Advertisement
ಜುಲೈ :
Related Articles
Advertisement
ಬಾಲಿವುಡ್‌ನ ಹಿರಿಯ ನಟ ದಿಲೀಪ್ ಕುಮಾರ್(ಯೂಸೂಫ್ ಖಾನ್) ತಮ್ಮ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಅವರ ನಿಧನಕ್ಕೆ ಹಿರಿಯ ಅಮಿತಾ ಬಚ್ಚನ್, ಧರ್ಮೇಂದ್ರ. ಜಿತೇಂದ್ರ ಸೇರಿದಂತೆ ದಕ್ಷಿಣ ಭಾರತ ಅನೇಕ ನಟರು ಸಂತಾಪ ಸೂಚಿಸಿದ್ದರು.
ಕೇಂದ್ರ ಸಂಪುಟದಲ್ಲಿ ರಾಜ್ಯದ ನಾಲ್ವರಿಗೆ ಸ್ಥಾನ :
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಚಿವ ಸಂಪುಟದಲ್ಲಿ ಮತ್ತೆ ಬದಲಾವಣೆ ಮಾಡಿ ದ್ದು ಇದರಲ್ಲಿ ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರ ಶೇಖರ್ ಸಹಿತ ನಾಲ್ವರಿಗೆ ಸಚಿವ ಸ್ಥಾನ ಮಾನ ನೀಡಲಾಯಿತು.
ರಾಜಕೀಯದಿಂದ ರಜನಿ ದೂರ :
ತಮಿಳುನಾಡಿನ ಹಿರಿಯ ನಟ ರಜನಿಕಾಂತ್ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಾರೆ ಎಂಬ ವಿಚಾರ ತ.ನಾಡಿನ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು. ಈ ಕುರಿತು ಅನೇಕ ತಯಾರಿಯನ್ನೂ ಮಾಡಲಾಗಿತ್ತು. ಕೊನೆಯ ಕ್ಷಣದಲ್ಲಿ ಅವರು ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಪೂರ್ಣ ವಿದಾಯ ಹೇಳಿದರು.
ನೂತನ ರಾಜ್ಯಪಾಲರಾಗಿ ತಾವರ್‌ಚಂದ್ ಗೆಹ್ಲೋಟ್ :
ರಾಜ್ಯದಲ್ಲಿ ರಾಜ್ಯಪಾಲರಾಗಿದ್ದ ವಜೂಭಾಯಿ ರೂಢಾ ಭಾಯ್ ವಾಲ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರಕಾರದಿಂದ ನೂತನವಾಗಿ ತಾವರ್‌ಚಂದ್ ಗೆಹ್ಲೋಟ್‌ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಯಿತು.
ಕಾವೇರಿ ಹೋರಾಟಗಾರ ಜಿ. ಮಾದೇಗೌಡ ನಿಧನ :
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕೋರ್ಟ್ ತೀರ್ಮಾನಗಳ ವಿರುದ್ಧ ಅನೇಕ ಬಾರಿ ಕರ್ನಾಟಕದ ಪರ ಧ್ವನಿಯಾಗಿ ಜಿ. ಮಾದೇಗೌಡರು ಹೋರಾಟ ಮಾಡಿದ್ದರು.ಅಲ್ಲದೆ ಕೃಷಿ ಕಾಯ್ದೆ ವಿರುದ್ಧವಾಗಿ ಧ್ವನಿಯಾಗಿ ಕೃಷಿ ಸಂಘಟನೆಗಳಿಗೆ ಪ್ರಾರಂಭ ಹಂತದಲ್ಲಿ ಸೂಕ್ತ ಸಲಹೆ ನೀಡಿದ್ದರು. ಅವರು ಜು.18 ರಂದು ನಿಧನ ಹೊಂದಿದ್ದು, ಅನೇಕ ಸಂಘಟನೆಗಳು ಸಂತಾಪ ಸೂಚಿಸಿದ್ದವು.
ನೂತನ ಸಿಎಂ ಬೊಮ್ಮಾಯಿ :
ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಸಿಎಂ ಸ್ಥಾನಕ್ಕೆ ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದ್ದವು. ಹಲವು ಕಸರತ್ತುಗಳ ಬಳಿಕ ಬಿಎಸ್‌ವೈ ಆಪ್ತರಾದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ಮಾರನೇ ದಿನ ಪ್ರಮಾಣವಚನ ಸ್ವೀಕರಿಸಿದರು.
