಂದು ಕರೆಯುತ್ತಿದ್ದರು. ʼರಾಹುಲ್ಲಾ ಅಲ್ಲಾಡಿಸಪ್ಪಾ..” ಎಂದು ಚಂದ್ರು ಹೇಳಿದ ಮಾತಿನ ಶೈಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದಲ್ಲದೆ ಚಂದ್ರು ಅವರು ತಯಾರಿಸಿದ ʼಬೆಳ್ಳುಳ್ಳಿ ಕಬಾಬ್’ ಕೂಡ ʼರಾಹುಲ್ಲಾʼದಂತಯೇ ವೈರಲ್ ಆಗಿತ್ತು. ಈ ಡೈಲಾಗ್ಸ್ಗಳು ಎಲ್ಲೆಡೆ ಹರಿದಾಡಿದ ಬಳಿಕ ಚಂದ್ರು ಅವರನ್ನು ಅನೇಕ ವಾಹಿನಿಗಳು ಸಂದರ್ಶನ ಮಾಡಿತ್ತು. ಜನಪ್ರಿಯ ಅಡುಗೆ ಕಾರ್ಯಕ್ರಮದಲ್ಲೂ ಅವರು ಕಾಣಿಸಿಕೊಂಡಿದ್ದರು.
ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ..: ಸಿನಿಮಾ ಮಂದಿಗೆ ಅಭಿಮಾನಿಗಳು ಹೆಚ್ಚಾಗಿಯೇ ಇರುತ್ತಾರೆ. ತನ್ನ ಮೆಚ್ಚಿನ ನಟರಿಗೋಸ್ಕರ ಅಭಿಮಾನಿಗಳು ನಾನಾ ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಯೊಬ್ಬರು ಹಾಡಿದ ಹಾಡೊಂದು ಈ ವರ್ಷ ಚಂದನವನದ ಅಂಗಳದಲ್ಲೂ ಸದ್ದು ಮಾಡಿತ್ತು.
ಧ್ರುವ ಸರ್ಜಾ ತಮ್ಮ ಅಭಿಮಾನಿಗಳೊಂದಿಗೆ ಪ್ರೀತಿಯಿಂದಲೇ ವರ್ತಿಸುತ್ತಾರೆ. ಯಾವ ಅಭಿಮಾನಿಗಳು ಸಿಕ್ಕರೂ ಅವರೊಂದಿಗೆ ಸಾಮಾನ್ಯರಂತೆ ವರ್ತಿಸಿ ಅವರ ಆಸೆಗಳನ್ನು ನೆರವೇರಿಸುತ್ತಾರೆ. ಅವರು ಹೇಳುವ ಡೈಲಾಗ್ಸ್, ಹಾಡುಗಳನ್ನು ಕೇಳಿ ಖುಷಿ ಆಗುತ್ತಾರೆ.
ಹೀಗೆಯೇ ಧ್ರುವ ಅವರ ನಿವಾಸದ ಮುಂದೆ ಅವರ ಅಭಿಮಾನಿಯೊಬ್ಬರು ಅನ್ ದಿ ಸ್ಪಾಟ್ ಹಾಡಿದ “ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ..” ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ ಮಿಮರ್ಸ್ ಗಳಿಗೆ ಆಹಾರವಾಗಿತ್ತು.
