Advertisement

ಪೊಲೀಸ್‌ ಹುದ್ದೆಗಳ ಭರ್ತಿಗೆ ವರ್ಷಾಂತ್ಯದ ಗಡುವು

01:17 AM Jul 20, 2019 | Lakshmi GovindaRaj |

ಬೆಂಗಳೂರು: ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 16,838 ಹುದ್ದೆಗಳನ್ನು ಈ ವರ್ಷಾಂತ್ಯದೊಳಗೆ ಭರ್ತಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಶುಕ್ರವಾರ ಆದೇಶ ಮಾಡಿದೆ.

Advertisement

ಈ ಕುರಿತು ಸುಪ್ರೀಂಕೋರ್ಟ್‌ ಆದೇಶದಂತೆ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾ.ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯನ ನ್ಯಾಯಪೀಠ, ಈ ಆದೇಶ ನೀಡಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಒದಗಿಸಿದ ಮಾಹಿತಿ ಗಮನಿಸಿದ ನ್ಯಾಯಪೀಠ, ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕಾಲಮಿತಿ ನಿಗದಿಪಡಿಸಿತು. ಅಲ್ಲದೇ ರಾಜ್ಯದ ಹಾಲಿ ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಪೊಲೀಸ್‌ ಹುದ್ದೆಗಳ ಅವಶ್ಯಕತೆಯಿದೆ ಎಂದು ಅಧ್ಯಯನ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತು.

ಇದಕ್ಕೂ ಮೊದಲು ಸರ್ಕಾರದ ಪರ “ಜ್ಞಾಪನಾ ಪತ್ರ’ (ಮೆಮೋ) ಸಲ್ಲಿಸಿದ ವಕೀಲ ಡಿ.ನಾಗರಾಜ್‌, ಗೃಹ ಇಲಾಖೆ ಒದಗಿಸಿರುವ ಮಾಹಿತಿ ಪ್ರಕಾರ ರಾಜ್ಯದ ಪೊಲೀಸ್‌ ಇಲಾಖೆಯಲ್ಲಿ ಒಟ್ಟು 65,214 ಮಂಜೂರಾದ ಹುದ್ದೆಗಳಿವೆ. ಆ ಪೈಕಿ 48,376 ಹುದ್ದೆಗಳು ಭರ್ತಿಯಾಗಿದ್ದು, ಇನ್ನೂ 16,838 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಲ್ಲಿ 9,146 ಪೊಲೀಸ್‌ ಕಾನ್ಸಟೇಬಲ್‌ ಶ್ರೇಣಿಯ ಹುದ್ದೆಗಳಿವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಲ್ಲದೆ, 2014-15ರಿಂದ 2017-18ನೇ ಸಾಲಿನವರೆಗೆ 1,676 ಸಬ್‌ ಇನ್ಸ್‌ಪೆಕ್ಟರ್‌ ಮತ್ತು 30,117 ಪೊಲೀಸ್‌ ಪೇದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಜೊತೆಗೆ, 2018-19ನೇ ಸಾಲಿನಲ್ಲಿ 346 ಪಿಎಸ್‌ಐ ಮತ್ತು 5,185 ಪೊಲೀಸ್‌ ಪೇದೆಗಳ ಭರ್ತಿ ಪ್ರಕ್ರಿಯೆ ನಡೆದಿದೆ. ಸರ್ಕಾರ ಹೆಚ್ಚುವರಿಯಾಗಿ 877 ಪಿಎಸ್‌ಐ ಮತ್ತು 8,000 ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳನ್ನು ಸೃಷ್ಟಿ ಮಾಡಿದೆ ಎಂದು ಮಾಹಿತಿ ನೀಡಿದರು.

Advertisement

ಈಗ ಖಾಲಿ ಇರುವ ಹುದ್ದೆಗಳನ್ನು ಮತ್ತು 2018-22ರ ಅವಧಿಯಲ್ಲಿ ನಿವೃತ್ತರಾಗಲಿರುವವರ ಹುದ್ದೆಗಳನ್ನು ಗಮನಿಸಿ 1,223 ಸಬ್‌ ಇನ್ಸ್‌ಪೆಕ್ಟರ್‌ ಮತ್ತು 13,185 ಪೊಲೀಸ್‌ ಕಾನ್ಸಟೇಬಲ್‌ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ ಎಂದು ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next