ಒಲಿಂಪಿಕ್ಸ್‌ನಲ್ಲಿ ಸುವರ್ಣಾಕ್ಷರ :
ಕೊರೊನಾ ಸೋಂಕು ಹೆಚ್ಚು ಹರಡಿದ ಹಿನ್ನೆಲೆ ಟೋಕಿಯೊ ಒಲಿಂಪಿಕ್ಸ್ ನಡೆಸಬೇಕೋ ಬೇಡವೋ ಎಂಬುದರ ಕುರಿತು ಅನೇಕ ಚರ್ಚೆಗಳು ನಡೆದಿದ್ದವು. ನಾನಾ ದೇಶಗಳಲ್ಲಿ ಕೊರೊನಾ 3-4ನೇ ಅಲೆಯೂ ಪ್ರಾರಂಭ ವಾಗಿತ್ತು. ಅನೇಕ ನಿರ್ಬಂಧಗಳ ನಡುವೆ ಸೂಕ್ತ ಮಾರ್ಗ ಸೂಚಿ ಹಿನ್ನೆಲೆಯಲ್ಲಿ ಟೋಕಿಯೊದಲ್ಲಿ ಒಲಿಪಿಂಕ್ಸ್ ಅನ್ನು ಪ್ರಾರಂಭಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಮೊದಲ ದಿನ ಕೊರೊನಾ ಮಾರ್ಗಸೂಚಿ ಹಿನ್ನೆಲೆ ಸರಳ ಕಾರ್ಯಕ್ರಮ ಮೂಲಕ ಕೂಟ ಪ್ರಾರಂಭವಾಯಿತು. ಮಹಿಳೆಯರ 48 ಕೆ.ಜಿ. ವೇಟ್ ಲಿಫ್ಟಿಂಗ್‌ನಲ್ಲಿ ಮಣಿಪುರದ ಇಂಫಾಲ್‌ನ ಸಾಯಿಕೋಮ್ ಮೀರಾಭಾಯಿ ಚಾನು ಅವರು 202 ಕೆ.ಜಿ. ಭಾರವನ್ನು ಎತ್ತುವ ಮೂಲಕ ಸಾಧನೆ ಮಾಡಿ ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ತಂದು ಕೊಟ್ಟರು.
ಟೋಕಿಯೊ ಒಲಂಪಿಕ್ಸ್‌ನ ಮಹಿಳಾ ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ನಲ್ಲಿ ಚೀನದ ಹೆ ಬಿಂಗ್ ಜಿಯಾವೋ ವಿರುದ್ಧ ಪಿ.ವಿ.ಸಿಂಧು ಕಂಚು ಗೆಲ್ಲುವ ಮೂಲಕ ಸತತ ಎರಡು ಒಲಂಪಿಕ್ಸ್‌ನಲ್ಲಿ ಪದಕ ಗೆದ್ದ ದಾಖಲೆ ನಿರ್ಮಿಸಿದರು. ಮಹಿಳಾ ಬಾಕ್ಸಿಂಗ್‌ನಲ್ಲಿ ಲವಿÉನಾಗೆ ಕಂಚು, ಹಾಕಿಯಲ್ಲಿ 41 ವರ್ಷಗಳ ಅನಂತರ ಪುರುಷರ ತಂಡಕ್ಕೆ ಕಂಚು, ಕುಸ್ತಿಯಲ್ಲಿ ಹರಿಯಾಣದ ರವಿಕುಮಾರ್‌ಗೆ ಬೆಳ್ಳಿ, ಕುಸ್ತಿ ಯಲ್ಲಿ ಭಜರಂಗ್ ಪುನಿಯಾಗೆ ಕಂಚು, ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾಗೆ ಚಿನ್ನದ ಪದಕ ಬಂದಿತು.
ಬಿಎಸ್‌ವೈ ರಾಜೀನಾಮೆ :
ಅನೇಕ ರಾಜಕೀಯ ಮೇಲಾಟಗಳ ನಡುವೆ ರಾಜ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆಗೂ ಮುಂಚೆ ಅವರು ಮಾಡಿದ ಭಾಷಣದಲ್ಲಿ ಅಧಿಕಾರ- ಸ್ಥಾನಮಾನ ಸೇರಿದಂತೆ ರಾಜಕೀಯ ಮುಖಂಡರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು.