ಈ ಬಗ್ಗೆ ಧ್ರುವ ಸರ್ಜಾ ಅವರು ಸಂದರ್ಶನವೊಂದರಲ್ಲಿ ಈ ರೀತಿ ಹೇಳಿದ್ದರು. “ಆತ ಬಂದು ಒಂದೇ ಹಾಡು ಹಾಡ್ತೀನಿ ಅಂದ. ಹಾಡು ಬೇಡ ನೀವು ಹಾಡಿದ್ರೆ ಜನ ಜಾಸ್ತಿ ಇದ್ದಾರೆ. ಎಲ್ಲರೂ ಹಾಡ್ತಾರೆ ಅಂದೆ. ಅದಕ್ಕೆ ಇಲ್ಲ ಬಾಸ್ ನಾನು ಹಾಡ್ಬೇಕು ಎಂದ. ಆಮೇಲೆ ಲಾಸ್ಟ್ ಗೆ ಅವರು ಹಾಡಿದ್ರು. ಒಂದು ನಿಮಿಷ, ಎರಡು, ಮೂರು ನಿಮಿಷ ಆಯಿತು. ನಾನೇನು ಅವರು ಹಾಡೋದನ್ನು ನಿಲ್ಲಿಸಿಲ್ಲ. ಮೂರು – ನಾಲ್ಕು ಗಂಟೆ ಆದ್ಮೇಲೆ ಮತ್ತೆ ಇನ್ನೊಂದು ಹಾಡು ಹಾಡ್ತೇನೆ ಅಂದ. ಗುರು ನೀನು ಪ್ರತಿ ಸಂಡೇ ಒಂದೊಂದು ಹಾಡು ಹಾಡು. ಈ ಸಂಡೇ ಬಿಟ್ಟು ಬಿಡು ಎಂದೆ. ಅವರು ನಮಗಾಗಿ ಟೈಮ್ ಕೊಡ್ತಾರೆ ಎಂದಿದ್ದರು.
ಶೆಡ್ಡಿಗೆ ಹೋಗೋಣ ಬಾ.. ಈ ವರ್ಷ ದೊಡ್ಡ ಸುದ್ದಿ ಮಾಡಿದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸಂದರ್ಭದಲ್ಲಿ ಹುಟ್ಟಿದ ಡೈಲಾಗ್ ಇದು. ದರ್ಶನ್ ಗ್ಯಾಂಗ್ ಅಪಹರಣ ಮಾಡಿಕೊಂಡು ಬಂದಿದ್ದರು ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ ನಲ್ಲಿ ಇರಿಸಲಾಗಿತ್ತು. ಪವಿತ್ರಾ ಗೌಡ ಅವರ ಸಹೋದರ ಜೈಲಿನ ಹೊರಗೆ ಇದ್ದ ಮಾಧ್ಯಮದವರನ್ನು ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ಲ.. ಎಂದಿದ್ದರು. ಈ ಮಾತಿಗೆ ಸುದ್ದಿ ವಾಹಿನಿಯ ನಿರೂಪಕರೊಬ್ಬರು ನಮಗೆ ಮಾಡೋಕೆ ಕೆಲಸ ಇಲ್ಲ ʼಶೆಡ್ಡಿಗೆ ಹೋಗೋಣ ಬಾ..ʼ ಎಂದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಕರಿಮಣಿ ಮಾಲೀಕ ನೀನಲ್ಲ.. ʼಕರಿಮಣಿ ಮಾಲೀಕ ನೀನಲ್ಲʼ 25 ವರ್ಷ ಬಳಿಕ ಉಪ್ಪಿ ಅವರ ʼಉಪೇಂದ್ರʼ ಸಿನಿಮಾದ ಹಾಡೊಂದು ಜನಪ್ರಿಯತೆ ಪಡೆದುಕೊಂಡು ವೈರಲ್ ಆಗಿತ್ತು. ಅದಕ್ಕೆ ಕಾರಣ ಉತ್ತರ ಕರ್ನಾಟಕ ಸೋಶಿಯಲ್ ಮೀಡಿಯಾ ಸ್ಟಾರ್ ಕನಕ ಕೊಟ್ಟೂರು. ಕನಕ ರೀಲ್ಸ್ ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದರಲ್ಲಿ 2023 ರ ಡಿ.26 ರಂದು ಅಪ್ಲೋಡ್ ಮಾಡಿದ ʼಕರಿಮಣಿ ಮಾಲೀಕ ನೀನಲ್ಲ..ʼ ರೀಲ್ಸ್ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು.