ಆಗಸ್ಟ್ :
ಅಫ್ಘಾನ್ ತಾಲಿಬಾನ್ ವಶ :
ಅಫ್ಘಾನ್‌ನಿಂದ ಅಮೆರಿಕ ಸೇನೆ ಕಾಲುತೆಗೆಯುತ್ತಿದ್ದಂತೆ ತಾಲಿಬಾನಿಗಳ ವಶವಾದ ಅಫ್ಘಾನ್. ಜಗತ್ತಿನೆಲ್ಲೆಡೆ ಅಮೆರಿಕದ ವರ್ತನೆಗೆ ಆಕ್ರೋಶ. ಬೇರೆ ಬೇರೆ ದೇಶಗಳಿಗೆ ತೆರಳಲು ನಾಗರಿಕರ ಪರದಾಟ.. ರನ್ ವೇಯಿಂದ ಹೊರಾಟ ವಿಮಾನಕ್ಕೆ ಜೋತುಬಿದ್ದು ನಾಗರಿಕ ನೂರಾರು ಅಡಿ ಮೇಲಿನಿಂದ ಕೆಳಕ್ಕೆ ಬಿದ್ದು ಸತ್ತದ್ದು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಭಾರತ ಸರಕಾರ ದೇಶವಾಸಿಗಳನ್ನು ವಿಮಾನದ ಮೂಲಕ ಕರೆತಂದಿತು. ವಿವಿಧ ದೇಶಗಳಿಂದ ಅಫ್ಘಾನ್‌ಗೆ ನೆರವು.
ಶಾಲೆ ಪುನರಾರಂಭ :
ಮಹಾಮಾರಿ ಕೊರೊನಾದಿಂದ ಬಂದ್ ಆಗಿದ್ದ ಶೈಕ್ಷಣಿಕ ವರ್ಷದ ಶಾಲಾ- ಕಾಲೇಜುಗಳ ಪುನರಾರಂಭಕ್ಕೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಚಾಲನೆ ನೀಡಿದರು. ಮಕ್ಕಳ ಸುರಕ್ಷತೆ ದೃಷಿಯಿಂದ ಕೋವಿಡ್ ಮಾರ್ಗಸೂಚಿಗಳ ಪಾಲನೆಗೆ ಹಾಗೂ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು.
ಸೆಪ್ಟಂಬರ್ :
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ದಾಖಲೆ :
ಇದೇ ಮೊದಲ ಬಾರಿಗೆ ಭಾರತ 19 ಪದಕಗಳನ್ನು ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರೀ ಪ್ರಮಾಣದ ಸಾಧನೆ ಮಾಡಿತು. ಅಂದರೆ 5 ಚಿನ್ನದ ಪದಕ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು. ಶೂಟಿಂಗ್‌ನಲ್ಲಿ ಅವನಿ ಲೇಖಾರ, ಜಾವೆಲಿನ್‌ನಲ್ಲಿ ಸುಮಿತ್ ಅಂತಿಲ್, ಶೂಟಿಂಗ್‌ನಲ್ಲಿ ಮನೀಷ್ ನರ್ವಾಲ್, ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್, ಬ್ಯಾಡ್ಮಿಂಟನ್‌ನಲ್ಲಿ ಕೃಷ್ಣ ನಗರ್ ಚಿನ್ನದ ಪದಕ ಗಳಿಸಿದರು. ಇನ್ನು ಟೇಬಲ್ ಟೆನಿಸ್‌ನಲ್ಲಿ ಭವಾನಿಬೆನ್ ಪಟೇಲ್, ಹೈಜಂಪ್‌ನಲ್ಲಿ ನಿಶದ್ ಕುಮಾರ್, ಡಿಸ್ಕಸ್‌ನಲ್ಲಿ ಯೋಗೇಶ್ ಕಥುನಿಯಾ, ಜಾವೆಲಿನ್‌ನಲ್ಲಿ ದೇವೇಂದ್ರ ಜಝಾರಿಯಾ, ಹೈಜಂಪ್‌ನಲ್ಲಿ ಮರಿಯಪ್ಪನ್ ತಂಗವೇಲು, ಹೈಜಂಪ್‌ನಲ್ಲಿ ಪ್ರವೀಣ್ ಕುಮಾರ್, ಶೂಟಿಂಗ್‌ನಲ್ಲಿ ಸಿಂಹರಾಜ್ ಅಧಾನಾ, ಬ್ಯಾಡ್ಮಿಂಟನ್‌ನಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗಳಿಸಿದರು. ಉಳಿದಂತೆ ಜಾವೆಲಿನ್‌ನಲ್ಲಿ ಸುಂದರ್ ಸಿಂಗ್ ಗುರ್ಜರ್, ಶೂಟಿಂಗ್‌ನಲ್ಲಿ ಸಿಂಹರಾಜ್ ಅಧಾನಾ, ಹೈಜಂಪ್‌ನಲ್ಲಿ ಶರದ್ ಕುಮಾರ್, ಶೂಟಿಂಗ್‌ನಲ್ಲಿ ಅವನಿ ಲೇಖಾರಾ, ಬಿಲ್ಲುಗಾರಿಕೆಯಲ್ಲಿ ಹರ್ವೀಂದರ್ ಸಿಂಗ್, ಬ್ಯಾಡ್ಮಿಂಟನ್‌ನಲ್ಲಿ ಮನೋಜ್ ಸರ್ಕಾರ್ ಕಂಚಿನ ಪದಕ ಪಡೆದರು. ಅವನಿ ಮತ್ತು ಸಿಂಹರಾಜ್ ತಲಾ ಎರಡು ಪದಕ ಗಳಿಸಿದ್ದು ವಿಶೇಷ.
ಸಿಎಂ ಬದಲಾವಣೆ :
ಉತ್ತರಾಖಂಡ ಮಾದರಿಯಲ್ಲೇ ಗುಜರಾತ್‌ನಲ್ಲೂ ಮುಖ್ಯಮಂತ್ರಿ ಬದಲಾವಣೆಯಾಯಿತು. ಇಲ್ಲಿ ಆಡಳಿತದಲ್ಲಿರುವ ಬಿಜೆಪಿ, ವಿಜಯ್ ರೂಪಾಣಿ ಅವರಿಂದ ರಾಜೀನಾಮೆ ಪಡೆದು, ಹೊಸ ಸಿಎಂ ನೇಮಿಸಿತು. ಹೊಸ ಮುಖ ಭೂಪೇಂದ್ರ ಪಟೇಲ್ ನೂತನ ಸಿಎಂ ಆಗಿ ನೇಮಕವಾದರು.
ಆಸ್ಕರ್ ಫೆರ್ನಾಂಡಿಸ್ ಇನ್ನಿಲ್ಲ :
ಕರ್ನಾಟಕದ ಹಿರಿಯ ರಾಜಕಾರಣಿ, ಗಾಂಧಿ ಕುಟುಂಬದ ನಿಕಟವರ್ತಿ ಎಂದೇ ಹೆಸರಾಗಿದ್ದ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರು ನಿಧನ ಹೊಂದಿದರು. ಜು.18ರಂದು ಯೋಗ ಮಾಡುತ್ತಿದ್ದ ವೇಳೆಯಲ್ಲೇ ಬಿದ್ದು ಗಾಯಗೊಂಡಿದ್ದರು. ನಾಲ್ಕು ಬಾರಿ ಸಂಸದರಾಗಿದ್ದ ಆಸ್ಕರ್, ಯುಪಿಎ ಸರಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು.
ಕ್ಯಾಪ್ಟನ್ ರಾಜೀನಾಮೆ :
ಪಂಜಾಬ್ ಕಾಂಗ್ರೆಸ್‌ನಲ್ಲಿನ ಭಿನ್ನಮತಗಳ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅದರಲ್ಲೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು ಅವರೇ ಕ್ಯಾಪ್ಟನ್ ವಿರುದ್ಧ ಬಂಡಾಯವೆದ್ದಿದ್ದರು. ಇದಾದ ಬಳಿಕ ನ.2ರಂದು ಕ್ಯಾಪ್ಟನ್ ಕಾಂಗ್ರೆಸ್‌ನಿಂದಲೂ ಹೊರನಡೆದರು. ಈಗ ಹೊಸ ಪಕ್ಷ ಮಾಡಿಕೊಂಡು ಬಿಜೆಪಿ ಜತೆ ಕೈಜೋಡಿಸಿದ್ದಾರೆ.
ಅಕ್ಟೋಬರ್ :
ವಿಜಯನಗರ 31ನೇ ಜಿಲ್ಲೆ :
ರಾಜ್ಯದ 31ನೇ ಜಿಲ್ಲೆಯಾಗಿ ನೂತನ ವಿಜಯನಗರ ಜಿಲ್ಲೆ ಅಧಿಕೃತವಾಗಿ ಉದಯವಾಗಿದೆ. 6 ತಾಲೂಕುಗಳ 31ನೇ ಜಿಲ್ಲೆಯಾಗಿ ನೂತನ ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದರು. ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರ್, ಹೂವಿನಹಡಗಲಿ, ಹರಪ್ಪನಹಳ್ಳಿ 6 ತಾಲೂಕು ಸೇರಿ ವಿಜಯನಗರ 31ನೇ ಜಿಲ್ಲೆಯಾಗಿದೆ.