“ಗುರು ಒಂದು ಟೈಮ್ ಅಲ್ಲಿ ಅವಳಾಗಿಯೇ ಬಂದ್ಳು, ಅವಳಾಗಿಯೇ ಹೋದಳು.. ಹೋಗುವಾಗ ಒಂದೇ ಒಂದು ಮಾತು ಹೇಳಿದ್ಳು ಮಗಾ..” ಎನ್ನುವ ಮಾತಿಗೆ ಹಿನ್ನೆಲೆಯಾಗಿ ಬಂದ ʼಕರಿಮಣಿ ಮಾಲೀಕʼ ಹಾಡು ಕರ್ನಾಟಕದ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿತ್ತು. ಈ ರೀಲ್ಸ್ ಮೂಲಕ ಕನಕ ಮತ್ತಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು.
ಜಾಲಿ ಜಾಲಿ ಎಲ್ಲಾ ಜಾಲಿ.. ʼಭೀಮʼನ ಡೈಲಾಗ್ ಫುಲ್ ಟ್ರೆಂಡ್..
ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿದ ʼಭೀಮʼ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತ್ತು. ಸಿನಿಮಾದ ಜತೆ ಜತೆಗೇ ಸಿನಿಮಾದ ಡೈಲಾಗ್ಸ್ಗಳ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ರಾಜಕೀಯ ಸನ್ನಿವೇಶದ ಕುರಿತಾಗಿ ಸಿನಿಮಾದಲ್ಲಿ ಹೇಳುವ ʼಜಾಲಿ ಜಾಲಿ ಎಲ್ಲಾ ಜಾಲಿ..ʼ ಎನ್ನುವ ಡೈಲಾಗ್ಸ್ ಸಿನಿಮಾ ರಿಲೀಸ್ ಆದ ಕೆಲ ದಿನಗಳ ಬಳಿಕ ಎಲ್ಲರ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಸ್ಕ್ರೂಲ್ ಆಗಿತ್ತು. ಬೇರೆ ಬೇರೆ ಸನ್ನಿವೇಶಗಳನ್ನಿಟ್ಟುಕೊಂಡು ಇದನ್ನು ಮಿಮ್ಸ್ ಆಗಿ ಮಾಡಲಾಗಿತ್ತು.
ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ‘ಲಡ್ಡು ಮುತ್ಯಾ’ನದೇ ಜಪ.. ಈ ವರ್ಷ ಕರ್ನಾಟಕ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಅತೀ ಹೆಚ್ಚು ಸದ್ದು ಮಾಡಿದ ಮಿಮ್ಸ್ಗಳಲ್ಲಿ ʼಲಡ್ಡು ಮುತ್ಯಾʼ ಎನ್ನುವ ರೀಲ್ಸ್.
ವಿಕಲಚೇತನ ವ್ಯಕ್ತಿಯೊಬ್ಬ ಪವಾಡ ಪುರುಷನಂತೆ ತಿರುಗುವ ಫ್ಯಾನ್ ಮುಟ್ಟುತ್ತಾನೆ. ಫ್ಯಾನ್ ನಲ್ಲಿರುವ ಧೂಳು ಭಕ್ತರ ಹಣೆಗೆ ಹಚ್ಚುತ್ತಾನೆ. ಹಿನ್ನೆಲೆಯಲ್ಲಿ “ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ” ಎನ್ನುವ ಹಾಡು ಪ್ಲೇ ಆಗುತ್ತದೆ. ಇದನ್ನು ಕಂಟೆಂಟ್ ಕ್ರಿಯೇಟರ್ಸ್ ಹಾಗೂ ಮಿಮರ್ಸ್ ಗಳು ನಾನಾ ರೀತಿಯಲ್ಲಿ ಟ್ರೋಲ್ ಆಗಿ ಬಳಸುತ್ತಾರೆ. ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ಕೂಡ ಈ ಹಾಡನ್ನು ಬಳಸಿ ರೀಲ್ಸ್ ಮಾಡಿದ್ದಾರೆ.