ಟಾಟಾಗೆ ಏರ್ ಇಂಡಿಯಾ :
90 ವರ್ಷಗಳ ಬಳಿಕ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿದ್ದ ಅನಂತರ ಭಾರತ ಸರಕಾರದ ಪಾಲಾಗಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದೆ. ಮಹಾರಾಜ ಲಾಂಛನದಿಂದ ಗುರುತಿಸಿಕೊಂಡಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ 60 ಸಾವಿರ ಕೋಟಿ ರೂ. ನಷ್ಟದಲ್ಲಿತ್ತು. ಸಂಸ್ಥೆಯನ್ನು ಮೇಲೆತ್ತಲು ಎಲ್ಲ ಪ್ರಯತ್ನಗಳು ವಿಫಲಗೊಂಡ ಬಳಿಕ ಖಾಸಗೀಕರಣ ಮಾಡಲಾಗಿದೆ. 1932ರಲ್ಲಿ ಅ.15ರಂದು ಟಾಟಾ ಸನ್ಸ್ ಉದ್ಯಮಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್ ಸ್ಥಾಪಿಸಿದ್ದರು.
100 ಕೋಟಿ ಲಸಿಕೆ :
ದೇಶಾದ್ಯಂತ 100 ಕೋಟಿ ಲಸಿಕೆ ಹಾಕಲಾಯಿತು. ವೀಡಿಯೋ ಕಾನ್ಫರೆನ್ಸ್ ಮೂಲಕ ವೈದ್ಯ ವಿಜ್ಞಾನಿಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತ ನಾಡಿ, ದೇಶಕ್ಕೆ 100 ಕೋಟಿ ಲಸಿಕೆ ಡೋಸ್‌ನ ಸುರಕ್ಷಾ ಕವಚ ದೊರೆತಿದೆ. ಈ ಸಾಧನೆಗೆ ನಮ್ಮ ವೈದ್ಯ ವಿಜ್ಞಾನಿಗಳ ಮತ್ತು ಆರೋಗ್ಯ ಕಾರ್ಯಕರ್ತರ ಶ್ರಮವೇ ಕಾರಣ ಎಂದು ಹೇಳಿದರು.
ಕಿತ್ತೂರು ಕರ್ನಾಟಕ :
ಮುಂಬಯಿ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಗೆ ಅಂತೂ ಮನ್ನಣೆ ದೊರೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
ಶಾಲಾ-ಕಾಲೇಜು ಪೂರ್ಣ ತರಗತಿ ಆರಂಭ :
ರಾಜ್ಯದಲ್ಲಿ 2020 ಮಾರ್ಚ್‌ನಿಂದ ಸ್ಥಗಿತಗೊಂಡಿದ್ದ 1ರಿಂದ 5ನೇ ತರಗತಿ ಶಾಲೆ ಮತ್ತೆ ಪುನರಾರಂಭಕ್ಕೆ ಡೇಟ್ ನಿಗದಿ ಆಯಿತು. 20 ತಿಂಗಳ ಬಳಿಕ ಕರ್ನಾಟಕ ಪ್ರಾಥಮಿಕ ಶಿಕ್ಷಣ ಹಂತದ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಯಿತು. ಕಾಲೇಜಿನಲ್ಲಿ ಭೌತಿಕ ತರಗತಿ ಆರಂಭಕ್ಕೆ ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆಗಳನ್ನು ಆರಂಭಿಸಲಾಯಿತು. ಜತೆಗೆ ಬಿಸಿಯೂಟ ಕೂಡ ವಿತರಣೆ ಮಾಡಲಾಯಿತು. ಶಿಕ್ಷಣ ಇಲಾಖೆಗೆ ಸಕಲ ಸಿದ್ಧತೆಗೆ ಸಚಿವ ಬಿ.ಸಿ,ನಾಗೇಶ್ ಸೂಚಿಸಿದ್ದರು.
ನಟ ಪುನೀತ್ ರಾಜ್ ಕುಮಾರ್ ವಿಧಿವಶ :
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಮದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾ ದರು. ಬೆಳಗ್ಗೆ ಜಿಮ್ ಮಾಡುವ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದಾಗ ತೀವ್ರ ಹೃದಯಾಘಾತ ಸಂಭವಿಸಿದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿ ರೆಳೆದರು. ಪುನೀತ್ ನಿಧನಕ್ಕೆ ವಿಶ್ವದಾದ್ಯಂತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅಪ್ಪು ನಿಧನಕ್ಕೆ ಜಗತ್ತಿನ ಗಣ್ಯರು, ರಾಜಕಾರಣಿಗಳು, ಭಾರತ ಚಿತ್ರೋದ್ಯಮ, ರೋಮ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದಾರೆ. ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಲವರು ಸಂತಾಪ ಸೂಚಿಸಿದರು. ನ.16ರಂದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಮರಣೋತ್ತರವಾಗಿ ಪುನೀತ್‌ಗೆ ಕರ್ನಾಟಕ ರತ್ನ ಘೋಷಣೆ ಮಾಡಿದರು.
ನವೆಂಬರ್ :
ಸಿಎಂ ತವರಲ್ಲೇ ಮುದುಡಿದ ಕಮಲ :
ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಎದುರಾದ ಮೊದಲ ಸವಾಲು ಸಿಂಧಗಿ, ಹಾನಗಲ್ ಉಪಚುನಾವಣೆಯಲ್ಲಿ ಸಿಎಂ ತವರು ಜಿಲ್ಲೆಯ ಹಾನಗಲ್‌ನಲ್ಲೇ ಬಿಜೆಪಿ ಅಭ್ಯರ್ಥಿ ಸೋತರೆ, ಸಿಂಧಗಿಯಲ್ಲಿ ಗೆಲುವಿನ ನಗೆ ಬೀರಿತು. ವಿವಿಧ ರಾಜ್ಯಗಳ ವಿಧಾನಸಭೆ, ಲೋಕಸಭೆಯ ಉಪಚುನಾವಣೆಯಲ್ಲಿ ಈಶಾನ್ಯದಲ್ಲಿ ಬಿಜೆಪಿಗೆ ಸಿಹಿ, ಉಳಿದೆಡೆ ಕಹಿಯಾಗಿತ್ತು.
ಪಂಚ ಚುನಾವಣೆ ತಂತ್ರ :
ತೈಲ ಬೆಲೆ ಏರಿಕೆಯಿಂದ ಜನರು ಹಿಡಿಶಾಪ ಹಾಕುತ್ತಿದ್ದ ಹಿನ್ನಲೆ ಹಾಗೂ ಪಂಚರಾಜ್ಯಗಳ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರಕಾರದಿಂದ ಪೆಟ್ರೋಲ್, ಡೀಸೆಲ್‌ಗೆ ಕ್ರಮವಾಗಿ 5, 10 ರೂ. ಇಳಿಕೆ ಮಾಡಿದರೆ, ರಾಜ್ಯ ಸರಕಾರದಿಂದಲೂ ಬೆಲೆ ಇಳಿಕೆ ಘೋಷಣೆ ಮಾಡಲಾಯಿತು.
ಕಿತ್ತೂರು ಕರ್ನಾಟಕ ಘೋಷಣೆ :
ಕುಂದಾನಗರಿಯಲ್ಲಿ ಸಂಭ್ರಮಾಚರಣೆ ಮುಂಬಯಿಯ ಕರ್ನಾಟಕ ಪ್ರದೇಶವನ್ನು ಕಿತ್ತೂರು ಕರ್ನಾಟಕ ಎಂದು ಸರಕಾರ ಘೋಷಿಸಿರುವ ಹಿನ್ನೆಲೆ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ನಡೆದ ಸಂಭ್ರಮಾಚರಣೆಯಲ್ಲಿ ಸಂಸದರಾದ ಈರಣ್ಣ ಕಡಾಡಿ ಹಾಗೂ ಮಂಗಲಾ ಅಂಗಡಿ ಪಾಲ್ಗೊಂಡಿದ್ದರು.
ಮೂರು ಕೃಷಿ ಕಾಯ್ದೆಗಳ ರದ್ದು :
ಕಳೆದ ಒಂದು ವರ್ಷದಿಂದ ದೇಶಾದ್ಯಂತ ಅನ್ನದಾತರ ಭಾರೀ ಪ್ರತಿಭಟನೆಗೆ ಕಾರಣ ವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ರದ್ದು ಮಾಡುವುದಾಗಿ ಘೋಷಿಸಿ ದರು. ಬಳಿಕ ವಾಪಸ್‌ಗೆ ಕೇಂದ್ರ ಸಂಪುಟ ಅಸ್ತು, ಸಂಸತ್ ಅಧಿವೇಶನದ ಮೊದಲ ದಿನವೇ ಕೃಷಿ ಕಾಯ್ದೆ ರದ್ದು ಮಾಡಲಾಯಿತು. ಇಡೀ ಪ್ರತಿಭಟನೆಯಲ್ಲಿ ರಾಕೇಶ್ ಟಿಕಾಯತ್ ದೊಡ್ಡ ನಾಯಕನಾಗಿ ಬೆಳೆದರು.