“ಲಡ್ಡು ಮುತ್ಯಾ’ ಆರಾಧ್ಯ ದೈವ. “ಬಾಗಲಕೋಟೆಯ ಭಗವಂತ’ ಎಂದೇ ಆ ಭಾಗದ ಜನರಿಗೆ ಆತ ಚಿರಪರಿಚಿತ. ಉತ್ತರ ಕರ್ನಾಟಕದ ಜನಮಾನಸದಲ್ಲಿ ನೆಲೆ ನಿಂತಿರುವ ಪವಾಡ ಪುರುಷ. ಲಡ್ಡು ಮುತ್ಯಾನಿಗೆ ಒಂದು ಮಠವಿದೆ. ಬಾಗಲಕೋಟೆಯ ಗದ್ದನಕೇರಿ ಕ್ರಾಸಿನ ಸಮೀಪದ ಸೀಮಿಕೇರಿಯಲ್ಲಿರುವ ಮಠ ಮಾತ್ರವೇ ಆತನ ಹೆಸರಿಗಿರುವ ಮಠ. ಅದಕ್ಕೆ ಯಾವ ಶಾಖೆಗಳೂ ಇಲ್ಲ. ಪ್ರತಿ ಹುಣ್ಣಿಮೆ ಅಮವಾಸ್ಯೆಯಂದು ಅಲ್ಲಿ ಪೂಜೆ ಮಾಡಿ ಪ್ರಸಾದವನ್ನು ಹಂಚಲಾಗುತ್ತದೆ.
ಬೇರೆಯವರ ಯಶಸ್ಸು ನೋಡಿ..: “ನೀನು ಬೇರೆಯವರ ಯಶಸ್ಸು ನೋಡಿ ಅಳಬೇಡ, ಶ್ರಮಪಟ್ಟರೆ ನಿನ್ನ ಯಶಸ್ಸು ನೋಡಿ ಪ್ರಚಂಚವೇ ಸಂಭ್ರಮಿಸುತ್ತದೆ”.. ಸೂಟ್ – ಬೂಟ್ ಹಾಕಿಕೊಂಡು ಕೂದಲು ಕ್ರಾಪ್ ಮಾಡಿಕೊಂಡು ಇಂತಹ ಸ್ಪೂರ್ತಿದಾಯಕ ಮಾತುಗಳನ್ನು ಹೇಳುವ ಬಾಲಕ ಭಾರತದೆಲ್ಲೆಡೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಾನಾ ಭಾಷೆಯಲ್ಲಿ ಸ್ಪೂರ್ತಿದಾಯಕ ಮಾತುಗಳನ್ನು ಆಡುವ ಈ ಬಾಲಕನ ಬೆಂಜಮಿನ್ ಪಿ. ಜೋಬಿ. (Joby P U Wayanad). ಕೇರಳದ ವಯನಾಡುನಲ್ಲಿ ಜನಿಸಿದ ಬೆಂಜಮಿನ್ ಗೆ ಈಗ 11 ವರ್ಷ. ʼSapne dekhna achi baat haiʼ ಎನ್ನುವ ವಿಡಿಯೋದ ಮೂಲಕ ವೈರಲ್ ಆದ ಈತ. ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ “ನೀನು ಬೇರೆಯವರ ಯಶಸ್ಸು ನೋಡಿ ಅಳಬೇಡ, ಶ್ರಮಪಟ್ಟರೆ ನಿನ್ನ ಯಶಸ್ಸು ನೋಡಿ ಪ್ರಚಂಚವೇ ಸಂಭ್ರಮಿಸುತ್ತದೆ”.. ಎನ್ನುವ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾನೆ.
ಈತ ಹೇಳಿರುವ ಈ ಮಾತುಗಳನ್ನಿಟ್ಟುಕೊಂಡು ರೀಲ್ಸ್ ಕ್ರಿಯೇಟರ್ಸ್ ಗಳು ನೂರಾರು ವಿಡಿಯೋಗಳನ್ನು ಮಾಡುತ್ತಿದ್ದಾರೆ.