ಡಿಸೆಂಬರ್ :
ಅಜಾಜ್‌ಗೆ ಹತ್ತಕ್ಕೆ ಹತ್ತು :
ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 325 ರನ್‌ಗಳಿಗೆ ಸರ್ವಪತನ ಕಂಡಿತ್ತು. ಟೀಂ ಇಂಡಿಯಾದ ಎಲ್ಲ 10 ವಿಕೆಟ್‌ಗಳನ್ನು ಕಿವೀಸ್ ಸ್ಪಿನ್ನರ್ ಅಜಾಜ್ ಪಟೇಲ್ ಒಬ್ಬರೇ ಕಬಳಿಸಿ ದಾಖಲೆ ಬರೆದರು. ಅಜಾಜ್ ಎಸೆದ 47.5 ಓವರ್‌ನಲ್ಲಿ 119 ರನ್ ನೀಡಿ 10 ವಿಕೆಟ್ ಪಡೆದು ದಾಖಲೆ ಬರೆದರು.
ಹಿರಿಯ ನಟ ಶಿವರಾಮ್ ಇನ್ನಿಲ್ಲ :
ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಮ್ ಅವರು ಇಹಲೋಕ ತ್ಯಜಿಸಿದ್ದು ಅವರಿಗೆ 84 ವರ್ಷ ವಯಸ್ಸಾಗಿತ್ತು. ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ನಡೆಸುತ್ತಿದ್ದ ವೇಳೆ ಪೂಜೆ ಮಾಡಲು ಹೋಗಿ ಶಿವರಾಮ್ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿತ್ತು. ವಯಸ್ಸಾದ ಕಾರಣ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ಚಿಕಿತ್ಸೆ ಫಲಿಸದೇ ಶಿವರಾಂ ಸಾವನ್ನಪ್ಪಿದ್ದರು.
ಹಸೆಮಣೆ ಏರಿದ ವಿಕ್ಕಿ-ಕ್ಯಾಟ್ :
ಮುಂಬಯಿ: ಬಾಲಿವುಡ್‌ನಲ್ಲಿ ಮದುವೆ ವಿಚಾರವಾಗಿ ಸಂಚಲನ ಮೂಡಿಸಿದ್ದ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಮದುವೆ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಪೋರ್ಟ್ ಹೊಟೇಲ್‌ನಲ್ಲಿ ವಿವಾಹ ನೆರವೇರಿದೆ. ಡಿ.9ರಂದು ಈ ಜೋಡಿ ಹಸೆಮಣೆ ಏರಿದ್ದ ನವ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು.
ಏಕದಿನ ನಾಯಕತ್ವದಿಂದ ಕೊಹ್ಲಿ ಔಟ್ :
ಹೊಸದಿಲ್ಲಿ: ಟೀಂ ಇಂಡಿಯಾದಲ್ಲಿ ಕೆಲವು ಕ್ರಾಂತಿಕಾರಿ ಬದಲಾವಣೆ ನಡೆದವು. ಏಕದಿನ ಕ್ರಿಕೆಟ್ ನಾಯಕತ್ವದಿಂದ ವಿರಾಟ್ ಕೊಹ್ಲಿ ಅವರನ್ನು ಹಠಾತ್ ಕೆಳಗಿಳಿಸಿರುವ ಬಿಸಿಸಿಐ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಗೆ ಈ ಜವಾಬ್ದಾರಿ ಹೊರಿಸಿತು. 2017ರ ಬಳಿಕ ಎಲ್ಲ ಮಾದರಿಯಲ್ಲಿ ಕೊಹ್ಲಿ ಭಾರತದ ತಂಡದ ನಾಯಕರಾಗಿದ್ದರು. ಕ್ರಿಕೆಟ್ ಪರಿಣಿತರ ಪ್ರಕಾರ ಇದೊಂದು ಮಾಸ್ಟರ್ ಸ್ಟ್ರೋಕ್. ಏಕೆಂದರೆ 2019ರ ಬಳಿಕ ಕೊಹ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಬಾರಿಸಿಲ್ಲ. ಒತ್ತಡಮುಕ್ತ ಮಾಡಲು ನಾಯಕತ್ವದ ಹೊರೆ ಕಡಿಮೆ ಮಾಡಿರುವುದು ಮಹತ್ವದ ನಿರ್ಧಾರ ಎಂದು ಹೇಳಲಾಗಿದೆ. ಹಾಗೆಯೇ, ಸೆ.17ರಂದೇ ವಿರಾಟ್ ಕೊಹ್ಲಿ ಟಿ20 ನಾಯಕತ್ವನನ್ನು ಬಿಡುವುದಾಗಿ ಘೋಷಿಸಿದ್ದರು. ಟಿ20 ವಿಶ್ವಕಪ್ ಬಳಿಕ ಅವರೇ ನಾಯಕತ್ವ ತೊರೆದರು.
ಸೇನಾನಿ ಯುಗಾಂತ್ಯ :
ತಮಿಳುನಾಡಿನಲ್ಲಿ ಸಂಭವಿಸಿದ ಐಎಎಫ್ ಹೆಲಿಕಾಪ್ಟರ್ ದುರಂತದಲ್ಲಿ ಮೂರು ರಕ್ಷಣ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮೃತಪಟ್ಟರು. ತಮಿಳುನಾ ಡಿನ ಕನೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ 13 ಮಂದಿಯಲ್ಲಿ ಜ| ಬಿಪಿನ್ ರಾವತ್ ಅವರು ಸೇರಿದ್ದಾರೆ. 4 ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಜನರಲ್ ಬಿಪಿನ್ ರಾವತ್ ಯುಗಾಂತ್ಯವಾಗಿದೆ.
ವಿಶ್ವನಾಥ ಧಾಮ ಸನಾತನ ಸಂಸ್ಕೃತಿಯ ಪ್ರತಿರೂಪ :
ಕಾಶಿ ಕಾರಿಡಾರ್ ಯೋಜನೆಯ ಮೊದಲ ಹಂತದ ಕಾಮಗಾರಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವನಾಥ ಧಾಮ ಬೃಹತ್ ಕಟ್ಟಡ ಮಾತ್ರವಲ್ಲ, ಅದು ನಮ್ಮ ಸನಾತನ ಸಂಸ್ಕೃತಿಯ ಪ್ರತಿರೂಪ ಎಂದರು. ಇಚ್ಛಾಶಕ್ತಿ ಇದ್ದರೇ ನಾವು ಏನನ್ನಾದರೂ ಸಾಧಿಸಬಹುದು ಎಂಬುದನ್ನು ಈ ಯೋಜನೆ ತೋರಿಸಿಕೊಟ್ಟಿದೆ ಎಂದರು.
ಪರಿಷತ್ ಚುನಾವಣೆ ಕಮಲ, ಕೈ ಸಮಬಲ :
ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿ.10ರಂದು ನಡೆದ ಚುನಾವಣೆ ನಡೆದಿತ್ತು. ಡಿ.14ರಂದು ಫಲಿತಾಂಶ ಪ್ರಕಟವಾಗಿ, ಬಿಜೆಪಿ 11 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ 2 ಸ್ಥಾನಕ್ಕಷ್ಟೇ ಸೀಮಿತವಾಯಿತು. ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿ ಬಿಜೆಪಿಗೆ ಶಾಕ್ ನೀಡಿದರು.
ಭೂತಾನ್ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ :
ಭೂತಾನ್‌ನ ಪ್ರಧಾನ ಮಂತ್ರಿ ಕಚೇರಿಯ ಫೇಸ್‌ಬುಕ್ ಪೋಸ್ಟ್ ನಲ್ಲಿ ಅತ್ಯುತ್ತಮ ನಾಗರಿಕ ಅಲಂಕಾರಕ್ಕಾಗಿ ನಿಮ್ಮ ಘನೆತೆವೆತ್ತ ಮೋದಿಜಿಯವರ ಹೆಸರನ್ನು ಹಿಸ್ ಮೆಜೆಸ್ಟಿ ಉಚ್ಚರಿಸುವುದನ್ನು ಕೇಳಲು ತುಂಬಾ ಸಂತೋಷವಾಗಿದೆ ಎಂದು ಪೋಸ್ಟ್ ಮಾಡಿದೆ. ಮೋದಿ ನ್ಗಾಡಾಗ್ ಪೆಲ್‌ಗಿ ಖೋರ್ಲೋಗೆ ಭಾಜನರಾಗಿದ್ದು ಶುಕ್ರವಾರ ಭೂತಾನ್ ಪ್ರಧಾನಿ ಲೋಟೆ ತೈರಿಂಗ್ ಪ್ರದಾನ ಮಾಡಿದರು.
ಮತಾಂತರ ನಿಷೇಧ ಮಸೂದೆ ಅಂಗೀಕಾರ :
ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ಮಸೂದೆಯು ಸುವರ್ಣ ವಿಧಾನಸಭೆಯಲ್ಲಿ ಗುರುವಾರ ಧ್ವನಿಮತದ ಮೂಲಕ ಅಂಗೀಕಾರಗೊಂಡಿತು. ಇದು ವಿಧಾನಪರಿಷತ್‌ನಲ್ಲಿ ಅಂಗೀಕಾರಗೊಂಡರೆ ಬಲವಂತದ ಮತಾಂತರ ಮಾಡುವಂತಿಲ್ಲ.